ಸಂವಿಧಾನದ ವಿರುದ್ಧವಾಗಿ ಅನಂತ ಕುಮಾರ್ ಹೆಗಡೆ ಈ ಹಿಂದೆಯೂ ಹೇಳಿಕೆ ನೀಡಿದ್ದರು. ಮತ್ತೆ ಪುನರುಚ್ಚಾರ ಮಾಡಿದ್ದಾರೆ. ಇದಕ್ಕಿಂತ ದೊಡ್ಡ ದೇಶದ್ರೋಹದ ಮಾತು ಇನ್ನೊಂದಿಲ್ಲ. ಕೇವಲ ಪ್ರಧಾನಿಯನ್ನು ಟೀಕಿಸಿದರೆ ಕೇಸ್ ಹಾಕ್ತಾರೆ, ಈ ಪ್ರಕರಣದಲ್ಲಿ ಯಾಕೆ ಸಂಸದರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಹರೀಶ್ ಕುಮಾರ್
ಮಂಗಳೂರು(ಮಾ.15): ದೇಶದ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಬೇಕು. ಅಲ್ಲದೆ, ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ವಿರುದ್ಧವಾಗಿ ಅನಂತ ಕುಮಾರ್ ಹೆಗಡೆ ಈ ಹಿಂದೆಯೂ ಹೇಳಿಕೆ ನೀಡಿದ್ದರು. ಮತ್ತೆ ಪುನರುಚ್ಚಾರ ಮಾಡಿದ್ದಾರೆ. ಇದಕ್ಕಿಂತ ದೊಡ್ಡ ದೇಶದ್ರೋಹದ ಮಾತು ಇನ್ನೊಂದಿಲ್ಲ. ಕೇವಲ ಪ್ರಧಾನಿಯನ್ನು ಟೀಕಿಸಿದರೆ ಕೇಸ್ ಹಾಕ್ತಾರೆ, ಈ ಪ್ರಕರಣದಲ್ಲಿ ಯಾಕೆ ಸಂಸದರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಾಗ ಸಂವಿಧಾನ ರಕ್ಷಣೆ ಮಾಡುವುದಾಗಿ ಪ್ರಮಾಣ ಮಾಡಿದ್ದನ್ನೇ ಅನಂತ ಹೆಗಡೆ ಮರೆತಿದ್ದಾರೆ. ಸಂವಿಧಾನ ವಿರೋಧಿ ಹೇಳಿಕೆಯನ್ನು ಮತ್ತೆ ಮತ್ತೆ ಪುನರುಚ್ಚರಿಸುತ್ತಾರೆ ಎಂದರೆ ಇದು ಭಾರತೀಯ ಜನತಾ ಪಕ್ಷದ ಹಿಡನ್ ಅಜೆಂಡಾ ಆಗಿದೆ. ಬಿಜೆಪಿ ತನ್ನ ಹಿಡನ್ ಅಜೆಂಡಾವನ್ನು ಅನಂತ ಹೆಗಡೆಯ ಮೂಲಕ ಹೇಳಿಸಿದೆ ಎಂದು ಹರೀಶ್ ಕುಮಾರ್ ಆರೋಪಿಸಿದರು.
ಬಿಜೆಪಿ ವಾಶಿಂಗ್ ಮೆಶಿನ್:
ಬಿಜೆಪಿ ಐಟಿ, ಇಡಿ ಮುಂದಿಟ್ಟುಕೊಂಡು ಸರ್ಕಾರ ನಡೆಸುತ್ತಿದೆ. ಭ್ರಷ್ಟಾಚಾರ ಮಾಡುವವರು ಯಾವ ಪಕ್ಷದಲ್ಲೇ ಇರಲಿ, ಅವರು ಬಿಜೆಪಿ ಸೇರಿದ ಕೂಡಲೆ ಭ್ರಷ್ಟ ಮುಕ್ತ ಆಗ್ತಾರೆ. ಬಿಜೆಪಿ ಒಂಥರಾ ವಾಷಿಂಗ್ ಮೆಷಿನ್ ಇದ್ದ ಹಾಗೆ ಎಂದು ಟೀಕಿಸಿದರು.
ಯಾವುದೇ ಪಕ್ಷಕ್ಕೆ ಒಬ್ಬ ವ್ಯಕ್ತಿ 2 ಸಾವಿರ ರು.ಗಿಂತ ಅಧಿಕ ನಗದು ದೇಣಿಗೆ ಕೊಡುವಂತಿರಲಿಲ್ಲ. ಆದರೆ ಎಷ್ಟು ಕೋಟಿ ದೇಣಿಗೆಯನ್ನಾದರೂ ಕೊಡಬಹುದು ಎನ್ನುವ ನಿಯಮ ಮಾಡಿದ್ದು ಬಿಜೆಪಿ ಸರ್ಕಾರ. ಇದೀಗ ಸುಪ್ರೀಂ ಕೋರ್ಟ್ ಕೂಡ ಬಿಜೆಪಿಗೆ ಚಾಟಿ ಬೀಸಿದ್ದು, ಅವರ ಭ್ರಷ್ಟಾಚಾರ ಬಯಲಾಗಿದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಪ್ರಕಾಶ್ ಸಾಲ್ಯಾನ್, ಪ್ರವೀಣ್‌ಚಂದ್ರ ಆಳ್ವ, ನವೀನ್ ಡಿಸೋಜ ಇದ್ದರು.