ಚನ್ನಪಟ್ಟಣದಲ್ಲಿ ಸೋಲಿನ ಭಯ: ಮಂಡ್ಯದಿಂದ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧೆ?

By Sathish Kumar KHFirst Published Apr 14, 2023, 7:09 PM IST
Highlights

- ಕುಮಾರಸ್ವಾಮಿ ಸ್ಪರ್ಧೆ ಖಚಿತವಾದರೆ ಕಾಂಗ್ರೆಸ್‌ನಿಂದ ಚಲುವಾಯಸ್ವಾಮಿ ಎದುರಾಳಿ
- ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು
- ಚನ್ನಪಟ್ಟಣದಲ್ಲಿ ಸೋಲಿನ ಭಯದಿಂದ ಮತ್ತೊಂದು ಕ್ಷೇತ್ರದ ಮೇಲೆ ಕಣ್ಣು

ಕನ್ನಡಪ್ರಭ ವಾರ್ತೆ, ಮಂಡ್ಯ 

ಮಂಡ್ಯ (ಏ.14): ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್..ಡಿ. ಕುಮಾರಸ್ವಾಮಿ ಅವರು ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ ಎಂಬುದಾಗಿ ತಿಳಿದುಬಂದಿದ್ದು ಇದರಿಂದ ಎಚ್ಚೆತ್ತಿರುವ ಕಾಂಗ್ರೆಸ್ ಅವರ ಎದುರಾಗಿ ಕೆಪಿಸಿಸಿ ಉಪಾಧ್ಯಕ್ಷ ಎನ್. ಚಲುವರಾಯಸ್ವಾಮಿ ಅವರನ್ನು ಅಖಾಡಕ್ಕಿಳಿಸಲು ನಿರ್ಧರಿಸಿದೆ ಎಂದು ಖಚಿತ ಮೂಲಗಳು ತಿಳಿಸಿವೆ.

Latest Videos

ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ತೀವ್ರ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲು ಮುಂದಾಗಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ. ಹಾಲಿ ಟಿಕೆಟ್ ಆಕಾಂಕ್ಷಿಗಳ ಪೈಕಿ ಯಾರಿಗೆ ಟಿಕೆಟ್ ನೀಡಿದರೂ ಭಿನ್ನಮತ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಪಕ್ಷದ ಹಿತದೃಷ್ಟಿಯಿಂದ ಕುಮಾರಸ್ವಾಮಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.

Breaking : ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಭವಾನಿಗಿಲ್ಲ ಹಾಸನ, ಸ್ವರೂಪ್‌ಗೆ ಸಿಂಹಾಸನ!

ಜೆಡಿಎಸ್ ಪಕ್ಷದೊಳಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಕೆಪಿಸಿಸಿ ಉಪಾಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಅವರು ಅಖಾಡ ಪ್ರವೇಶಿಸುವುದು ನಿಜವೇ ಆಗಿದ್ದಲ್ಲಿ ಹಾಲಿ ಘೋಷಿಸಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾಯಿಸಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎನ್ ಚಲುವರಾಯಸ್ವಾಮಿ ಅವರಿಗೆ ಎರಡನೇ ಕ್ಷೇತ್ರವಾಗಿ ಮಂಡ್ಯದಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಎಚ್ ಡಿ ಕುಮಾರಸ್ವಾಮಿ ಅವರು ಈಗಾಗಲೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ನಿರ್ಧರಿಸಿದ್ದಾರೆ. ಅಲ್ಲಿನ ಚುನಾವಣಾ ಸಮೀಕ್ಷಾ ವರದಿ ಹಾಗೂ ಮಂಡ್ಯ ಕ್ಷೇತ್ರದ ಟಿಕೆಟ್ ಕಗ್ಗಂಟು ಎರಡನ್ನು ಅವಲೋಕನ ಮಾಡಿ ಹೆಚ್ ಡಿ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಎರಡನೇ ಕ್ಷೇತ್ರವಾಗಿ ಮಂಡ್ಯ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕುಮಾರಸ್ವಾಮಿ ಅವರನ್ನು ಸಮರ್ಥವಾಗಿ ಎದುರಿಸುವ ದೃಷ್ಟಿಯಿಂದ ನಾಗಮಂಗಲ ಕ್ಷೇತ್ರದ ಅಭ್ಯರ್ಥಿ ಎನ್. ಚಲುವರಾಯಸ್ವಾಮಿ ಅವರನ್ನು ಸಜ್ಜುಗೊಳಿಸಿರುವ ಕಾಂಗ್ರೆಸ್ ಈಗಾಗಲೇ ಉಮೇದುವಾರಿಕೆ ಸಲ್ಲಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದ ಗೊಂದಲವನ್ನು ನಿವಾರಿಸಲು ಶುಕ್ರವಾರ ಬಿಡದಿಯ ಕುಮಾರಸ್ವಾಮಿ ಅವರ ನಿವಾಸದಲ್ಲಿ ಟಿಕೆಟ್ ಆಕಾಂಕ್ಷಿತರ ಜೊತೆ ಕುಮಾರಸ್ವಾಮಿ ಸಮಾಲೋಚನೆ ನಡೆಸಿದ್ದರು. ಈ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಒಮ್ಮತ ಮೂಡಿಲ್ಲವೆಂದಾದರೆ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಇಳಿಯುವುದು ನಿಶ್ಚಿತವಾಗಲಿದೆ ಎನ್ನಲಾಗಿದೆ. ಚುನಾವಣೆ ಪೂರ್ವದಿಂದಲೂ ಕುಮಾರ ಸ್ವಾಮಿ ಅವರಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಯುವ ಬಗ್ಗೆ ದಟ್ಟ ವದಂತಿಗಳು ಹರಡಿದ್ದವು.

ಕಾಂಗ್ರೆಸ್‌ 2ನೇ ಪಟ್ಟಿ ಬಿಡುಗಡೆ: 42 ಕ್ಷೇತ್ರಗಳ ಅಭ್ಯರ್ಥಿಗಳು ಇಲ್ಲಿದ್ದಾರೆ ನೋಡಿ..

ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕ ಎಂ ಶ್ರೀನಿವಾಸ್ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ಸ್ಪರ್ಧೆ ಗಾಳಿ ಸುದ್ದಿ ಎಂದು ನಂಬಲಾಗಿತ್ತು. ಚುನಾವಣೆ ಘೋಷಣೆ ಯಾಗುವವರೆಗೂ ಅಭ್ಯರ್ಥಿ ಆಯ್ಕೆಯಲ್ಲಿ ಬದಲಾವಣೆ ಇಲ್ಲವೆಂದು ಹೇಳುತ್ತಲೇ ಬಂದಿದ್ದ ಜೆಡಿಎಸ್ ವರಿಷ್ಠರು ಕೊನೆಗಳಿಗೆಯಲ್ಲಿ ಘೋಷಿತ ಅಭ್ಯರ್ಥಿ ಎಂ. ಶ್ರೀನಿವಾಸ್ ಅವರನ್ನು ಬದಲಾವಣೆ ಮಾಡುವ ಮುನ್ಸೂಚನೆ ನೀಡಿದ್ದರು. ಈ ಬೆಳವಣಿಗೆಯ ನಂತರ ಮಂಡ್ಯ ಕ್ಷೇತ್ರದೊಳಗೆ ಟಿಕೆಟ್ ವಿಷಯದಲ್ಲಿ ತೀವ್ರ ಗೊಂದಲ ಉಂಟಾಗಿತ್ತು. ಪಕ್ಷದ ವತಿಯಿಂದ ನಡೆಸಲಾಗಿರುವ ಸರ್ವೆ ವರದಿ ಆದರಿಸಿ ಅಭ್ಯರ್ಥಿಯನ್ನು ಅಂತಿಮಗೊಳಿಸುವುದಾಗಿ ಹೇಳಿದ್ದ ಜೆಡಿಎಸ್ ವರಿಷ್ಠ ಎಚ್ ಡಿ. ಕುಮಾರಸ್ವಾಮಿ ಅವರು ಇದೀಗ ಅವರೇ ಕಣಕ್ಕಿಳಿಯಲು ಮುಂದಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.

click me!