
ದಾಬಸ್‌ಪೇಟೆ (ಅ.02): ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ರಾಜ್ಯದ ಖಜಾನೆ ಖಾಲಿ ಮಾಡಿ ಹೋಗಿತ್ತು. ಆದರೂ ನಾವು ಧೈರ್ಯ ಮಾಡಿ 36 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿದ್ದು, ನಮ್ಮ ಆರ್ಥಿಕ ಪರಿಸ್ಥಿತಿ ಅಷ್ಟು ಸದೃಢವಾಗಿಲ್ಲ. ಆದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ತೆರೆದ ಮನಸ್ಸು ಸರ್ಕಾರಕ್ಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನೂರಾರು ರೈತರು ಪಾದಯಾತ್ರೆ ದಾಬಸ್‌ಪೇಟೆಗೆ ಆಗಮಿಸಿ ಸಿದ್ದಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ದಿಢೀರನೆ ಆಗಮಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ತಯಾರು ಮಾಡಿದ್ದು ನಾನೇ. ಆ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಸುದೀರ್ಘವಾಗಿ ಚರ್ಚೆ ಮಾಡಿ ಸಮಸ್ಯೆಗಳ ಪರಿಹಾರಕ್ಕಾಗಿ ಹಲವು ವಿಷಯಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದೇವೆ. ಹಾಗಾಗಿ ನಾವು ರೈತರ ಪರವಾಗಿರುವುದಾಗಿ ಮತ್ತೊಮ್ಮೆ ಹೇಳಲು ಬಯಸುತ್ತೇನೆ. ರೈತರು ಕಂಗಾಲಾಗಿರುವ ವಿಚಾರ ನಮ್ಮ ಅರಿವಿಗೂ ಬಂದಿದೆ ಎಂದರು.
ಕುಮಾರಸ್ವಾಮಿ ಯಾವಾಗ ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ರು: ಸಚಿವ ಪರಮೇಶ್ವರ್
ಇಂದಿನ ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಹಾಕಿ ಸುಮಾರು 40 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿಗಳಿಗೆ ನೀಡಬೇಕಿದ್ದು ಬಡವರ ಅನುಕೂಲಕ್ಕಾಗಿ ವಿರೋಧ ಲೆಕ್ಕಿಸದೆ ಗ್ಯಾರಂಟಿಗಳ ಘೋಷಣೆ ಮಾಡಿ ಸರ್ಕಾರ ಬಂದ ನಂತರ ಹಂತ ಹಂತವಾಗಿ ಜಾರಿಗೆ ತರುತ್ತಿದೆ ಎಂದು ಹೇಳಿದರು. ತೆಂಗು ಬೆಳೆಗಾರರ ಸಮಸ್ಯೆ ನಿಜವಾದ ರೈತರ ಸಮಸ್ಯೆಯಾಗಿದ್ದು, ಇಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕೊಡಲು ನಾನೇನು ಹಣಕಾಸು ಸಚಿವ ಅಥವಾ ಮುಖ್ಯಮಂತ್ರಿಯಲ್ಲ. ಆದ್ದರಿಂದ ರೈತರ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಗೆಹರಿಸುವ ಭರವಸೆ ನೀಡಿದರು.
ಸರ್ಕಾರದ ಬದಲಾವಣೆಗಾಗಿ ಶ್ರಮಿಸಿದ್ದೇನೆ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ನಾವು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಹೇಳಿ ಕರ್ನಾಟಕ ರಾಜ್ಯ ರೈತ ಸಂಘದ 2500 ಸಾವಿರ ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡಿ ಸರ್ಕಾರ ಬದಲಾವಣೆಗಾಗಿ ಶ್ರಮಿಸಿದ್ದು ಈ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಗೊತ್ತಿದೆ ಎಂದರು. ಪ್ರತಿ ಕ್ವಿಂಟಲ್ ಕೊಬ್ಬರಿಗೆ 25 ಸಾವಿರ ಬೆಂಬಲ ಬೆಲೆ ನೀಡಬೇಕು, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಈ ಕೂಡಲೇ ನಿಲ್ಲಿಸಬೇಕು, ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು, ಸರ್ಕಾರ ತುರ್ತಾಗಿ ಬೆಳೆ ನಷ್ಟ ಪರಿಹಾರ ಮತ್ತು ಬೆಳೆ ವಿಮೆ ಬಿಡುಗಡೆ ಮಾಡಬೇಕೆಂಬ ಒತ್ತಾಯ ನಮ್ಮದಾಗಿದೆ ಎಂದರು.
ಕಾವೇರಿ ನೀರಿನ ಸಮಸ್ಯೆಗೆ ಮೇಕೆದಾಟು ಪರಿಹಾರ: ಸಂಸದ ಡಿ.ಕೆ.ಸುರೇಶ್
ಮೇಲಿನ ಬೇಡಿಕೆಗಳನ್ನಿಟ್ಟುಕೊಂಡು ಪಾದಯಾತ್ರೆ ಕೈಗೊಂಡಿದ್ದು ಗ್ಯಾರಂಟಿಗಳ ಜಾರಿಗಾಗಿ ಸಿದ್ದರಾಮಯ್ಯ ಸರ್ಕಾರ 86814 ಕೋಟಿ ರು. ಸಾಲವನ್ನು ರಾಜ್ಯದ ಜನರ ಮೇಲೆ ಹೇರುತ್ತಿದ್ದು ಗ್ಯಾರಂಟಿ ಕಾರ್ಯಕ್ರಮ ಕೊಡಿ ಎಂದು ಯಾರೂ ಕೇಳಿರಲಿಲ್ಲ. ಈಗ ತೆಂಗು ಬೆಳೆಗಾರರಿಗೆ ಅನುಕೂಲವಾಗಲು ಕೊಬರಿಗೆ ವೈಜ್ಞಾನಿಕವಾಗಿ ಸೂಕ್ತ ಬೆಂಬಲ ಬೆಲೆ ನೀಡಬೇಕು. ಅ.4ನೇ ತಾರೀಕಿನಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.