
ಹೊಸದುರ್ಗ (ಜೂ.23): ಪರಿಶಿಷ್ಟ ಜಾತಿ ಪಂಗಡದ ಅಭಿವೃದ್ಧಿಗೆ ಮೀಸಲಿದ್ದ 187 ಕೋಟಿ ರು. ಅಕ್ರಮ ವರ್ಗಾವಣೆ ಆಗಿರುವುದಕ್ಕೆ ಸ್ವತಃ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ನೀಡಬೇಕೆಂದು ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಕಿಡಿಕಾರಿದರು.
ಹೊಸದುರ್ಗದ ಪ್ರವಾಸಿ ಮಂದಿರದಲ್ಲಿ ನಡೆದ ಬಿಜೆಪಿ ಎಸ್‌ಟಿ ಮೋರ್ಚಾ ಮಂಡಲ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದೀನದಲಿತರು ಮತ್ತು ಪರಿಶಿಷ್ಟ ಜಾತಿ ಪಂಗಡದವರ ಉದ್ದಾರಕ್ಕೆ ಇದ್ದೇವೆಂದು ಬೊಗಳೆ ಬಿಡುವ ಕಾಂಗ್ರೆಸ್ ಶಾಸಕರು ಮತ್ತು ಸಚಿವರು, 187 ಕೋಟಿ ರು. ಎಸ್‌ಟಿ ಸಮುದಾಯದ ಬಡವರು ಆನಂದದ ಬದುಕು ಕಟ್ಟಿಕೊಳ್ಳಲು ಇದ್ದ ಹಣವನ್ನು ರಾಜಕೀಯ ಅಭಿವೃದ್ಧಿಗೆ ಬಳಕೆ ಮಾಡಿಕೊಂಡಿದ್ದೀರಿ. ಇದನ್ನು ಪ್ರಶ್ನೆ ಮಾಡಬೇಕಾಗಿದೆ ಎಂದು ಹರಿಹಾಯ್ದರು.
ಅಭಿವೃದ್ಧಿಯ ವಿಚಾರದಲ್ಲಿ ರಾಜಕಾರಣ ಬೇಡ: ಶಾಸಕ ಜಿ.ಡಿ.ಹರೀಶ್ ಗೌಡ ತಾಕೀತು
ಸರ್ಕಾರದ ಹಸ್ತಕ್ಷೇಪವಿಲ್ಲದೆ ಇಷ್ಟೊಂದು ದೊಡ್ಡ ಆರ್ಥಿಕ ಅವ್ಯವಹಾರ ನಡೆಯಲು ಹೇಗೆ ಸಾಧ್ಯ? ಈ ಹಣವನ್ನು ಯಾವ ಅಭಿವೃದ್ಧಿಗೆ ಬಳಕೆ ಮಾಡಿಕೊಂಡಿದ್ದೀರೆಂಬುದನ್ನು ತಿಳಿಸಿ. ತೆಲಂಗಾಣ ಮತ್ತು ಆಂದ್ರದ ಚುನಾವಣೆಗೆ ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಹಣವೇ ಬೇಕಿತ್ತಾ? ಎಂದು ಪ್ರಶ್ನೆ ಮಾಡಿದರು. ರಾಜ್ಯ ಸರ್ಕಾರವು ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅನ್ಯಾಯ ಇದಾಗಿದೆ. ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುವವರು ಯಾರು?
ಈ ಹಿನ್ನೆಲೆ ಬರುವ 28ರಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ವಾಲ್ಮೀಕಿ ಸಮುದಾಯದ ಬೃಹತ್ ಪ್ರತಿಭಟನೆ ನಡೆಯಲಿದ್ದು, ನಮ್ಮ ಸಮುದಾಯದ ಹಣ ದುರ್ಬಳಕೆಯಾಗಿದ್ದು ಪಕ್ಷಾತೀತವಾಗಿ ವಾಲ್ಮೀಕಿ ಸಮಾಜದ ಬಂಧುಗಳು ಹಾಗೂ ಬಿಜೆಪಿಯ ಎಲ್ಲ ಸ್ತರದ ಕಾರ್ಯಕರ್ತರು ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಸುಮಾರು 25 ಸಾವಿರ ಕೋಟಿ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ಕೊಡುತ್ತಿದ್ದು, ವರ್ಗಾವಣೆಯ 187 ಕೋಟಿ ಹಣ ಹಣಕಾಸು ಇಲಾಖೆಯ ಅಡಿಯಲ್ಲಿಯೇ ನಡೆದಿದೆ. ಮುಖ್ಯಮಂತ್ರಿ ಅವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದರು.
ಸರ್ಕಾರಕ್ಕೆ ತಾಕತ್ತಿದ್ದರೆ ಜಿಪಂ, ಬಿಬಿಎಂಪಿ ಚುನಾವಣೆ ಘೋಷಿಸಲಿ: ಆರ್.ಅಶೋಕ್ ಸವಾಲು
ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್, ಕೆಎಸ್ ಕಲ್ಮಠ, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಶಿವಣ್ಣ, ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಕವನ, ಪ್ರಶಾಂತ್, ವೀರಭದ್ರಪ್ಪ, ದೇವರಾಜ್ ಕಡವಗೆರೆ, ಮಾಜಿ ಜಿಪಂ ಸದಸ್ಯ ರಮೇಶ್, ಇಂದು ಅಶೋಕ್, ಅನುಸೂಯಮ್ಮ, ಪಾರ್ವತಮ್ಮ, ನಾಗರಾಜ್, ಮಂಜುನಾಥ್, ಶ್ರೀಧರ್ ಹಾಗೂ ಕಾರ್ಯಕರ್ತರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.