ಬೆಳಗಾವಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿದ ಸಿದ್ದರಾಮಯ್ಯ ಸರ್ಕಾರ ಹಿಟ್ಲರ್ ಸರ್ಕಾರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ್ ನಿರಾಣಿ ತೀವ್ರ ಕಿಡಿಕಾರಿದ್ದಾರೆ.
ಬಾಗಲಕೋಟೆ (ಡಿ.12): ಬೆಳಗಾವಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿದ ಸಿದ್ದರಾಮಯ್ಯ ಸರ್ಕಾರ ಹಿಟ್ಲರ್ ಸರ್ಕಾರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ್ ನಿರಾಣಿ ತೀವ್ರ ಕಿಡಿಕಾರಿದ್ದಾರೆ. ಪ್ರತಿಭಟನಾಕಾರರು ಮೊದಲೇ ಡಿ.10ನೇ ತಾರೀಖು ಉಲ್ಲೇಖಿಸಿ ಗುಡುವು ನೀಡಿದ್ದರು. ಮಧ್ಯಾಹ್ನ 1ರವರೆಗೆ ಯೋಗ್ಯ ನಿರ್ಣಯ ನೀಡಬೇಕು. ಇಲ್ಲದಿದ್ದರೆ ಮುತ್ತಿಗೆ ಹಾಕೋದಾಗಿ ಪಂಚಮಸಾಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಹೋರಾಟಗಾರರಿಗೆ ಸ್ಪಂದಿಸಲಿಲ್ಲ.
ಸ್ಥಳಕ್ಕೆ ಬಂದು ಮನವಿ ಪಡೆಯದೆ ನೆಪ ಮಾತ್ರಕ್ಕೆ 10 ಜನರನ್ನು ಭೇಟಿಯಾಗಲು ಹೇಳಿದ್ದೇ ಅವರೇ ಬರಲಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಇದರಿಂದ ಹೋರಾಟಗಾರರ ಸಹನೆ ಕಟ್ಟೆ ಒಡೆದಿದೆ. ಆದರೂ ಶಾಂತ ರೀತಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದರು. ಆದರೆ ಸರ್ಕಾರ ಹೋರಾಟಗಾರರ ಮನವೊಲಿಸುವ ಬದಲು ಲಾಠಿ ಚಾರ್ಜ್ ಮಾಡಿ ಹಿಟ್ಲರ್ ಧೋರಣೆ ಅನುಸರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಾಯಕ ಹೋರಾಟಗಾರರ ಕೈ ಮುರಿದಿವೆ. ತಲೆ ಒಡೆದು ಗಂಭೀರ ಗಾಯಗಳಾಗಿವೆ. ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಹೋರಾಟಗಾರರ ಮೇಲೆ ಎಂದೂ ಬಲಪ್ರಯೋಗ ಮಾಡಿಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಮಾಯಕ ಹೋರಾಟಗಾರರ ಮೇಲೆ ದಬ್ಬಾಳಿಕೆ ಮಾಡಿದೆ. ಪಂಚಮಸಾಲಿ ಸಮಾಜದ ಜನ ಮುಂದೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮೈಮೇಲೆ ಬಿದ್ದ ಲಾಠಿ ಏಟು ಪಂಚಮಸಾಲಿ ಸಮಾಜ ಎಂದೂ ಮರೆಯೋಲ್ಲ: ಸಿದ್ದರಾಮಯ್ಯ ಸರ್ಕಾರಕ್ಕೆ ನಿರಾಣಿ ಎಚ್ಚರಿಕೆ
ತಕ್ಷಣ ಸಿಎಂ ಸಿದ್ದರಾಮಯ್ಯ ಹೋರಾಟಗಾರರ ಮೀಸಲಾತಿ ಹೋರಾಟಕ್ಕೆ ಉತ್ತರ ನೀಡಬೇಕೆಂದು ಆಗ್ರಹ ಮಾಡಿದರು. ಪಂಚಮಸಾಲಿ ಸಮಾಜ ಬಾಂದವರು ಕೃಷಿ ಕುಟುಂಬದಿಂದ ಬಂದ ರೈತರು. ರೈತರೇ ದೇಶಕ್ಕೆಅನ್ನ ಹಾಕುವಂತವರು. ಅಂತವರ ಮೇಲೆ ಪೊಲೀಸರು ಲಾಠಿ ಪ್ರ ಹಾರ ಮಾಡಿದ್ದರಿಂದ ಅವರ ಸಹನೆ ಕಟ್ಟೆ ಒಡೆದಿದೆ. ಬರುವಂತ ದಿವ ಸದಲ್ಲಿ ಸಮಾಜದ ಜನ ಬಡ್ಡಿ ಸಮೇತ ಇದಕ್ಕೆ ಉತ್ತರ ಕೊಡುತ್ತಾರೆ. ಇದಕ್ಕಿಂತ ಮುಂದೆ ಇದಕ್ಕಿಂತ ಉಗ್ರ ಹೋರಾಟ ನಡೆಸುತ್ತೇವೆ. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರು ಪಂಚಮಸಾಲಿ ಶ್ರೀಗಳ ಹಾಗೂ ಪಂಚಮ ಸಾಲಿ ಹೋರಾಟಗಾರರ ಕ್ಷಮೆ ಕೇಳ ಬೇಕೆಂದು ಕೂಡ ಆಗ್ರಹ ಮಾಡಿದ್ದಾರೆ.