ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲಾ ಬರಗಾಲ ಬರುವುದು ಸತ್ಯ: ಸಿ.ಟಿ.ರವಿ

By Kannadaprabha News  |  First Published Sep 8, 2023, 12:54 PM IST

ಜನರೊಂದಿಗೆ ಬಿಜೆಪಿ ಕಾರ್ಯಕರ್ತರ ಸಂಬಂಧ ಗಟ್ಟಿಯಾಗಿ ಬೆಳೆಯಬೇಕು. ಅವರ ಕಷ್ಟ, ಸುಖದ ಜೊತೆಗೆ ಭಾಗಿಯಾಗಿ ಅದಕ್ಕೊಂದು ಸಾಂಸ್ಥಿಕ ರೂಪ ನೀಡಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಕರೆ ನೀಡಿದರು.


ಚಿಕ್ಕಮಗಳೂರು (ಸೆ.08): ಜನರೊಂದಿಗೆ ಬಿಜೆಪಿ ಕಾರ್ಯಕರ್ತರ ಸಂಬಂಧ ಗಟ್ಟಿಯಾಗಿ ಬೆಳೆಯಬೇಕು. ಅವರ ಕಷ್ಟ, ಸುಖದ ಜೊತೆಗೆ ಭಾಗಿಯಾಗಿ ಅದಕ್ಕೊಂದು ಸಾಂಸ್ಥಿಕ ರೂಪ ನೀಡಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಕರೆ ನೀಡಿದರು. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಪ್ರವಾಸಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಬೂತ್ ಮಟ್ಟದ ಕಾರ್ಯಕರ್ತರನ್ನು ಸಕ್ರಿಯ ಹಾಗೂ ಜನಸ್ನೇಹಿಗೊಳಿಸಬೇಕು. ಒಂದು ರಾಜಕೀಯ ಪಕ್ಷಕ್ಕೆ ಕಾರ್ಯಕರ್ತ ಪಕ್ಷದ ಸಭೆಗೆ ಬರುವುದರಿಂದ ಮಾತ್ರ ಶಕ್ತಿ ಬರುವುದಿಲ್ಲ. ಆತ ಜನರ ನಡುವೆಯೂ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ನಾವು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮಾತ್ರ ರಾಜಕೀಯ ಪಕ್ಷ ಕಟ್ಟಿಲ್ಲ. ಸಮಾಜದಲ್ಲಿ ಪರಿವರ್ತನೆ ತರಬೇಕು ಎನ್ನುವುದು ನಮ್ಮ ಉದ್ದೇಶ. ಜಾತಿ, ಭೇದ ಹೋಗಲಿ ಎಂದು ಬೋರ್ಡ, ಫ್ಲೆಕ್ಸ್ ಹಾಕಿದರೆ ಹೋಗುವುದಿಲ್ಲ. ಸಂಬಂಧಗಳನ್ನು ಕಟ್ಟಿದರೆ ಮಾತ್ರ ಅದು ಸಾಧ್ಯವಾಗುತ್ತದೆ ಎಂದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತ ವಿದ್ಯಾನಿಧಿ ರದ್ದುಪಡಿಸಿದೆ. ಸಿದ್ದರಾಮಯ್ಯ ಮುಖ್ಯ ಮಂತ್ರಿ ಆದಾಗಲೆಲ್ಲಾ ಬರಗಾಲ ಬರುವುದು ಸತ್ಯ. ಇಂತಹ ವಿಚಾರಗಳನ್ನು ಜನರ ಗಮನಕ್ಕೆ ತರಬೇಕು. ವಾಟ್ಸ್ ಆ್ಯಪ್‌ ಗ್ರೂಪ್‌ಗೆ ಮತದಾರರನ್ನು ಸೇರ್ಪಡೆಗೊಳಿಸಬೇಕು. ಹಿಂದಿನವರು ತಂದಿದ್ದ ಅನುದಾನಕ್ಕೆ ಈಗ ಗುದ್ದಲಿ ಪೂಜೆ ನಡೆಯುತ್ತಿದೆ. ಇವರ ಯೋಗ್ಯತೆಗೆ ಒಂದು ಪೈಸೆ ತಂದಿಲ್ಲ ಅದನ್ನು ಜನತೆಗೆ ಹೇಳ ಬೇಕು ಎಂದರು.

Latest Videos

undefined

ರಾಜ್ಯವನ್ನು ಕತ್ತಲೆಯಲ್ಲಿಡುವುದು ಕಾಂಗ್ರೆಸ್‌ನ 6ನೇ ಗ್ಯಾರಂಟಿ: ಗೋವಿಂದ ಕಾರಜೋಳ ಟೀಕೆ

ಕಾಂಗ್ರೆಸ್ ಸರ್ಕಾರದ100 ದಿನಗಳು ಕಳೆದಿವೆ. 100 ದಿನಗಳಲ್ಲಿ ನೂರಾರು ತಪ್ಪುಗಳು ಎನ್ನುವ ಚಾರ್ಜ್‌ ಶೀಟನ್ನೂ ನಾವು ಹೊರತಂದಿದ್ದೇವೆ. ಕಾರ್ಯಕರ್ತರು ಆ ತಪ್ಪುಗಳನ್ನು ಗಮನಿಸಬೇಕು. ರೈತರಲ್ಲದವರು ಕೃಷಿ ಭೂಮಿ ಖರೀದಿಸುವ ಅವಕಾಶ ರದ್ದು ಪಡಿಸಿದ್ದಾರೆ. ಪ್ರತಿ ಗ್ರಾಪಂನಲ್ಲಿ ಯುವಕ ಸಂಘ ತೆರೆಯುವ ಯುವಶಕ್ತಿ ಯೋಜನೆ ರದ್ದು ಪಡಿಸಿದ್ದಾರೆ. ಸ್ವಸಹಾಯ ಸಂಘಕ್ಕೆ 5 ಲಕ್ಷ ರು. ನೀಡುವ ಸ್ತ್ರೀ ಸಾಮರ್ಥ್ಯ ಯೋಜನೆ,. ರೈತರಿಗೆ 10 ಸಾವಿರ ರು. ನೀಡುವ ಭೂ ಸಿರಿ ಯೋಜನೆ ರದ್ದು ಮಾಡಿದ್ದಾರೆ. ಶ್ರಮಶಕ್ತಿ, ಕ್ಷೀರ ಸಮೃದ್ಧಿ ಯೋಜನೆ, ರೈತರಿಗೆ ವಾರ್ಷಿಕ 4 ಸಾವಿರ ರು.ನೀಡುವ ಕಿಸಾನ್ ಸಮ್ಮಾನ್ ನಿಧಿಗಳನ್ನು ರದ್ದು ಪಡಿಸಿದ್ದಾರೆ ಇದನ್ನು ಜನರ ಮಧ್ಯೆ ಕೊಂಡೊಯ್ಯಬೇಕು ಎಂದರು.

ಗರೀಬಿ ಕಲ್ಯಾಣ ಯೋಜನೆಯಲ್ಲಿ ಹಿಂದೆ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿತ್ತು. ಸಿದ್ದರಾಮಯ್ಯ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು. ಈಗ ಕೇಂದ್ರ ಕೊಡುತ್ತಿರುವುದರಲ್ಲೂ ಕಡಿತ ಮಾಡಿದ್ದಾರೆ. ಎಸ್ಸಿ ಮತ್ತು ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ 11 ಕೋಟಿ ರು.ಅನುದಾನ ಗ್ಯಾರೆಂಟಿಗೆ ಬಳಸುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಯಾವ ಎಸ್ಸಿ, ಎಸ್ಟಿ ಸಚಿವರು, ಮುಖಂಡರು ಪ್ರಶ್ನೆ ಮಾಡಲೇ ಇಲ್ಲ. ಇದರಿಂದ ಆ ಸಮಾಜಕ್ಕೆ ನಷ್ಟವಾಗಿದೆ. ಮದ್ಯದಿಂದ ಹಿಡಿದು ವಿದ್ಯುತ್ ಎಲ್ಲಾ ಬೆಲೆಯನ್ನೂ ಏರಿಸಿದ್ದಾರೆ. ಅಭಿವೃದ್ಧಿಗೆ ಕೊಟ್ಟ ಎಲ್ಲಾ ಅನುದಾನ ತಡೆ ಹಿಡಿದಿದ್ದಾರೆ ಎಂದರು.

ಗೃಹಲಕ್ಷ್ಮೀಯಿಂದ ಅತ್ತೆ ಸೊಸೆಗೆ ಜಗಳ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಬಿಜೆಪಿ: ಡಿಕೆಶಿ

ತಮಿಳು ನಾಡಿಗೆ ಕಾವೇರಿ ನೀರು ಬಿಟ್ಟರು ಅದನ್ನು ಯಾರೂ ಪ್ರಶ್ನಿಸಲೇ ಇಲ್ಲ. ಕೇಂದ್ರ ಗ್ಯಾಸ್ ಬೆಲೆ ಕಡಿಮೆ ಮಾಡಿದೆ ಇದನ್ನು ಜನರ ಗಮನಕ್ಕೆ ತರಬೇಕು. ರೈತರು 5 ಲಕ್ಷ ರು.ಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಅವರಿಗೆ 10 ಲಕ್ಷ ಕೊಡುತ್ತೇವೆ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಪ್ರಶ್ನಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಕಾರ್ಯದರ್ಶಿ ಬೆಳವಾಡಿ ರವೀಂದ್ರ, ಗ್ರಾಮಾಂತರ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಕುರುವಂಗಿ ವೆಂಕಟೇಶ್, ಪಿಳ್ಳೇನಳ್ಳಿ ರಮೇಶ್ ಇದ್ದರು.

click me!