ಹಳ್ಳಿಮೈಸೂರಿನ ಜನತೆ ನನ್ನ ರಾಜಕೀಯ ಪ್ರಾರಂಭದ ದಿನಗಳಲ್ಲಿ ನನ್ನ ಜೊತೆಗೆ ನಿಂತು, ರಾಜಕೀಯವಾಗಿ ನಾನು ದೃಢವಾಗಿ ನಿಲ್ಲಲ್ಲು ಸಹಕರಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ.ದೇವೇಗೌಡ ತಿಳಿಸಿದರು.
ಹೊಳೆನರಸೀಪುರ (ಏ.04): ‘ಹಳ್ಳಿಮೈಸೂರಿನ ಜನತೆ ನನ್ನ ರಾಜಕೀಯ ಪ್ರಾರಂಭದ ದಿನಗಳಲ್ಲಿ ನನ್ನ ಜೊತೆಗೆ ನಿಂತು, ರಾಜಕೀಯವಾಗಿ ನಾನು ದೃಢವಾಗಿ ನಿಲ್ಲಲ್ಲು ಸಹಕರಿಸಿದ್ದಾರೆ. ಆ ದಿನಗಳನ್ನು ಎಂದಿಗೂ ಮರೆಯುವುದಿಲ್ಲ, ಶಕ್ತಿ ನೀಡಿದ ಮತದಾರರನ್ನು ಸದಾಕಾಲ, ನನ್ನ ಕಡೆ ಉಸಿರು ಇರುವ ತನಕ ಮರೆಯುವುದಿಲ್ಲ. ಕಡೆಯವರೆಗೂ ಅವರ ಸೇವೆಗೆ ಶ್ರಮಿಸುತ್ತೇನೆ’ ಎಂದು ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ.ದೇವೇಗೌಡ ತಿಳಿಸಿದರು. ತಾಲೂಕಿನ ಹಳ್ಳಿಮೈಸೂರಿನಲ್ಲಿ ಆಯೋಜನೆ ಮಾಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ, ‘ಹಾಸನ ಜಿಲ್ಲೆಯ ಮತದಾರರು ಒಂದಲ್ಲ ಒಂದು ಚುನಾವಣೆಯಲ್ಲಿ ನಮ್ಮ ಕುಟುಂಬದ ಕೈ ಹಿಡಿದಿದ್ದಾರೆ.
ನನ್ನ ರಾಜಕೀಯದ ಅನುಭವದಲ್ಲಿ ಜಿಲ್ಲೆಯ ಯಾವ ಭಾಗಕ್ಕೆ ಏನು ಕೆಲಸ ಆಗಬೇಕಿದೆ ಎಂದು ತಿಳಿದಿದ್ದೇನೆ, ಆ ಎಲ್ಲಾ ಕೆಲಸಗಳನ್ನು ಮಾಡಿ, ಜನರಿಗೆ ಅನುಕೂಲ ಕಲ್ಪಿಸುತ್ತೇನೆ, ರೇವಣ್ಣ ಹಾಗೂ ಪ್ರಜ್ವಲ್ ಕೂಡ ಹಗಲಿರುಳು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿರುತ್ತಾರೆ’ ಎಂದು ಹೇಳಿದರು. ಶಾಸಕ ಎ.ಮಂಜು ಮಾತನಾಡಿ, ಶಾಸಕನಾಗಿ, ಸಚಿವನಾಗಿ ಈ ಹೋಬಳಿಗೆ ಅತಿಹೆಚ್ಚು ಕೆಲಸ ಮಾಡಿದ್ದೇನೆ, ಜೆಡಿಎಸ್ ಪಕ್ಷ ಈಗ ಬಿಜೆಪಿ ಜೊತೆಯಲ್ಲೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುತಿದ್ದೇವೆ.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ನಮ್ಮ ಗುರಿ: ಬಿ.ವೈ.ರಾಘವೇಂದ್ರ
ಪಕ್ಷದ ಅಭ್ಯರ್ಥಿ ಪ್ರಜ್ವಲ್‌ನನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ, ಗೌಡರ ಅಭಿಮಾನವನ್ನು ಹೆಚ್ಚಿಸಿ ಎಂದರು. ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ‘ತಾಲೂಕಿಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ನೀಡಿದ್ದೇನೆ, ಶಾಲಾ, ಕಾಲೇಜು, ಆಸ್ಪತ್ರೆ, ರಸ್ತೆ, ಮನೆಗಳು ಎಲ್ಲವನ್ನೂ ನೀಡಿದ್ದೇನೆ, ಸದಾ ಕಾಲ ನಿಮ್ಮ ಜೊತೆಯಲ್ಲಿದ್ದು, ನಿಮಗೆ ಸ್ಪಂದಿಸಿದ್ದೇನೆ, ಪ್ರಜ್ವಲ್ ಕೂಡ ಸಂಸದನಾಗಿ ಕಳೆದ ಐದು ವರ್ಷದಲ್ಲಿ ಅತಿಹೆಚ್ಚು ಕೆಲಸ ಮಾಡಿದ್ದಾರೆ. ಮತ್ತೆ ಅವನನ್ನು ಸಂಸದನ್ನಾಗಿ ಮಾಡಿ, ನಿಮ್ಮ ಸೇವೆ ಮಾಡಲು ಸಹಕರಿಸಿ ಎಂದು ತಿಳಿಸಿದರು. ತಾಲೂಕಿನ ಜೆಡಿಎಸ್ ಅಧ್ಯಕ್ಷ ಪುಟ್ಟಸೋಮಪ್ಪ, ಗ್ರಾಪಂ ಅಧ್ಯಕ್ಷ ವಿಶ್ವನಾಥ್, ಇತರರು ಸಭೆಯಲ್ಲಿ ಇದ್ದರು.
ಮತ್ತೊಮ್ಮೆ ಕುಮಾರಸ್ವಾಮಿ ಸರ್ಕಾರ ಖಚಿತ: ಯಾರು ಏನೇ ಕುತ್ರಂತ್ರ ಮಾಡಿದರೂ, ಏನೇ ಹೋರಾಟ ನಡೆಸಿದರೂ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಸರ್ಕಾರ ಬರುವುದು ಖಚಿತ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.ತಾಲೂಕಿನ ಕಟ್ಟಾಯದಲ್ಲಿ ಸೋಮವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ೧೯೯೧ರಲ್ಲಿ ಲೋಕಸಭೆಗೆ ನಿಂತಾಗ ಎಲ್ಲ ಕಡೆ ದೇವೇಗೌಡರು ಸೋಲುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆಗ ಜಿಲ್ಲೆಯ ಜನರು ನನಗೆ ೩೩ ಸಾವಿರ ಲೀಡ್ ಕೊಟ್ಟು ಗೆಲ್ಲಿಸಿದ್ದನ್ನು ನಾನೆಂದಿಗೂ ಮರೆಯುವುದಿಲ್ಲ.
ಕಟ್ಟಾಯ ಹೋಬಳಿ ಒಂದರಲ್ಲೇ ೧೫ ಸಾವಿರ ಲೀಡ್ ಕೊಟ್ಟ ಹಿನ್ನೆಲೆಯಲ್ಲಿ ಲೋಕಸಭೆಗೆ ಹೋಗಿ ಪ್ರಧಾನಿಯಾಗಿದ್ದನ್ನು ಗೌಡರು ಸ್ಮರಿಸಿದರು. ಜಿಲ್ಲೆಯಲ್ಲಿ ಕೆಲವರು ಭಾಷಣ ಮಾಡಿದ್ದಾರೆ, ಅವರ ಹೆಸರನ್ನು ನಾನು ಹೇಳುವುದಿಲ್ಲ. ಸೋತಿದ್ದವರನ್ನು ಗಂಡಸಿ ಕ್ಷೇತ್ರದಲ್ಲಿ ಬೆಳೆಸಿದ್ದು ರೇವಣ್ಣ. ಇನ್ನೊಬ್ಬರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದೆ. ನಾನು ಅವರ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಶಾಸಕ ಶಿವಲಿಂಗೇಗೌಡ ಹಾಗೂ ಎಚ್.ಕೆ ಜವರೇಗೌಡ ಅವರಿಗೆ ಕುಟುಕಿದರು. ತಾನು ಪ್ರಧಾನಿ ಆಗಿದ್ದ ವೇಳೆ ಕಟ್ಟಾಯ ಭಾಗದ ಜನರ ಅನುಕೂಲಕ್ಕೆ ಯಗಚಿ ಜಲಾಶಯ ನಿರ್ಮಿಸಿದೆ.
ಯಾರೋ ಕಟ್ಟಿದ ಕೋಟೆಯಲ್ಲಿ ಸಿದ್ದರಾಮಯ್ಯ ಮೆರವಣಿಗೆ: ಸಂಸದ ಮುನಿಸ್ವಾಮಿ
ಆದರೆ ೧೯೯೧ ರಲ್ಲಿ ನನ್ನನ್ನು ಸೋಲಿಸಿ ಜಿ. ಪುಟ್ಟಸ್ವಾಮಿಗೌಡ ಹಾಸನ ಜಿಲ್ಲೆಯ ಸುಮಾರು ೪೫ ಸಾವಿರ ಎಕರೆ ಜಮೀನಿಗೆ ಅನುಕೂಲವಾಗಿದ್ದ ನೀರನ್ನು ಚಿಕ್ಕಮಗಳೂರಿಗೆ ಕೊಂಡೊಯ್ಯುವ ಕೆಲಸ ಮಾಡಿದ್ದರಿಂದ ಈ ಭಾಗದ ಜನರಿಗೆ ಅನಾನುಕೂಲವಾಗಿದೆ ಎಂದರು. ಸಭೆಯಲ್ಲಿ ಮಾಜಿ ಸಚಿವರಾದ ಎಚ್.ಡಿ. ರೇವಣ್ಣ, ಎಚ್.ಕೆ. ಕುಮಾರಸ್ವಾಮಿ, ಜೆಡಿಎಸ್ ಮುಖಂಡರಾದ ಕೆ.ಎಂ. ರಾಜೇಗೌಡ, ಬಿ.ವಿ. ಕರೀಗೌಡ, ಎಸ್. ದ್ಯಾವೆಗೌಡ, ರಂಗಶಟ್ಟಿ, ಮೊಸಳೆ ಹೊಸಳ್ಳಿ ಚಂದ್ರಣ್ಣ, ಕಾರ್ಲೆ ಇಂದ್ರೇಶ್, ನಾರಾಯಣಗೌಡ, ಮಾಯಿಗೌಡ, ಎಸ್.ಕೆ. ಕುಮಾರ್, ರುದ್ರಪ್ಪ ಇತರರು ಭಾಗವಹಿಸಿದ್ದರು.