
ಬೆಂಗಳೂರು: ವಿಧಾನಪರಿಷತ್ ಚುನಾವಣೆಯ ಮತದಾನಕ್ಕೂ ಮುನ್ನ ಬಿಜೆಪಿ ಉಚ್ಚಾಟಿತ ಶಾಸಕರಾದ ಶಿವರಾಂ ಹೆಬ್ಬಾರ್ ಮತ್ತು ಎಸ್‌ಟಿ ಸೋಮಶೇಖರ್ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್, ಬಿಜೆಪಿ ಸೌಜನ್ಯಕ್ಕೂ ನಮಗೆ ಮತ ಕೇಳಿಲ್ಲ
ಬಿಜೆಪಿ ಇಷ್ಟು ವರ್ಷಗಳ ಬಳಿಕವೂ ಬುದ್ದಿ ಕಲಿತಿಲ್ಲ. ಹೀಗಾಗಿ ನಮಗೆ ಸ್ವಾಭಿಮಾನ ಇದೆಯಲ್ಲ. ಬಿಜೆಪಿಗೆ ಜೆಡಿಎಸ್ ಗೆಲ್ಲೋದು ಬೇಕಿಲ್ಲ. ಜೆಡಿಎಸ್-ಬಿಜೆಪಿ ಮುಂದೇನಾಗುತ್ತೆ ಎಂದು ಕಾದು ನೋಡಿ ಎಂದು ಭವಿಷ್ಯ ನುಡಿದರು.
ಕನಿಷ್ಠ ಪಕ್ಷ ಒಂದು ಮಾತಾದರೂ ಬಿಜೆಪಿ ಕೇಳಬೇಕಿತ್ತಲ್ಲ. ಅವರು ಕೇಳದೆ ನಾವು ಏನು ಮಾಡಬೇಕು. ಮತದಾನ ಗೌಪ್ಯವಾಗಿದ್ದು, ನಮ್ಮ ಆತ್ಮಸಾಕ್ಷಿಗೆ ಮತ ಹಾಕುತ್ತೇನೆ ಎಂದು ಶಿವರಾಂ ಹೆಬ್ಬಾರ್ ಹೇಳಿದರು. ಇನ್ನು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ನಮಗೆ ಡಿಕೆ ಶಿವಕುಮಾರ್ ಅವರು ಕರೆ ಮಾಡಿದ್ದರು. ಬಿಡದಿಗೆ ನಾನು ಮತ್ತು ಶಿವರಾಂ ಹೆಬ್ಬಾರ್ ಹೋಗಿದ್ದೀವಿ. ಬಿಜೆಪಿಯವರು ನಮಗೆ ಮತ ಕೇಳಿಲ್ಲ. ನಮಗೆ ಸ್ವಾಭಿಮಾನವಿದ್ದು, ಆತ್ಮಸಾಕ್ಷಿಗೆ ಮತ ಹಾಕುತ್ತೇವೆ ಎಂದು ಹೇಳಿದ್ದಾರೆ.
ಪರಿಷತ್ ಚುನಾವಣೆ ಹಿನ್ನೆಲೆ ಏಕಾಂಗಿಯಾಗಿ ಬಂದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಮತದಾನ ಮಾಡಿ ತೆರಳಿದ್ದಾರೆ. ಪಕ್ಷ ಮತ್ತು ಜೆಡಿಎಸ್ ನಾಯಕರಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ.ದೇವೇಗೌಡರು, ಉಚ್ಚಾಟನೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮತದಾನದ ಬಳಿಕ ಆತ್ಮಸಾಕ್ಷಿಯಾಗಿ ವೋಟ್ ಮಾಡಿರೋದಾಗಿ ಜಿ.ಟಿ.ದೇವೇಗೌಡರ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.
ರೆಸಾರ್ಟ್‌ನಿಂದ ಐದು ಬಸ್‌ಗಳಲ್ಲಿ ಬಂದ ಕಾಂಗ್ರೆಸ್ ಶಾಸಕರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು, ಬಿಜೆಪಿ ಶಾಸಕರಲ್ಲಿ ಎರಡನೇ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬಂದವು. ಬಿಜೆಪಿಯಿಂದ ಉಚ್ಚಾಟಿತ ಮತ್ತೋರ್ವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಮಲದ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ಯತ್ನಾಳ್ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್‌ನಿಂದ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ್, ಬಿ.ಎಸ್.ಶಿವಣ್ಣ, ವಿನಯ್ ಕಾರ್ತಿಕ್ ಪ್ರಕಾಶ್. ಬಿಜೆಪಿಯಿಂದ ಕೌಟಿಲ್ಯ ರಘು ಮತ್ತು ಲಿಂಗರಾಜ್ ಪಾಟೀಲ್. ಜೆಡಿಎಸ್‌ನಿಂದ ಗೋವಿಂದರಾಜು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.