ಶುದ್ಧ ಚಾರಿತ್ರ‍್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಡಾ ಹೆಸರಿನಲ್ಲಿ ಬಿಜೆಪಿಗರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಆರ್. ಶಂಕರ್ ಕಿಡಿಕಾರಿದರು.
ರಾಣಿಬೆನ್ನೂರು (ಆ.02): ಶುದ್ಧ ಚಾರಿತ್ರ‍್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಡಾ ಹೆಸರಿನಲ್ಲಿ ಬಿಜೆಪಿಗರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಆರ್. ಶಂಕರ್ ಕಿಡಿಕಾರಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡಿ ದುರ್ಬಳಕೆ ಮಾಡಿಕೊಂಡು ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ನಡೆಸುತ್ತಿದ್ದಾರೆ. ಬಿಜೆಪಿಗರು ಇತ್ತೀಚಿಗೆ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಕುರುಬ ಸಮಾಜದ ಯಾವುದೇ ವ್ಯಕ್ತಿಗೆ ಟಿಕೆಟ್ ನೀಡಿರಲಿಲ್ಲ. ಇದೀಗ ಕುರುಬ ಸಮಾಜಕ್ಕೆ ಸೇರಿರುವ ಸಿದ್ದರಾಮಯ್ಯ ಅವರನ್ನು ಕುತಂತ್ರದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಸರ್ಕಾರ ವಾಲ್ಮೀಕಿ ಹಗರಣವನ್ನು ಒಪ್ಪಿಕೊಂಡಿದ್ದು, ಅದಕ್ಕೆ ಸಂಬಂಧಿಸಿದಂತೆ ಸಚಿವರ ರಾಜೀನಾಮೆ ಪಡೆದಿದೆ ಹಾಗೂ ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಿದೆ. ಮುಡಾ ಹಗರಣ 20 ವರ್ಷಗಳ ಹಿಂದಿನ ಸಾಮಾನ್ಯ ವಿಷಯವಾಗಿದೆ. ಮೇಲಾಗಿ ನಿವೇಶನಗಳ ಹಂಚಿಕೆಯನ್ನು ರೂಪಿಸಿದ್ದು ಹಿಂದಿನ ಬಿಜೆಪಿ ಸರ್ಕಾರವೇ ಆಗಿದೆ. ಸಿದ್ದರಾಮಯ್ಯ ಪತ್ನಿಯ ಸಹೋದರ ತಮ್ಮ ಸಹೋದರಿಗೆ ಅರಿಷಿಣ ಕುಂಕುಮ ರೂಪದಲ್ಲಿ ಆಸ್ತಿ ಕೊಟ್ಟಿದ್ದಾರೆ. ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದ ಬಿಜೆಪಿಗರು ಹೇಗಾದರೂ ಮಾಡಿ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ಯತ್ನಿಸುತ್ತಿದ್ದಾರೆ.
ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಕುರುಬ ಸಮಾಜ ಹಾಗೂ ಅಹಿಂದ ಒಕ್ಕೂಟದ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ರಾಜ್ಯ ಕುರುಬ ಸಂಘದ ಕಾರ್ಯದರ್ಶಿ ಮೃತ್ಯುಂಜಯ ಗುದಿಗೇರ ಮಾತನಾಡಿ, ಸಿದ್ದರಾಮಯ್ಯ ಸಮಸ್ತ ಕರ್ನಾಟಕದ ಜನಪ್ರಿಯ ರಾಜಕಾರಣಿಯಾಗಿದ್ದಾರೆ. ಇದನ್ನು ಸಹಿಸದ ಬಿಜೆಪಿಗರು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ರೀತಿ ಜೈಲಿಗೆ ಕಳುಹಿಸಿ, ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಹುನ್ನಾರ ನಡೆಸುತ್ತಿದ್ದಾರೆ. ಮುಡಾ ವಿಷಯದಲ್ಲಿ ಅನಗತ್ಯವಾಗಿ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸಲು ಬಲೆ ಹೆಣೆಯುತ್ತಿದ್ದಾರೆ.
ಒಳ ಮೀಸಲಾತಿ: ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಜಯ: ಸಂಸದ ಗೋವಿಂದ ಕಾರಜೋಳ
ಹಾಗೆ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಕಷ್ಟು ಹಗರಣಗಳಾಗಿವೆ. ಅದನ್ನು ಕೈಬಿಟ್ಟು ಸಿಎಂ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದನ್ನು ಇದೇ ರೀತಿ ಮುಂದುವರಿಸಿದಲ್ಲಿ ನಮ್ಮ ಸಮಾಜ ಹಾಗೂ ಅಹಿಂದ ವರ್ಗಗಳ ಜತೆಗೂಡಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು. ತಾಲೂಕು ಕುರುಬ ಸಮಾಜದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ಶಿವಣ್ಣ ಮಣೇಗಾರ, ಬಸಣ್ಣ ಕಂಬಳಿ, ಮೂರ್ತೆಪ್ಪ ಕಂಬಳಿ, ಸಿದ್ದಪ್ಪ ಬಾಗಲವರ, ರವಿ ಹುಲಿಗೆಮ್ಮನವರ, ಚಂದ್ರಣ್ಣ ಕಂಬಳಿ, ಭರಮಪ್ಪ ಬಾಗಲವರ ಸುದ್ದಿಗೋಷ್ಠಿಯಲ್ಲಿದ್ದರು.