
ಬೆಂಗಳೂರು (ಮಾ.22): ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿರುವ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿ ಅಖೈರುಗೊಳಿಸಲು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಶುಕ್ರವಾರ ನಗರಕ್ಕೆ ಆಗಮಿಸಲಿದ್ದು, ಬಹುತೇಕ ಶುಕ್ರವಾರ ಈ ಕ್ಷೇತ್ರಗಳ ಗೊಂದಲ ಬಗೆಹರಿಯುವ ಸಾಧ್ಯತೆಯಿದೆ. ಕಾಂಗ್ರೆಸ್ ಪಕ್ಷವು ಇದುವರೆಗೂ ಒಟ್ಟು 24 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಕೋಲಾರ, ಚಾಮರಾಜನಗರ, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಅಭ್ಯರ್ಥಿ ಅಖೈರುಗೊಳಿಸುವುದು ಬಾಕಿಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುರುವಾರವೂ ಈ ಕ್ಷೇತ್ರಗಳ ಆಕಾಂಕ್ಷಿಗಳನ್ನು ಕರೆಸಿ ಮಾತುಕತೆ ನಡೆಸಿದ್ದು, ಹೈಕಮಾಂಡ್‌ನ ಅಭಿಪ್ರಾಯವನ್ನು ಸದರಿ ಆಕಾಂಕ್ಷಿಗಳಿಗೆ ತಿಳಿಸಿದ್ದಾರೆ.
ಸಂಭಾವ್ಯರು: ಬಳ್ಳಾರಿ ಕ್ಷೇತ್ರದಿಂದ ಗುರುವಾರ ಶಾಸಕ ತುಕಾರಾಂ ಅವರನ್ನು ಕರೆಸಿಕೊಂಡು ಕಣಕ್ಕೆ ಇಳಿಯುವಂತೆ ಮನವೊಲಿಸಲು ಯತ್ನಿಸಿದರು. ಮೂಲಗಳ ಪ್ರಕಾರ ತುಕಾರಾಂ ಸ್ಪರ್ಧೆಗೆ ಬಹುತೇಕ ಒಪ್ಪಿದ್ದಾರೆ. ಒಂದು ವೇಳೆ ಅವರು ಕೊನೆ ಕ್ಷಣದಲ್ಲಿ ಹಿಂಜರಿದರೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ಸಚಿವ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ ಅವರ ಹೆಸರು ಪರಿಗಣನೆಯಲ್ಲಿದೆ.
ತಮಿಳುನಾಡು ಮೇಕೆದಾಟು ಕಿರಿಕ್‌ಗೆ ಬಿಜೆಪಿ ಆಕ್ರೋಶ: ವಿಜಯೇಂದ್ರ ಹೇಳಿದ್ದೇನು?
ಚಾಮರಾಜನಗರ ಕ್ಷೇತ್ರಕ್ಕೆ ಹೈಕಮಾಂಡ್ ಸಚಿವ ಡಾ. ಎಚ್. ಸಿ. ಮಹದೇವಪ್ಪ ಅವರನ್ನು ಕಣಕ್ಕೆ ಇಳಿಸುವುದು ಸೂಕ್ತ ಎಂಬ ಅಭಿಪ್ರಾಯ ಹೊಂದಿದೆ. ಆದರೆ, ಮಹದೇವಪ್ಪ ಸ್ಪರ್ಧೆಗೆ ಬಿಲ್‌ಕುಲ್ ಒಪ್ಪುತ್ತಿಲ್ಲ. ತಮ್ಮ ಬದಲಾಗಿ ಪುತ್ರ ಸುನೀಲ್ ಬೋಸ್‌ಗೆ ಟಿಕೆಟ್ ನೀಡಿ ಎಂಬುದು ಅವರ ಒತ್ತಾಯ. ಆದರೆ, ಜಿಲ್ಲೆಯ ಕಾಂಗ್ರೆಸ್ ಶಾಸಕರು ಸುನೀಲ್ ಬೋಸ್ ಪರ ನಿಲ್ಲುತ್ತಿಲ್ಲ. ಒಂದೋ ಮಹದೇವಪ್ಪ ಅವರೇ ಸ್ಪರ್ಧಿಸಲಿ ಇಲ್ಲವೇ ಮಾಜಿ ಶಾಸಕ ನಂಜುಡಸ್ವಾಮಿ ಅವರಿಗೆ ಟಿಕೆಟ್ ನೀಡುವಂತೆ ಶಾಸಕರು ನಾಯಕತ್ವಕ್ಕೆ ಸೂಚಿಸುತ್ತಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹದೇವಪ್ಪ ಅವರನ್ನು ಕರೆಸಿಕೊಂಡು ಸುದೀರ್ಘ ಚರ್ಚೆ ನಡೆಸಿದ್ದು, ಶಾಸಕರ ಮನವೊಲಿಸುವ ಪ್ರಯತ್ನ ನಡೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಮಹದೇವಪ್ಪ ಅವರು ಶಾಸಕರ ಮನವೊಲಿಸಲು ಯಶಸ್ವಿಯಾದರೆ ಈ ಕ್ಷೇತ್ರದ ಟಿಕೆಟ್ ಅವರ ಪುತ್ರ ಸುನೀಲ್ ಬೋಸ್‌ಗೆ ದೊರೆಯುವ ಸಾಧ್ಯತೆಯಿದೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬಹುತೇಕ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆಕಾಂಕ್ಷಿಯಾಗಿದ್ದರೂ ಸಹ ರಾಜ್ಯ ನಾಯಕತ್ವ ರಕ್ಷಾ ರಾಮಯ್ಯ ಪರ ನಿಂತಿದ್ದು, ಬಹುತೇಕ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆಯಿದೆ.
ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಸಿಎಂ ಆಕ್ರೋಶ: ದುಷ್ಟಶಕ್ತಿ ಕೈವಾಡ ಎಂದ ಸಿದ್ದರಾಮಯ್ಯ!
ಇನ್ನೂ ಕೋಲಾರ ಕ್ಷೇತ್ರದ ಕಗ್ಗಂಟು ಬಗೆಹರಿಯುತ್ತಿಲ್ಲ. ಸಚಿವ ಕೆ.ಎಚ್. ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕ ಪೆದ್ದಯ್ಯಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಸ್ಥಳೀಯ ನಾಯಕರು ಹಾಗೂ ಶಾಸಕರು ಎಲ್. ಹನುಮಂತಯ್ಯ ಅವರಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ವಿಚಾರ ಶುಕ್ರವಾರದ ಸಭೆಯಲ್ಲಿ ಇತ್ಯರ್ಥವಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.