ನಾನು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಈ ಕುರಿತು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಶ್ರೀರಾಮುಲು ಮತ್ತು ನಾನು ಮಾತನಾಡದೆ ಒಂದು ವರ್ಷವಾಗಿದೆ. ಹೀಗಿದ್ದಾಗ್ಯೂ ಅವರ ಮೂಲಕ ನಾನು ಹೇಗೆ ಬಿಜೆಪಿ ಸೇರುತ್ತೇನೆ?
ಕೊಪ್ಪಳ (ಜ.12): ನಾನು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಈ ಕುರಿತು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಶ್ರೀರಾಮುಲು ಮತ್ತು ನಾನು ಮಾತನಾಡದೆ ಒಂದು ವರ್ಷವಾಗಿದೆ. ಹೀಗಿದ್ದಾಗ್ಯೂ ಅವರ ಮೂಲಕ ನಾನು ಹೇಗೆ ಬಿಜೆಪಿ ಸೇರುತ್ತೇನೆ? ಬಿಜೆಪಿ ರಾಜ್ಯ ನಾಯಕರ ದುರಹಂಕಾರದಿಂದ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಪಕ್ಕಾ ಎಂದು ಗಂಗಾವತಿ ಶಾಸಕ ಮತ್ತು ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಅವರು ಕಿಡಿಕಾರಿದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಹೆಸರನ್ನು ಹೇಳದೆ ತಮ್ಮ ಜತೆಗಿದ್ದು, ದೂರವಾದ ಬಿಜೆಪಿ ನಾಯಕರನ್ನೇ ಗುರಿಯಾಗಿಟ್ಟುಕೊಂಡು, ದುರಹಂಕಾರ ಯಾರಿಗೂ ಒಳ್ಳೆಯದಲ್ಲ, ದುರಹಂಕಾರದಿಂದ ಮೆರೆದವರು ಯಾರೂ ಉದ್ಧಾರ ಆಗಿಲ್ಲ ಎಂದರು.
ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನನ್ನು ಸೇರಿದಂತೆ ದುರಹಂಕಾರ ಯಾರಿಗೂ ಒಳ್ಳೆಯದಲ್ಲ ಎಂದರು. ಗಂಗಾವತಿಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋದಂತೆ ಲೋಕಸಭಾ ಚುನಾವಣೆಯಲ್ಲಿಯೂ ಕೆಆರ್‌ಪಿಪಿ ಸ್ಪರ್ಧೆ ಮಾಡಿದ ಎಲ್ಲ ಕಡೆ ಮೂರನೇ ಸ್ಥಾನಕ್ಕೆ ದೂಡಲ್ಪಡುತ್ತದೆ ಎಂದು ಭವಿಷ್ಯ ನುಡಿದರು. ಮಾಜಿ ಸಚಿವ ಶಿವನಗೌಡ ನಾಯಕ ಅವರು ನನ್ನನ್ನು ಭೇಟಿಯಾಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅವರು ಅವರ ಮಗ ಸೇರಿದಂತೆ ಅವರ ಅಣ್ಣನ ಮಕ್ಕಳ ಮದುವೆ ಸಮಾರಂಭಕ್ಕೆ ಆಹ್ವಾನ ನೀಡಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ರಾಜಕೀಯ ಸಹಜವಾಗಿಯೇ ಚರ್ಚೆಯಾಗಿದೆ.
ಮಗನಿಗೆ ಟಿಕೆಟ್ ಸಿಗದಿದ್ರೆ ಈಶ್ವರಪ್ಪ 2ನೇ ಯತ್ನಾಳ್: ಶಾಸಕ ಬೇಳೂರು ಗೋಪಾಲಕೃಷ್ಣ
ಆದರೆ, ಬಿಜೆಪಿಗೆ ಸೇರುವ ಚರ್ಚೆ ನಡೆದಿದೆ ಎನ್ನುವುದು ಸರಿಯಲ್ಲ ಎಂದರು. ನಾನು ಶ್ರೀರಾಮುಲು ಅವರು ಮಾತನಾಡದೆ ಒಂದು ವರ್ಷವಾಗಿದೆ. ವೈಯಕ್ತಿಕವಾಗಿಯೂ ಮಾತನಾಡಿಲ್ಲ ಮತ್ತು ರಾಜಕೀಯವಾಗಿಯೂ ಮಾತನಾಡಿಲ್ಲ. ಹೀಗಿರುವಾಗ ಅವರ ಮೂಲಕ ಬಿಜೆಪಿ ಸೇರುವ ಪ್ರಯತ್ನ ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೊಪ್ಪಳ, ರಾಯಚೂರು, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ರಾಜ್ಯಾದ್ಯಂತ ಐದು ಕ್ಷೇತ್ರಗಳಲ್ಲಿ ಕೆಆರ್‌ಪಿ ಪಕ್ಷದಿಂದ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಲಾಗುತ್ತದೆ. ಕೊಪ್ಪಳ ಕ್ಷೇತ್ರದಿಂದ ಪತ್ನಿ ಸ್ಪರ್ಧೆ ಮಾಡುವ ಕುರಿತು ಇನ್ನು ಹದಿನೈದು ದಿನಗಳಲ್ಲಿ ನಿರ್ಧಾರವಾಗಲಿದೆ ಎಂದರು.
ಬಹಿಷ್ಕರಿಸುವುದು ಸರಿಯಲ್ಲ: ಶ್ರೀರಾಮ ಮರ್ಯಾದಾ ಪುರುಷೋತ್ತಮ. ಪ್ರತಿ ಹಳ್ಳಿ ಮತ್ತು ನಗರಗಳಲ್ಲಿ ಶ್ರೀರಾಮನ ಆರಾಧನೆ ಮಾಡಲಾಗುತ್ತದೆ. ಅಂಥ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಹೋಗದೆ ಬಹಿಷ್ಕಾರ ಮಾಡುವ ಕಾಂಗ್ರೆಸ್ ನಿರ್ಧಾರ ಸರಿಯಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಪ್ರತಿಯೊಬ್ಬರೂ ಅಲ್ಲಿಗೆ ಹೋಗಬೇಕು. ಆಹ್ವಾನ ಕೊಡಲೇಬೇಕು ಎಂದೇನೂ ಇಲ್ಲ ಎಂದರು.
ಬಿಜೆಪಿಯಿಂದ ಬಡವರ ಹಸಿವಿಗೆ ನೀಡುವ ಅನ್ನದ ವಿಷಯದಲ್ಲೂ ರಾಜಕೀಯ: ಸಚಿವ ಮಹದೇವಪ್ಪ
ಬಂಗಾರ ಲೇಪಿತ ಬಾಟಲಿಯಲ್ಲಿ ಅಯೋಧ್ಯೆಗೆ ತುಂಗಭದ್ರಾ ನೀರು: ನಾನು ಅಯೋಧ್ಯೆ ಮಂಡಲ ಪೂಜೆಗೆ ತೆರಳಬೇಕು ಎಂದುಕೊಂಡಿದ್ದೇನೆ. ಆಗ 108 ಪಂಚಲೋಹದ ಬಂಗಾರ ಲೇಪಿತ ಬಾಟಲಿಗಳನ್ನು ತಯಾರು ಮಾಡಿಸಿ, ಅದರಲ್ಲಿ ತುಂಗಭದ್ರಾ ನೀರನ್ನು ಅಲ್ಲಿಗೆ ತೆಗೆದುಕೊಂಡು ಹೋಗುತ್ತೇನೆ ಮತ್ತು ಈ ನೀರಿನಿಂದ ಶ್ರೀರಾಮನಿಗೆ ಅಭಿಷೇಕ ನಿರಂತರವಾಗಿ ಆಗಬೇಕು ಎನ್ನುವುದು ನನ್ನ ಬಯಕೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಅಂಜನಾದ್ರಿಯ ಆಂಜನೇಯನ ಭಕ್ತಿಯ ದ್ಯೋತಕವಾಗಿ ತುಂಗಭದ್ರಾ ನೀರನ್ನು ಈ ಬಾಟಲಿಗಳಲ್ಲಿ ತೆಗೆದುಕೊಂಡು ಹೋಗಿ ಕೊಟ್ಟುಬರುತ್ತೇನೆ ಎಂದರು.