ಸಿಎಂ ಕುರ್ಚಿಗಾಗಿ ಸಿದ್ದು-ಡಿಕೆಶಿ ಬಡಿದಾಟ: ವಿಜಯೇಂದ್ರ

By Kannadaprabha News  |  First Published Dec 6, 2024, 6:30 AM IST

ಮುಖ್ಯಮಂತ್ರಿ ಸ್ಥಾನಕ್ಕೆ ಒಳ ಒಪ್ಪಂದ ಆಗಿದೆ, ಈಗ ಮಾತನಾಡಲ್ಲ ಎಂದು ಹೇಳಿದ್ದೇ ಡಿಕೆಶಿ. ಅವರಿಗೆ ಸಿಎಂ ಆಗಬೇಕೆಂಬ ಹಠ ಇದೆ. ಆದರೆ, ಶಾಸಕರ ಬಲವಿಲ್ಲ. ಹೇಗಾದರೂ ಮಾಡಿ ಸಿದ್ದರಾಮಯ್ಯನವರ ಮನಸ್ಸು ಗೆಲ್ಲಲು ಪ್ರಯತ್ನ ನಡೆಸಿದ್ದಾರೆ ಎಂದು ತಿವಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ, ವಿಜಯೇಂದ್ರ 


ಲಿಂಗಸುಗೂರು/ಶಹಾಪುರ(ಡಿ.06): ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಒಳ ಒಳಗೆ ಬೇಗುದಿ ಇದೆ. ಅದು ಯಾವ ಹಂತಕ್ಕೆ ತಲುಪುತ್ತದೆ ಎಂಬುದು ಮುಂಬರುವ ದಿನಗಳಲ್ಲಿ ಹೊರಗೆ ಬರುತ್ತದೆ. ಬೆಳಗಾವಿ ಅಧಿವೇಶನ ಮುಗಿದ ಬಳಿಕ ಪರಿಸ್ಥಿತಿ ಬಿಗಡಾಯಿಸಲಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ 8-10 ಜನ ರೇಸ್‌ನಲ್ಲಿ ಇದ್ದಾರೆ. ಆದರೆ, ಸಿಎಂ ಕುರ್ಚಿ ಇರುವುದು ಒಂದೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ, ವಿಜಯೇಂದ್ರ ಹೇಳಿದರು. 

ಯಾದಗಿರಿ ಜಿಲ್ಲೆ ಶಹಾಪುರ ಹಾಗೂ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಗುರುವಾರ ವಕ್ಫ್‌ ಜನಾಂದೋಲನದಲ್ಲಿ ಪಾಲ್ಗೊಂಡು ಮಾತನಾಡಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಒಳ ಒಪ್ಪಂದ ಆಗಿದೆ, ಈಗ ಮಾತನಾಡಲ್ಲ ಎಂದು ಹೇಳಿದ್ದೇ ಡಿಕೆಶಿ. ಅವರಿಗೆ ಸಿಎಂ ಆಗಬೇಕೆಂಬ ಹಠ ಇದೆ. ಆದರೆ, ಶಾಸಕರ ಬಲವಿಲ್ಲ. ಹೇಗಾದರೂ ಮಾಡಿ ಸಿದ್ದರಾಮಯ್ಯನವರ ಮನಸ್ಸು ಗೆಲ್ಲಲು ಪ್ರಯತ್ನ ನಡೆಸಿದ್ದಾರೆ ಎಂದು ತಿವಿದರು. 

Tap to resize

Latest Videos

ಸಾಯೋವರೆಗೂ ಸಿದ್ದರಾಮಯ್ಯ ಜೊತೆ ನಿಲ್ಲುತ್ತೇನೆ: ಜನಕಲ್ಯಾಣ ಸಮಾವೇಶದಲ್ಲಿ ಡಿಕೆಶಿ ಶಪಥ!

ಇದೇ ವೇಳೆ, ಕಾಂಗ್ರೆಸ್ ವಿರುದ್ದ ಹರಿಹಾಯ್ದ ವಿಜಯೇಂದ್ರ, ಒಂದು ಸಮುದಾಯದ ಓಲೈಕೆಗಾಗಿ ರೈತರ ಕಣ್ಣಲ್ಲಿ ನೀರು ಬರುವಂತೆ ಮಾಡುವುದು ಸರಿಯಲ್ಲ. ಅಧಿಕಾರದ ಮದದಿಂದ ರೈತರ ಕಣ್ಣಲ್ಲಿ ನೀರು ಬಂದರೆ ಸರ್ಕಾರಕ್ಕೆ ಶಾಪ ತಟ್ಟದೆ ಇರುತ್ತಾ ಎಂದು ವಾಗ್ದಾಳಿ ನಡೆಸಿದರು.

ರೈತರು, ದೇವಸ್ಥಾನ, ಮಠ-ಮಾನ್ಯಗಳ ಜಮೀನುಗಳ ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾಗಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಅವರ ಕುಮ್ಮಕ್ಕು ಇದೆ. ಯಾವುದೇ ಜನಪರ ಹೋರಾಟ ಮಾಡದೆ ಅದೃಷ್ಟದ ಆಟದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾರೆ. ಅಲ್ಪಸಂಖ್ಯಾತರ ತುಷ್ಠಿಕರಣ ಮಾಡಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳಿಗೆ ರಾತೋರಾತ್ರಿ ಪ್ರಭಾವ ಬೀರಿ ಸಾವಿರಾರು ವರ್ಷಗಳ ಇತಿಹಾಸ ಇರುವ ದೇವಸ್ಥಾನ, ಮಠ-ಮಂದಿರ, ರೈತರ ಜಮೀನುಗಳ ಪಹಣಿ ದಾಖಲೆಯಲ್ಲಿ ವಕ್ಫ್‌ ಹೆಸರು ನಮೂದು ಮಾಡಿದ್ದಾರೆ ಎಂದರು. 

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರಬಹುದು. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ವಕ್ಫ್‌ ನೋಟಿಸ್ ನೀಡಿರುವುದರ ಪರಿಣಾಮ ಉಂಟಾಗುತ್ತದೆ. ರೈತರಿಗೆ ನೋಟಿಸ್ ನೀಡಿರುವ ಈ ಸರ್ಕಾರದ ಪಾಪದ ಕೊಡ ತುಂಬಿದೆ. ರೈತ ವಿರೋಧಿ ಸರ್ಕಾರ ಮುಂದಿನ ದಿನಗಳಲ್ಲಿ ನೆಲಕಚ್ಚಲಿದೆ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು. 

ಗೊಂದಲ ಇರುವುದು ನಿಜ: 

ಬಿಜೆಪಿಯಲ್ಲಿನ ಬಣಗಳ ಕುರಿತು ರಾಜ್ಯದ ಜನರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಇರುವುದು ಸತ್ಯ. ಪಕ್ಷದಲ್ಲಿನ ಗೊಂದಲವನ್ನು ಕೇಂದ್ರದ ವರಿಷ್ಠ ನಾಯಕರು ಬಗೆಹರಿಸುತ್ತಾರೆ ಎಂದು ಹೇಳಿದರು.

4 ಜಿಲ್ಲೆಗಳಲ್ಲಿ ಬಿಜೆಪಿ ವಕ್ಫ್‌ ಜನಾಂದೋಲನ

ಬೆಂಗಳೂರು: ವಕ್ಫ್‌ ವಿರುದ್ಧದ ಬಿಜೆಪಿ ಜನಾಂದೋಲನ 2ನೇ ದಿನವೂ ಮುಂದು ವರಿಯಿತು. ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ತಂಡ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಜನಾಂದೋಲನ ನಡೆಸಿತು. 

ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ

ಇದೇ ವೇಳೆ, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ವಕ್ಫ್‌ ವಿರುದ್ಧ ಹೋರಾಟ ನಡೆಸಿತು. ಯಾದಗಿರಿ ಜಿಲ್ಲೆ ಶಹಾಪುರ, ರಾಯ ಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ವಿಜಯೇಂದ್ರ ತಂಡ ಪ್ರತಿಭಟನಾ ರ್ಯಾಲಿ ನಡೆಸಿತು. 

ಗಂಗಾವತಿ ಶಾಸಕ ಜೆ. ಜನಾರ್ದನರೆಡ್ಡಿ, ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹಾಗೂ ಇತರರು ಜತೆಯಲ್ಲಿದ್ದರು. ಈ ಮಧ್ಯೆ, ಛಲವಾದಿ ನೇತೃತ್ವದ ತಂಡ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಭಾನುವಳ್ಳಿ ಗ್ರಾಮಕ್ಕೆ ಭೇಟಿ ನೀಡಿತು. ಅಲ್ಲಿ 1 ಎಕರೆ ಖಬರಸ್ತಾನದ ಜೊತೆಗೆ 4.20 ಎಕರೆ ಹಾಗೂ ಪಕ್ಕದ 2 ಎಕರೆ ಜಾಗವೂ ಸೇರಿದಂತೆ ಒಟ್ಟು ಆರೂ ಮುಕ್ಕಾಲು ಎಕರೆ ಜಾಗ ವಕ್ಫ್‌ ಆಸ್ತಿಗೆ ಸೇರಿರುವ ಜಾಗಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿತು. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಬಿ.ಸಿ.ಪಾಟೀಲ ಇತರರು ಅವರಿಗೆ ಸಾಥ್ ನೀಡಿದರು. ಬಳಿಕ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಗೆ ಭೇಟಿ ನೀಡಿ, ವಕ್ಫ್‌ ವಿವಾದವಾಗಿರುವ ಚರ್ಮದ ಮಂಡಿ, ಕುಲುಮೆ ರಸ್ತೆಯ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

click me!