* ಪಕ್ಷದ ನಾಯಕರು ಒಬ್ಬ ವ್ಯಕ್ತಿಗೆ ಹುದ್ದೆ ಕೊಟ್ಟಾಗ ಅದನ್ನು ಒಪ್ಪಿ ಗೌರವಿಸಬೇಕು
* ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಉಚ್ಚಾಟನೆ
* ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಾನಂದ ಜಾವಣ್ಣನವರ ಹೇಳಿಕೆ
ಹಾವೇರಿ(ಜು.07): ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ನಾಲ್ವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಯಾನಂದ ಜಾವಣ್ಣನವರ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರು ಒಬ್ಬ ವ್ಯಕ್ತಿಗೆ ಹುದ್ದೆ ಕೊಟ್ಟಾಗ ಅದನ್ನು ಒಪ್ಪಿ ಗೌರವಿಸಬೇಕು. ಆದರೆ, ನನ್ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡಿದಾಗ ಕೆಲವರು ಪಕ್ಷ, ಪದಾಧಿಕಾರಿಗಳು ಹಾಗೂ ಜಿಲ್ಲಾ ಅಧ್ಯಕ್ಷರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದ್ದಾರೆ. ಅಲ್ಲದೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಮಾಹಿತಿ ಆಧರಿಸಿ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆಯಲಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷರು ಶೋಕಾಸ್ ನೋಟಿಸ್ ಕೊಟ್ಟು ಪಕ್ಷದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ನಾಲ್ವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ.
undefined
ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಬೇವಿನಮರದ, ಮಾಜಿ ಜಿಲ್ಲಾ ಕಾರ್ಯಾಧ್ಯಕ್ಷ ಉಮೇಶ ತಳವಾರ, ಪಕ್ಷದ ಕಾರ್ಯಕರ್ತರಾಗಿದ್ದ ಮಾಂತೇಶ ಶಿಡಗನಾಳ, ರವಿ ಭತ್ತದ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿರುವುದಾಗಿ ತಿಳಿಸಿದರು.
ನಾನು ಲಕ್ಕಿ ಡಿಪ್ ಸಿಎಂ.. ನಿಮ್ಮ ಸಿಎಮ್ಮೂ ಲಕ್ಕಿ ಡಿಪ್: ಎಚ್‌ಡಿಕೆ
ಜೆಡಿಎಸ್ ರಾಜ್ಯ ವಕ್ತಾರ ಮಹೇಶಗೌಡ ಮಾತನಾಡಿ, ನಾಡಿನ ಹೆಮ್ಮೆಯ ಪುತ್ರ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆಯನ್ನು ಜಿಲ್ಲಾ ಜೆಡಿಎಸ್ ಪಕ್ಷದಿಂದ ಬಲವಾಗಿ ಖಂಡಿಸುತ್ತೇವೆ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ 3-4 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲ್ಲುವ ಉದ್ದೇಶದೊಂದಿಗೆ ಪಕ್ಷವನ್ನು ಬೇರುಮಟ್ಟದಲ್ಲಿ ಸಂಘಟಿಸುತ್ತಿದ್ದೇವೆ ಎಂದರು.
ಜೆಡಿಎಸ್ ಮುಖಂಡರಾದ ಬಸವನಗೌಡ ಸಿದ್ದಪ್ಪಗೌಡ್ರ, ಎಸ್.ಎಂ. ಸುಂಕದ, ಮಲ್ಲಿಕಾರ್ಜುನ ಹಲಗೇರಿ, ಶೇಖರಯ್ಯ ಹಿರೇಮಠ, ಮಾಂತೇಶ ಬೇವಿನಹಿಂಡಿ, ಕೊಟ್ರೇಶ ಅಂಗಡಿ ಇತರರು ಇದ್ದರು.