ಆರ್‌ಎಸ್‌ಎಸ್‌ನ ಲೆಕ್ಕ ಕೇಳಿದ ಬೆನ್ನಲ್ಲೇ ಖರ್ಗೆ ಕುಟುಂಬದ ಆಸ್ತಿ ಕೆದಕಿದ ಎಂಪಿ ರೇಣುಕಾಚಾರ್ಯ!

Kannadaprabha News   | Kannada Prabha
Published : Jun 18, 2026, 07:23 AM IST
RSS registration row MP Renukacharya attacks Priyank Kharge

ಸಾರಾಂಶ

ಆರೆಸ್ಸೆಸ್ ಟೀಕಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ, ಭದ್ರಾ ಡ್ಯಾಂ ಬಳಿ ಜಿಲೆಟಿನ್ ಬಳಸಿ ಏಕಶಿಲೆ ಸ್ಫೋಟಿಸುತ್ತಿರುವುದು ಡ್ಯಾಂನ ಸುರಕ್ಷತೆಗೆ ಅಪಾಯ ತಂದೊಡ್ಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆರೆಸ್ಸೆಸ್‌ ಟೀಕಿಸುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಆರೆಸ್ಸೆಸ್‌ಗೆ ನೂರಾರು ವರ್ಷಗಳ ಇತಿಹಾಸವಿದೆ.

ದಾವಣಗೆರೆ (ಜೂ.18): ಆರೆಸ್ಸೆಸ್ ನೋಂದಣಿ(RSS Registration) ಮಾಡಿಸುವಂತೆ ಮೋಹನ ಭಾಗವತ್‌(Mohan Bhagwath) ಅವರಿಗೆ ಪತ್ರ ಬರೆದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank kharge)ಗೆ ಅಧಿಕಾರದ ಮದ ಹೆಚ್ಚಾದಂತೆ ಕಾಣುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ(MP Renukacharya) ಹರಿಹಾಯ್ದಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC President Mallikarjun kharge)ಯವರ ಮಗ ಎಂಬುದನ್ನು ಬಿಟ್ಟರೆ ಪ್ರಿಯಾಂಕ್ ಖರ್ಗೆ ಅವರಿಗೆ ಯಾವುದೇ ಐಡೆಂಟಿಟಿ ಸಹ ಇಲ್ಲ. ಇಂತಹ ವ್ಯಕ್ತಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಆರೆಸ್ಸೆಸ್(RSS) ಬಗ್ಗೆ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸಂಘವನ್ನು ನೋಂದಣಿ ಮಾಡಿಸುವಂತೆ ಪತ್ರ ಬರೆಯಲು ಪ್ರಿಯಾಂಕ್ ಖರ್ಗೆ ಯಾರು? ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲೇ ಆರೆಸ್ಸೆಸ್ ಅಸ್ತಿತ್ವಕ್ಕೆ ಬಂದಿದೆ. ಈ ವಿಚಾರವನ್ನು ಪ್ರಿಯಾಂಕ ಖರ್ಗೆ ಅರಿಯಲಿ ಎಂದರು.

ಆರ್‌ಡಿಪಿಆರ್‌, ಐಟಿ ಬಿಟಿ ಸಚಿವರಾಗಿ ಹಿಂದೆ ಇದೇ ಪ್ರಿಯಾಂಕ್ ಖರ್ಗೆ ಮಾಡಿದ ಸಾಧನೆ ಏನು? ರಾಜ್ಯದಲ್ಲಿ ಮಟ್ಕಾ, ಇಸ್ಪೀಟ್‌ ಜೂಜಾಟ ಕೇಂದ್ರಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಇನ್ನೂ ಅನೇಕ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಐಜಿಪಿ, ಎಸ್ಪಿ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಮೊದಲು ಅಂತಹವುಗಳಿಗೆ ಪ್ರಿಯಾಂಕ್ ಖರ್ಗೆ ಕಡಿವಾಣ ಹಾಕಲಿ ಎಂದರು.

ಆರೆಸ್ಸೆಸ್ ಟೀಕಿಸೋದು ಮೊದಲು ನಿಲ್ಲಿಸಿ:

ಪ್ರಿಯಾಂಕ್ ಖರ್ಗೆ ನಿಮ್ಮ ಹಾಗೂ ನಿಮ್ಮ ತಂದೆಯ ಆಸ್ತಿ ಹಿಂದೆ ಎಷ್ಟು ಇತ್ತು? ಈಗ ಎಷ್ಟಾಗಿದೆ ಎಂಬುದನ್ನು, ಆಸ್ತಿಯ ಮೂಲ ಏನೆಂಬುದನ್ನು ಮೊದಲು ಬಹಿರಂಗಪಡಿಸಿ. ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ನೋಂದಣಿ ಆಗಿದೆಯಾ? ಮೊದಲು ದೇಶದ್ರೋಹಿ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಿ. ದೇಶಭಕ್ತ ಸಂಘಟನೆ ಆರೆಸ್ಸೆಸ್ ಬಗ್ಗೆ ಟೀಕಿಸುವುದನ್ನು ಮೊದಲು ನಿಲ್ಲಿಸಿ ಎಂದು ತಾಕೀತು ಮಾಡಿದರು.

ಏನು ಕ್ರಮ ಕೈಗೊಂಡಿದ್ದೀರಿ?:

ಅನಗತ್ಯವಾಗಿ ಹಿಂದುಗಳನ್ನು, ಸಂಘ ಪರಿವಾರವನ್ನು ಕೆಣಕಬೇಡಿ. ಇದೇ ರೀತಿ ನೀವು ಆಟವಾಡುತ್ತಿದ್ದರೆ ಮುಂಬರುವ 2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ನೆಲಕಚ್ಚುತ್ತದೆ. ವಿಧಾನಸೌಧದ 3ನೇ ಮಹಡಿಯಲ್ಲಿ ಪಾಕ್ ಪರ ಜೈಕಾರ ಹಾಕಿದ್ದ ನಿಮ್ಮ ಪಕ್ಷದ ಮುಖಂಡನ ವಿರುದ್ಧ ಎಫ್ಎಸ್‌ಎಲ್‌ ವರದಿ ಬಂದಿದೆ. ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಸಂಘವನ್ನು ಕೆಣಕಿದರೆ ಸರ್ವನಾಶವಾಗುತ್ತೀರಿ ಎಂದ ರೇಣುಕಾಚಾರ್ಯ, ಸಂಘವನ್ನು ಟೀಕಿಸಿದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತನಗೆ ಸಿಎಂ ಮಾಡುತ್ತಾರೆಂದು ಪ್ರಿಯಾಂಕ್ ಖರ್ಗೆ ಅವರು ಅಂದುಕೊಂಡಿರಬಹುದು ಎಂದು ಕುಟುಕಿದರು.

 ಭದ್ರಾ ಡ್ಯಾಂ ಬಳಿ ಜಿಲೆಟಿನ್ ಬಳಸಿ ಏಕಶಿಲೆ ಸ್ಫೋಟ: ಆರೋಪ

ದಾವಣಗೆರೆ: ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಡ್ಯಾಂ ಬಲ ನಾಲೆಯಿಂದ ಕೇವಲ 800 ಮೀಟರ್ ದೂರದಲ್ಲಿ ಏಕಶಿಲೆಯನ್ನು ಜಿಲೆಟಿನ್‌ ಕಡ್ಡಿಗಳನ್ನು ಇಟ್ಟು ಸ್ಫೋಟಿಸಿದ್ದು, ಇನ್ನೂ ನಾಲ್ಕೈದು ಸಲ ಸ್ಫೋಟಿಸುವ ಮಾಹಿತಿ ಇದೆ. ಇದು ಡ್ಯಾಂಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.18ರ ಮಧ್ಯಾಹ್ನ 2 ಗಂಟೆಗೆ ಜಿಲ್ಲೆಯ ರೈತರ ಒಕ್ಕೂಟದ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ರೈತ ಮುಖಂಡರು, ಅಚ್ಚುಕಟ್ಟು ರೈತರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಲಿದ್ದೇವೆ ಎಂದರು.

ಜಿಲೆಟಿನ್ ಇಟ್ಟು ಏಕಶಿಲೆ ಸ್ಫೋಟಿಸಿದರೆ ಭದ್ರಾ ಡ್ಯಾಂಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಜಾಕ್ ವೆಲ್ ನಿರ್ಮಿಸಲು ಏಕಶಿಲೆ ಸ್ಫೋಟಿಸುವ ಕೆಲಸವಾಗುತ್ತಿದೆ. ಜಾಕ್‌ವೆಲ್‌ ಹೆಸರಲ್ಲಿ ಭದ್ರಾ ಡ್ಯಾಂ ಭದ್ರಗೊಳಿಸುವ ಕೆಲಸ ಆಗಬಾರದು. ಕುಡಿಯುವ ನೀರು ಪೂರೈಸಲು ನಮ್ಮ ವಿರೋಧವಿಲ್ಲ. ಆದರೆ, ಅಚ್ಚುಕಟ್ಟು ರೈತರು, ಭದ್ರಾ ಡ್ಯಾಂಗೆ ಸಂಕಷ್ಟ ತಂದೊಡ್ಡುವುದಕ್ಕೆ ನಮ್ಮ ವಿರೋಧವಿದೆ ಎಂದು ಸ್ಪಷ್ಚಪಡಿಸಿದರು.

ಭದ್ರಾ ಡ್ಯಾಂ ನೀರನ್ನೇ ನೆಚ್ಚಿಕೊಂಡು ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದಲೂ ಜಿಲೆಟಿನ್ ಬಳಸಿ, ಏಕಶಿಲೆ ಸ್ಫೋಟಿಸುತ್ತಿದ್ದಾರೆ. ಜೂ.18ರಂದು ಸ್ಥಳ ಪರಿಶೀಲಿಸಿದ ನಂತರ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ, ಭದ್ರಾ ಡ್ಯಾಂ ಅಭದ್ರಗೊಳಿಸದಂತೆ ಒತ್ತಾಯಿಸಲಿದ್ದೇವೆ. ಒಂದುವೇಳೆ ಭದ್ರಾ ಡ್ಯಾಂಗೆ ಅಪಾಯವಾದರೆ ಲಕ್ಷಾಂತರ ಹೆಕ್ಟೇರ್‌ ಭೂಮಿಯನ್ನು, ಭದ್ರಾ ಡ್ಯಾಂ ನೀರನ್ನೇ ಅವಲಂಭಿಸಿದ ರೈತರ ಪಾಡೇನು ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಬಿಜೆಪಿ ರೈತ ಮೋರ್ಚಾ ಮುಖಂಡ ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳ್, ಎನ್.ಎಚ್.ಹಾಲೇಶ ನಾಯ್ಕ, ಜಯರುದ್ರಪ್ಪ ಇತರರು ಇದ್ದರು.

ಕಾಂಗ್ರೆಸ್ಸಿಗೆ ಹೊನ್ನಾಳಿ, ದಾವಣಗೆರೆಯಷ್ಟೇ ಅಲ್ಲ, ಇಡೀ ರಾಜ್ಯದಲ್ಲೇ ನರ ನಾಡಿ ಇಲ್ಲದಂತಾಗಿದೆ. ಅಭಿವೃದ್ಧಿ ಕಾಮಗಾರಿ ಮರೀಚಿಕೆಯಾಗಿವೆ. ಬಿಡದಿ ರೈತ ಭೂಮಿಯನ್ನು ಕಬಳಿಸಲು ಹೊರಟಿರುವುದು ಸರಿಯಲ್ಲ. ಈ ವಿಚಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಮಾತನಾಡುತ್ತಾರೆ. ನಿಮ್ಮ ಟೌನ್ ಶಿಪ್ ಯೋಜನೆ, ಕೈಗಾರಿಕಾ ಕಾರಿಡಾರನ್ನು ಬಂಜರು ಭೂಮಿಯಲ್ಲಿ ಮಾಡಿ. ಸಮೃದ್ಧವಾಗಿರುವ ಬಿಡದಿ ಕೃಷಿ ಭೂಮಿಯಲ್ಲಲ್ಲ.

- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.

-

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Karnataka Politics: ಜೂ.21ಕ್ಕೆ ಅಖಂಡ ಶ್ರೀನಿವಾಸಮೂರ್ತಿ ಎಚ್ಡಿಕೆ ಸಮ್ಮುಖದಲ್ಲಿ ಜೆಡಿಎಸ್ ದಳಕ್ಕೆ ಸೇರ್ಪಡೆ
MLC Election Drama: ಅಡ್ಡ ಮತ ಭೀತಿಯಲ್ಲಿ ಎಂಎಲ್ಸಿ ಚುನಾವಣೆ! 7ನೇ ಸ್ಥಾನ ಗೆಲ್ಲೋರ್‍ಯಾರು?