
ಬೆಂಗಳೂರು (ಅ.29): ಹೊಸಕೋಟೆ ರಾಜಕೀಯದಲ್ಲಿ ಬಂಡಾಯ ತೀವ್ರಗೊಳ್ಳುತ್ತಿದ್ದು, ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಬಿಜೆಪಿ ಮುಖಂಡ ಶರತ್ ಬಚ್ಚೇಗೌಡ ಅವರ ಮನವೊಲಿಕೆ ಮಾಡುವಂತೆ ಅನರ್ಹಗೊಂಡಿರುವ ಎಂ.ಟಿ.ಬಿ.ನಾಗರಾಜ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಎಂ.ಟಿ.ಬಿ.ನಾಗರಾಜ್ ಭೇಟಿ ಮಾಡಿ ಕೆಲ ಸಮಯ ಸಮಾಲೋಚನೆ ನಡೆಸಿದರು. ಉಪ ಚುನಾವಣೆಗೆ ಎದುರಾಳಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಶರತ್ ಬಚ್ಚೇಗೌಡ ಅವರ ಮನವೊಲಿಕೆ ಮಾಡಿ ಕಣದಿಂದ ಹಿಂದೆ ಸರಿಯವಂತೆ ಮಾಡಬೇಕು ಎಂದು ಒತ್ತಡ ಹೇರಿದರು. ಹೊಸಕೋಟೆ ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧಿಸಲು ಶರತ್ ಬಚ್ಚೇಗೌಡ ಸಿದ್ಧತೆ ನಡೆಸುತ್ತಿದ್ದು, ಟಿಪ್ಪು ಜಯಂತಿ ಆಚರಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಸಂಚಲನ ಉಂಟುಮಾಡಿದ್ದಾರೆ. ಹೀಗಾಗಿ ಶರತ್ ಅವರನ್ನು ಕರೆದು ಬುದ್ಧಿ ಹೇಳಬೇಕು. ತನ್ಮೂಲಕ ನನ್ನ ರಾಜಕೀಯ ಹಾದಿ ಸುಗಮ ಮಾಡಿಕೊಡಬೇಕು ಎಂದು ಕೋರಿದರು ಎಂದು ಮೂಲಗಳು ತಿಳಿಸಿವೆ.
ರಾಜ್ಯಕ್ಕೆ ಮರಳಿದ ಡಿಕೆಶಿ, ಮೊದಲ ಏಟು ಇವರಿಗೆ
ಇದಲ್ಲದೇ, ಅನರ್ಹರ ಅರ್ಜಿ ಕುರಿತಾದ ಸುಪ್ರೀಂಕೊರ್ಟ್‌ನ ತೀರ್ಪಿನ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈ ವೇಳೆ ಎಂ.ಟಿ.ಬಿ.ನಾಗರಾಜ್‌ಗೆ ಯಡಿಯೂರಪ್ಪ ಧೈರ್ಯ ತುಂಬಿದರು. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ, ನಮ್ಮ ಪರವೇ ತೀರ್ಪು ಬರಲಿದೆ. ತಾಳ್ಮೆಯಿಂದ ಇರಿ, ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಸಮಾಧಾನ ಹೇಳಿದರು.
ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಎಂ.ಟಿ.ಬಿ.ನಾಗರಾಜ್, ನಮ್ಮ ತಾಲೂಕಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಇದಕ್ಕಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದು, ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಟಿಪ್ಪು ಜಯಂತಿಗೆ ಸಂಬಂಧಪಟ್ಟಂತೆ ಶರತ್ ಬಚ್ಚೇಗೌಡ ಹೇಳಿಕೆಗೆ ಪ್ರತಿಕಿಯೆ ನೀಡಿ, ಅವರ ಹೇಳಿಕೆಗೆ ಅವರೇ ಸಮರ್ಥನೆ ಕೊಡಬೇಕು. ಸ್ವತಂತ್ರ ಅಭ್ಯರ್ಥಿ ಎಂದು ಹೇಳಿಕೊಂಡು ಈಗಾಗಲೇ ಪ್ರಚಾರ ಮಾಡುತ್ತಿದ್ದಾರೆ. ನ್ಯಾಯಾಲಯದ ತೀರ್ಪಿನ ಬಳಿಕ ಯಾವ ಪಕ್ಷದಿಂದ ಕಣಕ್ಕಿಳಿಯಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ. ಬಿಜೆಪಿಯಿಂದ ಕಣಕ್ಕಿಳಿಯುತ್ತೇವೆ ಎಂಬುದು ಲೋಕಾರೂಢಿ ಸತ್ಯ ಎಂದು ಹೇಳಿದರು.
ಮಧ್ಯಂತರ ಚುನಾವಣೆ ಬರಲಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಇನ್ನೂ ಮೂರು ವರ್ಷಗಳ ಕಾಲ ಬಿಜೆಪಿ ಸರ್ಕಾರ ಸುಭದ್ರವಾಗಿರಲಿದೆ. ಗುಂಪುಗಾರಿಕೆ ಮಾಡಿ ಲೋಕಸಭೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಜಯಗಳಿಸಿದೆ. ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷದ ನಾಯಕತ್ವ ಬದಲಾಗಿದೆ. ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇದ್ದು, ನಾಯಕತ್ವದ ಕೊರತೆ ಇದೆ ಎಂದು ತಿಳಿಸಿದರು.
ಟಿಪ್ಪು ಜಯಂತಿ ಆಚರಿಸುವುದಾಗಿ ಹೇಳಿದ ಶರತ್ ಬಚ್ಚೇಗೌಡ
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.