
ಜೈಪುರ(ಜೂ.12): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಕತ್ತಿ ಮಸೆಯುತ್ತಿರುವ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಅವರು ಭಾನುವಾರ ಹೊಸ ಪಕ್ಷ ಸ್ಥಾಪನೆ ಮಾಡಲಿದ್ದಾರೆ ಎಂಬ ವರದಿಗಳು ಹುಸಿಯಾಗಿವೆ. ತಂದೆಯ ಪುಣ್ಯಸ್ಮರಣೆ ವೇಳೆ ಮಾತನಾಡಿದ ಅವರು, ‘ಭ್ರಷ್ಟಾಚಾರದ ವಿರುದ್ಧದ ಹೋರಾಟ ನಿಲ್ಲಲ್ಲ. ನನ್ನ ಬೇಡಿಕೆಗಳು ಈಡೇರುವವರೆಗೆ ನಾನು ಹಿಂದಡಿ ಇಡುವುದಿಲ್ಲ ಹಾಗೂ ಸ್ವಚ್ಛ ರಾಜಕೀಯವೇ ನನ್ನ ಆದ್ಯತೆ’ ಎಂದಿದ್ದಾರೆ.
ತಂದೆ ರಾಜೇಶ್ ಪೈಲಟ್ ಅವರ ಪುಣ್ಯಸ್ಮರಣೆ ನಿಮಿತ್ತ ಅವರ ಪುತ್ಥಳಿಯೊಂದನ್ನು ಅನಾವರಣ ಮಾಡಿದ ಪೈಲಟ್, ‘ಯವಕರ ಉತ್ತಮ ಭವಿಷ್ಯಕ್ಕಾಗಿ ನಾನು ಹೋರಾಡುವೆ. ದೇಶಕ್ಕೆ ಇಂದು ಯುವಕರ ರಾಜಕೀಯ ಬೇಕಿದೆ’ ಎಂದರು. ಈ ಮೂಲಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಹುದ್ದೆಯ ಮೇಲೆ ತಮಗೆ ಕಣ್ಣಿದೆ ಎಂದು ಪರೋಕ್ಷವಾಗಿ ನುಡಿದರು
ಕರ್ನಾಟಕದಲ್ಲಿ ಸುಭದ್ರ ಸರ್ಕಾರ ರಚನೆ ಬೆನ್ನಲ್ಲೇ ಅಲುಗಾಡುತ್ತಿದೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ!
ಇದೇ ವೇಳೆ, ‘ನನ್ನ ದನಿ ದುರ್ಬಲ ಆಗಿಲ್ಲ. ನಾನು ಹಿಂದಡಿ ಇಡಲ್ಲ. ಸ್ವಚ್ಛ ರಾಜಕೀಯವೇ ನನ್ನ ಆದ್ಯತೆ ಆಗಿದ್ದು, ಬೇಡಿಕೆ ಈಡೇರುವವರಗೆ ನಾನು ಸುಮ್ಮನಿರುವುದಿಲ್ಲ’ ಎಂದರು. ಈ ಮೂಲಕ ಹಿಂದಿನ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಯಬೇಕು ಎಂಬ ತಮ್ಮ ಹಿಂದಿನ ಬೇಡಿಕೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದರು.
ಇತ್ತೀಚೆಗೆ, ಪೈಲಟ್ ತಂದೆಯ ಪುಣ್ಯಸ್ಮರಣೆ ದಿನವಾದ ಜ.11ರಂದು ಹೊಸ ಪಕ್ಷ ಕಟ್ಟಲಿದ್ದಾರೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ವರಿಷ್ಠರು ತಮ್ಮ ದೂತರನ್ನು ಕಳಿಸಿ ಸಚಿನ್ ಪೈಲಟ್ ಹಾಗೂ ಅವರ ಬಣ ನಾಯಕರನ್ನು ಸಮಾಧಾನ ಮಾಡಲು ಯತ್ನಿಸಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ‘ಪೈಲಟ್ ಕಾಂಗ್ರೆಸ್ ಬಿಡಲ್ಲ. ಹೊಸ ಪಕ್ಷ ಸ್ಥಾಪನೆ ಕೇವಲ ವದಂತಿ’ ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.