ಬೆಳಗಾವಿಯಲ್ಲಿ 2ಎ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದ ಕೂಡಲ ಸಂಗಮ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮುಗಿಸಲು, ಹೋರಾಟಗಾರರ ಮೇಲೆ ಗೋಲಿಬಾರ್ ಮಾಡಲು ಸಂಚು ಮಾಡಿದ್ದರು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.
ದಾವಣಗೆರೆ (ಡಿ.15): ಬೆಳಗಾವಿಯಲ್ಲಿ 2ಎ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದ ಕೂಡಲ ಸಂಗಮ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮುಗಿಸಲು, ಹೋರಾಟಗಾರರ ಮೇಲೆ ಗೋಲಿಬಾರ್ ಮಾಡಲು ಸಂಚು ಮಾಡಿದ್ದರು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಸ್ಫೋಟಕ ಹೇಳಿಕೆ ನೀಡಿರುವ ಅವರು, ಶ್ರೀ ಜಯ ಮೃತ್ಯುಂಜಯ ಸ್ವಾಮಿಗಳು ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಪ್ರತಿಭಟನೆ ನೇತೃತ್ವ ವಹಿಸಿರುವ ಅವರನ್ನೇ ಮುಗಿಸಿದರೆ, ರಾಜ್ಯದಲ್ಲಿ ಇಡೀ ಹೋರಾಟವೇ ನಿಲ್ಲುತ್ತದೆಂದು ಗೋಲಿಬಾರ್ ಮಾಡಲು ಕೆಲವರು ಪ್ಲಾನ್ ಮಾಡಿಕೊಂಡಿದ್ದರು ಎಂದರು.
ಶ್ರೀಗಳು, ಸಮಾಜದ ಮುಖಂಡರು, ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು. ಹೋರಾಟಗಾರರ ಲಾಠಿ ಬೀಸದೇ, ಮುತ್ತು ಕೊಡಲು ಕೇಳಬೇಕಿತ್ತಾ ಎಂಬುದಾಗಿ ಲಘುವಾಗಿ ಮಾತನಾಡಿರುವ ಗೃಹ ಸಚಿವ ಡಾ.ಪರಮೇಶ್ವರ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನಿನ್ನೆ, ಮೊನ್ನೆ 2ಎ ಮೀಸಲಾತಿ ಹೋರಾಟಕ್ಕೆ ಕರೆ ಕೊಟ್ಟಿದ್ದಾರಾ? ಪಾದಯಾತ್ರೆಯಲ್ಲಿ ನಾವೂ ಪಾಲ್ಗೊಂಡಿದ್ದೆವು. ನಿಮ್ಮದೇ ಕಾಂಗ್ರೆಸ್ಸಿನ ನಾಯಕರು, ಹಾಲಿ-ಮಾಜಿ ಸಚಿವರು, ಶಾಸಕರು ಸಹ ಈ ಹೋರಾಟದಲ್ಲಿದ್ದವರೆ.
ಪಂಚಮಸಾಲಿ, ಮಲೆಗೌಡ, ಗೌಡ ಲಿಂಗಾಯತ, ದೀಕ್ಷಾ ಗೌಡಗೂ ಮೀಸಲಾತಿ, ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ನಿರಂತರ ಹೋರಾಡುತ್ತಾ ಬಂದಿದ್ದಾರೆ. ಸ್ವಾಮೀಜಿ ಮೇಲಿನ ಹಲ್ಲೆ, ದೌರ್ಜನ್ಯ, ಬಂಧನವನ್ನು ಸಮಸ್ತ ಮಠಾಧೀಶರು, ಸ್ವಾಮೀಜಿಗಳು ಖಂಡಿಸಬೇಕು ಎಂದರು. ರಾಣೆಬೆನ್ನೂರು ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿದರು. ಸಮಾಜದ ಮುಖಂಡರಾದ ಬಿ.ಜಿ. ಅಜಯಕುಮಾರ, ಚಂದ್ರಶೇಖರ ಪೂಜಾರ, ಲೋಕಿಕೆರೆ ನಾಗರಾಜ, ದಯಾನಂದ, ಜಯರುದ್ರೇಶ, ಕಿರಣ್, ಜಯಣ್ಣ ಇತರರು ಇದ್ದರು.
150 ಕೋಟಿ ಆಮಿಷವೊಡ್ಡಿದ ವಿಜಯೇಂದ್ರ ಮೇಲೆ ಪ್ರಧಾನಿ ಸಿಬಿಐ ತನಿಖೆ ಮಾಡಿಸ್ಲಿ: ಸಿದ್ದರಾಮಯ್ಯ
ಸಿದ್ದರಾಮಯ್ಯರದು ದ್ವಂದ್ವ ನೀತಿ: ಪಾಕಿಸ್ತಾನ ಜಿಂದಾಬಾದ್ ಅನ್ನೋರನ್ನ ಪೋಷಿಸುವ, ಕಲ್ಲು ತೂರಾಟ ಮಾಡುವವರ, ಠಾಣೆ-ವಾಹನಗಳಿಗೆ ಬೆಂಕಿ ಹಚ್ಚಿದ್ದವರ ಮೇಲಿನ ಕೇಸ್ ಖುಲಾಸೆಗೆ ಮುಂದಾಗಿರುವ ಸಿದ್ದರಾಮಯ್ಯ ಪಂಚಮಸಾಲಿಗಳ ಹೋರಾಟದಲ್ಲಿ ಅಂತಹದ್ದೇನು ದೊಡ್ಡ ಅಪರಾಧ ಕಂಡರು? ಖಾವಿ ಕಂಡರೆ ನಿಮಗೇಕೆ ಅಷ್ಟು ದ್ವೇಷ, ಭಯ? ಜಮೀರ್ ಅಹಮ್ಮದ್‌ನಂತಹ ಮತಾಂಧನಿಗೆ ಪ್ರೀತಿಸುವ ನೀವು ಅದೇ ಹಿಂದುಗಳು, ಮಠ ಮಂದಿರಗಳು, ಅಮಾಯಕ ರೈತರ ಆಸ್ತಿ, ಜಮೀನನ್ನು ವಕ್ಫ್ ಕಬಳಿಸುತ್ತಿದ್ದರೂ ಮೌನವಾಗಿದ್ದೀರಿ. ಇದು ನಿಮ್ಮ ದ್ವಂಧ್ವ ನೀತಿ, ನಿಲುವಿಗೆ ಸಾಕ್ಷಿ. ಚರ್ಚೆಗೆ ಬರಲು ಹೇಳಿ ಪಂಚಮಸಾಲಿ ಶ್ರೀ, ಸಮಾಜದವರ ಮೇಲೆ ಪೊಲೀಸರಿಂದ ದೌರ್ಜನ್ಯ ಎಸಗಿದ್ದು ಯಾವ ನ್ಯಾಯ ಎಂದು ಎಂ.ಪಿ. ರೇಣುಕಾಚಾರ್ಯ ಪ್ರಶ್ನಿಸಿದರು.