ಸಿಎಂ ಕೆಳಗಿಳಿಸಲು ಬಿಜೆಪಿ ಷಡ್ಯಂತ್ರ: ಪ್ರಜಾಪ್ರಭುತ್ವದ ಕಗ್ಗೊಲೆಗೆ ನಾವು ಬಿಡಲ್ಲ, ಡಿಕೆಶಿ

By Kannadaprabha NewsFirst Published Aug 2, 2024, 6:00 AM IST
Highlights

ಕೇಂದ್ರ ಸರ್ಕಾರವು ಸಂವಿಧಾನಕ್ಕೆ ಮಾರಕ ಹಾಗೂ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ಸ್ಥಿತಿಯನ್ನು ರಾಜ್ಯದಲ್ಲಿ ನಿರ್ಮಾಣ ಮಾಡುತ್ತಿದೆ. ಆರು ಕೋಟಿ ಕನ್ನಡಿಗರ ಆಶೀರ್ವಾದದಿಂದ 136 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಕಗ್ಗೊಲೆ ಅಲ್ಲವೇ? ಎಂದು ಪ್ರಶ್ನಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 

ಬೆಂಗಳೂರು(ಆ.02):  ‘ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯಪಾಲರನ್ನು ಬಳಸಿಕೊಂಡು ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು ಹಾಗೂ 136 ಸ್ಥಾನ ಗೆದ್ದು ಜನಾಶೀರ್ವಾದದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಕೆಡವಲು ಮುಂದಾಗಿದೆ. ತನ್ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿರುವ ಕೇಂದ್ರದ ದುರುದ್ದೇಶ ಫಲಿಸಲು ಸಾಧ್ಯವೇ ಇಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಿಡಿ ಕಾರಿದ್ದಾರೆ.

ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವರ ಪರಿಷತ್‌ ಸುದೀರ್ಘ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯಪಾಲರ ನಡೆ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಕೇಂದ್ರ ಸರ್ಕಾರವು ಸಂವಿಧಾನಕ್ಕೆ ಮಾರಕ ಹಾಗೂ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ಸ್ಥಿತಿಯನ್ನು ರಾಜ್ಯದಲ್ಲಿ ನಿರ್ಮಾಣ ಮಾಡುತ್ತಿದೆ. ಆರು ಕೋಟಿ ಕನ್ನಡಿಗರ ಆಶೀರ್ವಾದದಿಂದ 136 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಕಗ್ಗೊಲೆ ಅಲ್ಲವೇ? ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.

Latest Videos

ಮುಡಾ ಅಕ್ರಮ: ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಕೋರಿ ರಾಜ್ಯಪಾಲರಿಗೆ ಅರ್ಜಿ

ಟಿ.ಜೆ.ಅಬ್ರಹಾಂ ಡಿ.ಕೆ.ಶಿವಕುಮಾರ್‌, ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಎಲ್ಲರ ಮೇಲೂ ಕೇಸು ಹಾಕಿದ್ದಾರೆ. ಅವುಗಳ ಅಂತಿಮ ತೀರ್ಪು ಏನಾಯಿತು? ಅಬ್ರಹಾಂ ಹಿನ್ನೆಲೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಸುಪ್ರೀಂಕೋರ್ಟ್‌ ಕೂಡ ಅವರಿಗೆ ದಂಡ ವಿಧಿಸಿದೆ. ಹೀಗಿದ್ದರೂ ಕ್ರಿಮಿನಲ್‌ ಹಿನ್ನೆಲೆಯುಳ್ಳ ಒಬ್ಬ ವ್ಯಕ್ತಿಯ ಅರ್ಜಿ ಮೇರೆಗೆ ಪ್ರಾಸಿಕ್ಯೂಷನ್‌ಗೆ ಯಾಕೆ ಅನುಮತಿ ಕೊಡಬಾರದು ಎಂದು ಪ್ರಶ್ನಿಸುವ ಹಾಗೂ ಏಳು ದಿನದಲ್ಲಿ ಉತ್ತರ ನೀಡಿ ಎಂದು ರಾಜ್ಯಪಾಲರು ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಿ ಮಾಡಿದ್ದಾರಾ? ಅಥವಾ ಎಲ್ಲಿಯಾದರೂ ಒಂದು ಅಕ್ಷರ ಬರೆದಿದ್ದಾರಾ? ಅಥವಾ ಅವರು ಮುಖ್ಯಮಂತ್ರಿಯಾಗಿದ್ದಾಗ ನಿವೇಶನ ಹಂಚಿಕೆ ಆಗಿದೆಯೇ? ಒಬ್ಬ ಮಹಿಳೆ ತಾನು ಕಳೆದುಕೊಂಡಿರುವ ಜಮೀನಿಗೆ ಪರಿಹಾರ ಪಡೆಯುವುದು ತಪ್ಪೇ? ಇವುಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತೆಗೆಯಲು ಹೋದರೆ ಅದು ಸಾಧ್ಯವೇ ಇಲ್ಲ ಎಂದು ಗುಡುಗಿದ್ದಾರೆ.

ಶೋಕಾಸ್‌ ನೋಟಿಸ್‌ ಹಿಂಪಡೆಯುತ್ತಾರೆ:

ರಾಜ್ಯಪಾಲರು ಶೋಕಾಸ್ ನೋಟಿಸ್‌ ಹಿಂಪಡೆಯಬೇಕು ಎಂದು ಸಚಿವರ ಪರಿಷತ್‌ ಸಭೆಯಲ್ಲಿ ನಿರ್ಧರಿಸಿ ನಿರ್ಣಯವನ್ನು ಇಂದೇ ರಾಜ್ಯಪಾಲರಿಗೆ ಕಳುಹಿಸುತ್ತಿದ್ದೇವೆ ಎಂದು ಹೇಳಿದರು. ನಿರ್ಣಯದ ಹೊರತಾಗಿಯೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ರಾಜ್ಯಪಾಲರು ಸಂವೇದನಾಶೀಲರಾಗಿದ್ದು, ಕಾನೂನು ಚೌಕಿಟ್ಟಿನಲ್ಲಿ ಅಷ್ಟು ಆತುರವಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸಿದ್ದೇವೆ ಎಂದು ಹೇಳಿದರು. ಬಹಳ ಲೆಕ್ಕಾಚಾರದಿಂದ ಹೆಜ್ಜೆ ಇಡಬೇಕಾಗುತ್ತದೆ. ಇಲ್ಲದಿದ್ದರೆ ರಾಜ್ಯಪಾಲರ ಘನತೆ ಹಾಳಾಗುತ್ತದೆ. ಅದನ್ನು ಅವರು ಹಾಳು ಮಾಡಿಕೊಳ್ಳುವುದಿಲ್ಲ’ ಎಂದು ಸೂಚ್ಯವಾಗಿ ತಿಳಿಸಿದರು.

ಎಲ್ಲಾ ಪ್ರಕರಣ ಪರಿಶೀಲಿಸಿ ನಿರ್ಣಯ:

ಶೋಕಾಸ್‌ ನೋಟಿಸ್‌ ಕುರಿತು ಬೇರೆ ರಾಜ್ಯಗಳಲ್ಲಿ ನಡೆದಿರುವ ಪ್ರಕರಣ, ಇತರೆ ಪ್ರಕರಣಗಳಲ್ಲಿ ನ್ಯಾಯಾಲಯದ ಮಾರ್ಗದರ್ಶನ ಹಾಗೂ ತೀರ್ಪು, ಇಂತಹ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳಲ್ಲಿ ಯಾವ ಸರ್ಕಾರಗಳು ಯಾವ ರೀತಿ ನಡೆದುಕೊಂಡಿವೆ ಎಂದು ಚರ್ಚೆ ಮಾಡಿದ್ದೇವೆ.

ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಂದ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಾಗಲಿ, ತನಿಖಾ ಸಂಸ್ಥೆಗಳ ವಿಚಾರಣೆಯಾಗಲಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ವಿಚಾರಣೆ ನಡೆಸಲು ಹೇಗೆ ಸಾಧ್ಯ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುದೊಡ್ಡ ಬಹುಮತದೊಂದಿಗೆ ಆಯ್ಕೆಯಾದ ರಾಜ್ಯದ ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು ಷಡ್ಯಂತ್ರ ನಡೆಯುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಶೋಕಾಸ್‌ ನೋಟಿಸ್‌ ಹಿಂಡೆಪಯುವಂತೆ ಸಲಹೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಜಮೀನನ್ನು ಮುಡಾ ಅವರು ಅಕ್ರಮವಾಗಿ ನಿವೇಶನ ಮಾಡಿ ಹಂಚಿಕೆ ಮಾಡಿದ್ದಾರೆ. ನಿವೇಶನ ಹಿಂಪಡೆಯಲು ನಿಯಮಗಳಲ್ಲಿ ಅವಕಾಶವಿಲ್ಲ. ಹೀಗಾಗಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದಾಗ ಮುಡಾ ತಮ್ಮ ತಪ್ಪು ಒಪ್ಪಿಕೊಂಡು 50:50 ಅನುಪಾತದಲ್ಲಿ ಪರಿಹಾರ ನೀಡಲು ತೀರ್ಮಾನಿಸಿದೆ.

ಇದು ಬಿಜೆಪಿ ನಿರ್ಧಾರ:

ಮುಡಾ ಈ ತೀರ್ಮಾನ ಮಾಡಿದಾಗ ಮುಡಾದಲ್ಲಿ ಕಾಂಗ್ರೆಸ್ ಪಕ್ಷದ ಒಂದಿಬ್ಬರು ಸದಸ್ಯರ ಹೊರತಾಗಿ ಉಳಿದಂತೆ ಜಿ.ಟಿ ದೇವೇಗೌಡ, ರಾಮದಾಸ್ ಅವರು ಸೇರಿ ಎಲ್ಲಾ ಸದಸ್ಯರು ವಿರೋಧ ಪಕ್ಷದವರಾಗಿದ್ದರು. ಇದೆಲ್ಲವೂ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ನಡೆದಿರುವ ಪ್ರಕ್ರಿಯೆ. ಆಗ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಲಿಲ್ಲ. ಇದರಲ್ಲಿ ಅವರ ತಪ್ಪೇನಿದೆ? ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಸಹಿ ಹಾಕಿದ್ದಾರಾ? ಅಥವಾ ಯಾರ ಮೇಲಾದರೂ ಒತ್ತಡ ಹಾಕಿದ್ದಾರಾ? ಪಾರ್ವತಮ್ಮ ತಮ್ಮ ಜಮೀನು ಕಳೆದುಕೊಂಡಿದ್ದಕ್ಕೆ ಪರಿಹಾರ ಪಡೆಯುವ ಹಕ್ಕು ಹೊಂದಿಲ್ಲವೇ? ಇಲ್ಲಿ ಆಗಿರುವ ಅಪರಾಧವಾದರೂ ಏನು? ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಸಚಿವರಾದ ಕೃಷ್ಣ ಬೈರೇಗೌಡ, ಎಂ.ಬಿ.ಪಾಟೀಲ್‌, ಕೆ.ಎಚ್. ಮುನಿಯಪ್ಪ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್‌.ಪೊನ್ನಣ್ಣ ಸೇರಿ ಹಲವರು ಹಾಜರಿದ್ದರು.

ಮುಡಾ ಕೇಸಲ್ಲಿ ಸಿಎಂಗೆ ಸಂಕಷ್ಟ: ಪ್ರಾಸಿಕ್ಯೂಷನ್‌ ಭೀತಿಯಲ್ಲಿ ಸಿದ್ದು..!

ಸಿಎಂ ಪತ್ನಿಯ ತಪ್ಪೇನಿದೆ?

ಮುಖ್ಯಮಂತ್ರಿಗಳ ಪತ್ನಿಯಾದ ಮಾತ್ರಕ್ಕೆ ತನ್ನ ಹಕ್ಕನ್ನು ಕಳೆದುಕೊಳ್ಳಬೇಕಾ? ತನ್ನ ಅಣ್ಣ ಕೊಟ್ಟ ಜಮೀನನ್ನು ಉಳಿಸಿಕೊಂಡು ತನ್ನ ಮಕ್ಕಳ ಭವಿಷ್ಯ ರಕ್ಷಣೆ ಮಾಡಿಕೊಳ್ಳುವುದು ತಪ್ಪಾ? ಸಿದ್ದರಾಮಯ್ಯ 40 ವರ್ಷಗಳ ರಾಜಕಾರಣ ಮಾಡಿದ್ದು, ಮಂತ್ರಿ, ಉಪ ಮುಖ್ಯಮಂತ್ರಿಯಾಗಿದ್ದಾರೆ, 7 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಆದರೂ ಅವರ ಪತ್ನಿ ಎಂದಿಗೂ ಸಾರ್ವಜನಿಕವಾಗಿ ಗುರುತಿಸಿಕೊಂಡಿಲ್ಲ. ತಮ್ಮ ಅಧಿಕಾರವನ್ನು ಬಳಸಿಕೊಂಡು ವೇದಿಕೆ ಹಂಚಿಕೊಂಡಿಲ್ಲ. ಅವರಿಗೆ ಅಧಿಕಾರ ಇದ್ದರೂ ಅದನ್ನು ಬಳಸಿಕೊಂಡಿಲ್ಲ. ನಾವು ಅವಕಾಶ ಸಿಕ್ಕಾಗ ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿದ್ದೇವೆ. ಆದರೆ ಪಾರ್ವತಿ ಅವರು ಎಂದಿಗೂ ಅಧಿಕಾರವನ್ನು ಬಳಸಿಕೊಂಡವರಲ್ಲ ಎಂದು ಡಿ.ಕೆ.ಶಿವಕುಮಾರ್‌ ಸಮರ್ಥಿಸಿದರು.

ಸಿಎಂ ಕೂಡ ರಾಜ್ಯಪಾಲರಿಗೆ ಉತ್ತರ ನೀಡ್ತಾರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಾಸ್‌ ನೋಟಿಸ್‌ ನೀಡಿದ್ದಾರೆ. ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳೂ ಸಹ ಉತ್ತರ ಕೊಡುತ್ತಾರೆ. ನಾವು ಸಚಿವರ ಪರಿಷತ್‌ ಪರವಾಗಿ ನಿರ್ಣಯ ತೆಗೆದುಕೊಂಡಿದ್ದೇವೆ. ಮುಖ್ಯಮಂತ್ರಿಗಳೂ ಸಹ ಈ ಬಗ್ಗೆ ತಮ್ಮ ಉತ್ತರ ಸಮರ್ಥವಾಗಿ ನೀಡುತ್ತಾರೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

click me!