
ಕೊಪ್ಪಳ (ಜ.13): ವಿಜಯನಗರ ಕಾಲುವೆಗೆ ನೀರು ಬಿಡುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ರೈತರ ಪರವಾಗಿ ನಾನು ಎಂಥ ಹೋರಾಟಕ್ಕೂ ಸಿದ್ಧನಿದ್ದೇನೆ. ಈಗಾಗಲೇ ನನ್ನ ಮೇಲೆ ಹಲವಾರು ಕೇಸುಗಳಿವೆ. ಈಗ ರೈತರಿಗಾಗಿ ಹತ್ತಾರು ಕೇಸ್ ಆದರೂ ನಾನು ಕೇರ್ ಮಾಡುವುದಿಲ್ಲ ಎಂದು ಗಂಗಾವತಿ ಶಾಸಕ ಮತ್ತು ಕೆಆರ್‌ಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಇಲ್ಲಿನ ಡಿಸಿ ಕಚೇರಿ ಎದುರು ಹುಲಗಿ ತುಂಗಭದ್ರಾ ನೀರು ಬಳಕೆಗಾರರ ಸಂಘದ ವತಿಯಿಂದ ವಿಜಯನಗರ ಕಾಲುವೆಗಳಿಗೆ ನೀರು ಬಿಡುಗಡೆಗೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಬೆಂಬಲ ಸೂಚಿಸಿ, ಅವರು ಮಾತನಾಡಿದರು.
ನಾನು ಈಗಾಗಲೇ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರೊಂದಿಗೆ ಮಾತನಾಡಿದ್ದೇನೆ. ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರೊಂದಿಗೂ ಮಾತನಾಡುತ್ತೇನೆ. ಎರಡು ದಿನಗಳಲ್ಲಿ ನೀರು ಬಿಡುವಂತೆ ಗಡುವು ನೀಡುತ್ತೇನೆ. ಹಾಗೊಂದು ವೇಳೆ ಬಿಡದೆ ಇದ್ದರೆ ಹೆದರುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಸೇರಿ ತುಂಗಭದ್ರಾ ಜಲಾಶಯಕ್ಕೆ ನುಗ್ಗಿ, ನೀರು ಬಿಡಿಸಿಕೊಳ್ಳೋಣ. ಇದಕ್ಕಾಗಿ ನಮ್ಮ ಮೇಲೆ ಎಂಥ ಕೇಸ್ ಹಾಕಿದರೂ ಪರವಾಗಿಲ್ಲ, ಹೆದರೋದೋ ಬೇಡ ಎಂದರು. ರೈತರಿಗಾಗಿ ನಾನು ಎಂಥ ಹೋರಾಟಕ್ಕೂ ಸಿದ್ಧನಿದ್ದೇನೆ. ಕೇವಲ ಬೆಂಬಲ ಸೂಚಿಸಿ ಹೋಗುವುದಕ್ಕೆ ನಾನು ಇಲ್ಲಿಗೆ ಬಂದಿಲ್ಲ, ಇದು ನ್ಯಾಯಯುತ ಹೋರಾಟವಾಗಿದ್ದು, ಇದಕ್ಕಾಗಿ ನಾನು ನಿಮ್ಮ ಜತೆಯಲ್ಲಿ ಇರುತ್ತೇನೆ ಎಂದರು.
ಬಹಿಷ್ಕರಿಸುವುದು ಸರಿಯಲ್ಲ: ಶ್ರೀರಾಮ ಮರ್ಯಾದಾ ಪುರುಷೋತ್ತಮ. ಪ್ರತಿ ಹಳ್ಳಿ ಮತ್ತು ನಗರಗಳಲ್ಲಿ ಶ್ರೀರಾಮನ ಆರಾಧನೆ ಮಾಡಲಾಗುತ್ತದೆ. ಅಂಥ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಹೋಗದೆ ಬಹಿಷ್ಕಾರ ಮಾಡುವ ಕಾಂಗ್ರೆಸ್ ನಿರ್ಧಾರ ಸರಿಯಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಪ್ರತಿಯೊಬ್ಬರೂ ಅಲ್ಲಿಗೆ ಹೋಗಬೇಕು. ಆಹ್ವಾನ ಕೊಡಲೇಬೇಕು ಎಂದೇನೂ ಇಲ್ಲ ಎಂದರು.
ಅಯೋಧ್ಯೆ ರಾಮ ಮಂದಿರ ಆಹ್ವಾನದಲ್ಲಿ ರಾಜಕಾರಣ ಸಲ್ಲ: ಸಂಸದ ಪ್ರಜ್ವಲ್ ರೇವಣ್ಣ
ಬಂಗಾರ ಲೇಪಿತ ಬಾಟಲಿಯಲ್ಲಿ ಅಯೋಧ್ಯೆಗೆ ತುಂಗಭದ್ರಾ ನೀರು: ನಾನು ಅಯೋಧ್ಯೆ ಮಂಡಲ ಪೂಜೆಗೆ ತೆರಳಬೇಕು ಎಂದುಕೊಂಡಿದ್ದೇನೆ. ಆಗ 108 ಪಂಚಲೋಹದ ಬಂಗಾರ ಲೇಪಿತ ಬಾಟಲಿಗಳನ್ನು ತಯಾರು ಮಾಡಿಸಿ, ಅದರಲ್ಲಿ ತುಂಗಭದ್ರಾ ನೀರನ್ನು ಅಲ್ಲಿಗೆ ತೆಗೆದುಕೊಂಡು ಹೋಗುತ್ತೇನೆ ಮತ್ತು ಈ ನೀರಿನಿಂದ ಶ್ರೀರಾಮನಿಗೆ ಅಭಿಷೇಕ ನಿರಂತರವಾಗಿ ಆಗಬೇಕು ಎನ್ನುವುದು ನನ್ನ ಬಯಕೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಅಂಜನಾದ್ರಿಯ ಆಂಜನೇಯನ ಭಕ್ತಿಯ ದ್ಯೋತಕವಾಗಿ ತುಂಗಭದ್ರಾ ನೀರನ್ನು ಈ ಬಾಟಲಿಗಳಲ್ಲಿ ತೆಗೆದುಕೊಂಡು ಹೋಗಿ ಕೊಟ್ಟುಬರುತ್ತೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.