ಸಂವಿಧಾನ ಹಾಳು ಮಾಡಿದ್ದೇ ಕಾಂಗ್ರೆಸ್: ನೆಹರು ಕುಟುಂಬದ ಮೇಲೆ ಪ್ರಧಾನಿ ಮೋದಿ ಅಕ್ರೋಶ

By Kannadaprabha News  |  First Published Dec 15, 2024, 5:16 AM IST

‘ರಕ್ತದ ರುಚಿ ಕಂಡಿದ್ದ ಕಾಂಗ್ರೆಸ್ ಪಕ್ಷವು ಪದೇ ಪದೇ ಸಂವಿಧಾನಕ್ಕೆ ಹಾನಿ ಮಾಡಿತು. ಆದರೆ 2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಭಾರತದ ಶಕ್ತಿ ಮತ್ತು ಏಕತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಸಂವಿಧಾನದ ದೃಷ್ಟಿಗೆ ಅನುಗುಣವಾಗಿ ನೀತಿ-ನಿರ್ಧಾರ ಕೈಗೊಂಡಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 


ನವದೆಹಲಿ (ಡಿ.15): ‘ರಕ್ತದ ರುಚಿ ಕಂಡಿದ್ದ ಕಾಂಗ್ರೆಸ್ ಪಕ್ಷವು ಪದೇ ಪದೇ ಸಂವಿಧಾನಕ್ಕೆ ಹಾನಿ ಮಾಡಿತು. ಆದರೆ 2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಭಾರತದ ಶಕ್ತಿ ಮತ್ತು ಏಕತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಸಂವಿಧಾನದ ದೃಷ್ಟಿಗೆ ಅನುಗುಣವಾಗಿ ನೀತಿ-ನಿರ್ಧಾರ ಕೈಗೊಂಡಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಸಂವಿಧಾನವನ್ನು ಹಾಳು ಮಾಡಿದ್ದೇ ಕಾಂಗ್ರೆಸ್’ ಎಂಬ ತಮ್ಮ ಮಾತಿಗೆ ಎಳೆ ಎಳೆಯಾಗಿ ಉದಾಹರಣೆ ನೀಡಿರುವ ಅವರು, ‘ಆರಂಭದಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್‌ ನೆಹರು ಸಂವಿಧಾನ ತಮಗೆ ಅಡ್ಡಿಯಾದರೆ ಬದಲಿಸಬೇಕೆಂದು ಸಿಎಂಗಳಿಗೆ ಪತ್ರ ಬರೆದಿದ್ದರು. 

ಸಂವಿಧಾನಕ್ಕೆ 25 ವರ್ಷ ಆದಾಗ ಅವರ ಪುತ್ರಿ ಇಂದಿರಾ ಗಾಂಧಿ ತುರ್ತುಸ್ಥಿತಿ ಜಾರಿಗೊಳಿಸಿ ಸಂವಿಧಾನವನ್ನೇ ಹರಿದೆಸೆದರು. ದೇಶವನ್ನೇ ಜೈಲು ಮಾಡಿದರು. ಅವರ ಪುತ್ರ ರಾಜೀವ್ ಗಾಂಧಿ ಅವರು ಶಾ ಬಾನೋ ಕೇಸಿನ ತೀರ್ಪನ್ನೇ ಬುಡಮೇಲು ಮಾಡುವ ಕಾಯ್ದೆ ತಂದರು. ಅವರ ಪತ್ನಿ ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆಗಿಂತ ಮೇಲಿನ ಸ್ಥಾನ ಪಡೆದರು. ಅವರ ಮಗ ರಾಹುಲ್‌ ಗಾಂಧಿ ಸುಗ್ರೀವಾಜ್ಞೆಯನ್ನೇ ಹರಿದು ಸಂವಿಧಾನಕ್ಕೆ ಅಪಚಾರ ಎಸಗಿದರು’ ಎಂದಿದ್ದಾರೆ.

Tap to resize

Latest Videos

ಕಾನೂನು ನನಗೂ ಒಂದೇ, ಸ್ವಾಮೀಜಿಗೂ ಒಂದೇ: ಸಿಎಂ ಸಿದ್ದರಾಮಯ್ಯ

ಡಾ। ಬಿ.ಆರ್. ಅಂಬೇಡ್ಕರ್ ವಿರಚಿತ ಸಂವಿಧಾನ ಅಂಗೀಕಾರದ 75ನೇ ವರ್ಷಾಚರಣೆ ನಿಮಿತ್ತ ಲೋಕಸಭೆಯಲ್ಲಿ ನಡೆದ 2 ದಿನಗಳ ಚರ್ಚೆಗೆ ಶನಿವಾರ ಸಂಜೆ 1 ಗಂಟೆ 50 ನಿಮಿಷದ ಸುದೀರ್ಘ ಭಾಷಣದಲ್ಲಿ ಉತ್ತರಿಸಿದ ಅವರು, ‘ಹಿಂದಿನ ಕಾಂಗ್ರೆಸ್ ಸರ್ಕಾರಗಳು ದೇಶದ ವೈವಿಧ್ಯತೆಯಲ್ಲಿ ‘ವಿಷಬೀಜ’ ಬಿತ್ತಿದವು. ಸಂವಿಧಾನಕ್ಕೆ ಹೊಡೆತ ನೀಡುವ ಯಾವುದೇ ಅವಕಾಶವನ್ನೂ ಅವು ಬಿಡಲಿಲ್ಲ. ಒಂದು ಕುಟುಂಬವು (ನೆಹರು-ಗಾಂಧಿ ಕುಟುಂಬ) ಪ್ರತಿ ಹಂತದಲ್ಲೂ ಸಂವಿಧಾನಕ್ಕೆ ಅಡ್ಡಿ ಮಾಡಿತು’ ಎಂದು ಆರೋಪಿಸಿದರು. ತುರ್ತು ಪರಿಸ್ಥಿತಿಯ ಕಳಂಕವನ್ನು ಕಾಂಗ್ರೆಸ್‌ ಎಂದಿಗೂ ಅಳಿಸಲು ಆಗದು ಎಂದರು.ನೆಹರು, ಇಂದಿರಾಗೆ ಪ್ರಹಾರ:

undefined

‘ಸಂವಿಧಾನ ನಮ್ಮ ಕ್ರಮಗಳಿಗೆ ಅಡ್ಡಿ ಬಂದರೆ ಅದನ್ನು ಬದಲಾಯಿಸಬೇಕು ಎಂದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಅಲ್ಲದೆ, ಎಸ್‌ಸಿ, ಎಸ್‌ಟಿ ಮೀಸಲನ್ನೂ ವಿರೋಧಿಸಿ ಕೂಡ ನೆಹರು ಸಿಎಂಗಳಿಗೆ ಅನೇಕ ಪತ್ರ ಬರೆದಿದ್ದರು’ ಎಂದು ಮೋದಿ ಆರೋಪಿಸಿದರು.  ‘ರಾಜ್ಯಗಳು ಪ್ರಧಾನಿ ಸ್ಥಾನಕ್ಕೆ ಸರ್ದಾರ್‌ ಪಟೇಲ್‌ರನ್ನು ಬೆಂಬಲಿಸುತ್ತಿದ್ದಾಗ, ಕಾಂಗ್ರೆಸ್‌ ತನ್ನ ಸಂವಿಧಾನವನ್ನೇ ಪಾಲಿಸದೆ ನೆಹರು ಅವರನ್ನು ಪ್ರಧಾನಿಯನ್ನಾಗಿ ನೇಮಿಸಿತು’ ಎಂದು ಕುಟುಕಿದರು. ‘ನಂತರ ಸಂವಿಧಾನವನ್ನು ಬದಲಾಯಿಸುವಲ್ಲಿ ನೆಹರು ಬಿತ್ತರಿಸಿದ ಬೀಜಗಳನ್ನು ಇಂದಿರಾ ಗಾಂಧಿ ಅನುಸರಿಸಿದರು. 

ಅವರು ಸುಪ್ರೀಂ ಕೋರ್ಟ್‌ ತೀರ್ಪನ್ನು ಸಹ ರದ್ದುಗೊಳಿಸಿದ್ದರು. ನ್ಯಾಯಾಂಗವನ್ನು ವಶದಲ್ಲಿಟ್ಟುಕೊಳ್ಳುವ ಸಲುವಾಗಿ ಇಂದಿರಾ ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಕೋರ್ಟುಗಳ ರೆಕ್ಕೆ ಕತ್ತರಿಸಿದರು’ ಎಂದು ಕಿಡಿಕಾರಿದರು. ‘ರಕ್ತದ ರುಚಿ’ ಕಂಡಿದ್ದ ಇಂದಿರಾ ಸಂವಿಧಾನ ದುರ್ಬಳಕೆ ಮಾಡಿ ತುರ್ತು ಸ್ಥಿತಿ ಹೇರಿದರು. ಅನೇಕ ವಿಪಕ್ಷ ನಾಯಕರನ್ನು ಜೈಲಿಗಟ್ಟಿದರು. ಆದರೆ ಅಂದು ಕಾಂಗ್ರೆಸ್ ಯಾರನ್ನು ಜೈಲಿಗಟ್ಟಿತ್ತೋ, ಅವರನ್ನು ಇಂದು ತನ್ನೊಂದಿಗೆ ಕೈಜೋಡಿಸಲು ಒತ್ತಾಯಿಸುತ್ತಿದೆ’ ಎಂದು ಛೇಡಿಸಿದರು. ‘ಕಾಂಗ್ರೆಸ್‌ಗೆ ಅತಿ ಪ್ರಿಯವಾದ ಪದವೆಂದರೆ ‘ಓಳು’(ಜುಮ್ಲಾ). ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಸುಳ್ಳು ಎಂದರೆ, ಇಂದೂ ಕೂಡ ಕಾಂಗ್ರೆಸ್‌ನ 4ನೇ ತಲೆಮಾರು ಉಪಯೋಗಿಸುತ್ತಿರುವ ಇಂದಿರಾ ಘೋಷಣೆ ‘ಗರೀಬಿ ಹಠಾವೋ’ ಎಂದರು.

ರಾಜೀವ್‌, ಸೋನಿಯಾಗೂ ಪ್ರಹಾರ: ರಾಜೀವ್‌ ಆಳ್ವಿಕೆ ವೇಳೆ ನಡೆದಿದ್ದ ಪ್ರಸಂಗ ಪ್ರಸ್ತಾಪಿಸಿದ ಮೋದಿ, ‘ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು ರದ್ದುಪಡಿಸಿ ರಾಜೀವ್‌ ಸಂವಿಧಾನಕ್ಕೆ ದೊಡ್ಡ ಹೊಡೆತ ನೀಡಿದರು’ ಎಂದು ಟೀಕಿಸಿದರು. ‘ನಂತರ ಸಂವಿಧಾನೇತರ ಸಂಸ್ಥೆಯಾದ ರಾಷ್ಟ್ರೀಯ ಸಲಹಾ ಮಂಡಳಿಗೆ (ಎನ್‌ಎಸಿ) ಪ್ರಧಾನಿಗಿಂತ ಉನ್ನತ ಸ್ಥಾನ ನೀಡಲಾಯಿತು’ ಎಂದು ಪ್ರಧಾನಿ ಮನಮೋಹನ ಸಿಂಗ್‌ ಅವಧಿಯಲ್ಲಿ ಎನ್‌ಎಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಗೆ ಚಾಟಿ ಬೀಸಿದರು.

ರಾಹುಲ್‌ಗೂ ಪ್ರಹಾರ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನೂ ತರಾಟೆಗೆ ತೆಗೆದುಕೊಂಡ ಮೋದಿ, ‘ಪ್ರಧಾನಿ ಮನಮೋಹನ ಸಿಂಗ್‌ ಅಧ್ಯಕ್ಷತೆಯಲ್ಲಿ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ವ್ಯಕ್ತಿಯೊಬ್ಬರು (ರಾಹುಲ್) ಹರಿದು ಹಾಕಿದರು. ಇದೇನಾ ಪ್ರಜಾಪ್ರಭುತ್ವಕ್ಕೆ ನೀಡುವ ಗೌರವ?’ ಎಂದು ಆಕ್ಷೇಪಿಸಿದರು.

ಸಂವಿಧಾನಕ್ಕೆ ಅಪಚಾರ ಕೈ ಅಭ್ಯಾಸ: ‘ಸಂವಿಧಾನವನ್ನು ಅವಮಾನಿಸುವುದು ಗಾಂಧಿಗಳ ಅಭ್ಯಾಸ. ಆರಂಭದಲ್ಲಿ ನೆಹರು ಹಾಗೂ ಸಂವಿಧಾನಕ್ಕೆ 25 ವರ್ಷ ಆದಾಗ ತುರ್ತುಸ್ಥಿತಿ ಹೇರಿ ಇಂದಿರಾ ಅಪಚಾರ ಮಾಡಿದರು’ ಎಂದರು. ‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಲು ಕಾಂಗ್ರೆಸ್‌ನ ಒಂದು ಪರಿವಾರ ಸಂವಿಧಾನವನ್ನೇ ಬದಲಿಸಿತು. ಇದು ಸಂವಿಧಾನ ರಚಿಸಿದವರಿಗೆ ಮಾಡಿದ ಅವಮಾನ. ಆ ಪಕ್ಷವು ಅಧಿಕಾರ ಕಳೆದುಕೊಂಡ ಬಳಿಕವೇ ಒಬಿಸಿ ಕೋಟಾ ಜಾರಿಗೆ ಬಂತು’ ಎಂದು ಮೋದಿ ಹಳೆಯ ಮೆಲುಕು ಹಾಕಿದರು. ‘ಜಮ್ಮು-ಕಾಶ್ಮೀರದ ಸಮಸ್ಯೆಗಳಿಗೆ ಕಾಂಗ್ರೆಸ್‌ ಕಾರಣ. 35ಎ ವಿಧಿ ಜಾರಿಗೆ ಸಂಸತ್ತನ್ನು ಬೈಪಾಸ್‌ ಮಾಡಲಾಗಿತ್ತು. ಧರ್ಮದ ಆಧಾರದಲ್ಲಿ ತನ್ನ ಮತ ಬ್ಯಾಂಕ್‌ ಓಲೈಕೆಗೆ ಕಾಂಗ್ರೆಸ್‌ ನಾಚಿಕೆಯಿಲ್ಲದಂತೆ ವರ್ತಿಸುತ್ತಿದೆ’ ಎಂದು ಆರೋಪಿಸಿದರು.

2014ರ ನಂತರ ಸಂವಿಧಾನ ಬದ್ಧ ಆಡಳಿತ: ‘ಕಾಂಗ್ರೆಸ್‌ ತನ್ನ ಆಡಳಿತಾವಧಿಯಲ್ಲಿ ತನ್ನ ಸ್ವಾರ್ಥಕ್ಕಾಗಿ ಸಂವಿಧಾನ ಬದಲಿಸಲು ಯತ್ನಿಸಿತು. ಆದರೆ 2014ರ ನಂತರ ನಮ್ಮ ಸರ್ಕಾರ ಬಂದ ನಂತರ ದೇಶದ ಏಕತೆ, ಮಹಿಳೆಯರು ಹಾಗೂ ಒಬಿಸಿ ಸಮುದಾಯದ ಸಬಲೀಕರಣಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಿದ್ದೇವೆ’ ಎಂದು ಮೋದಿ ಹೇಳಿಕೊಂಡರು. ‘ಸಂವಿಧಾನ ಸಭೆಯು, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಬಯಸಿತ್ತು. ಅಂಬೇಡ್ಕರ್ ಹಾಗೂ ಅನ್ಯ ನಾಯಕರು ಎಲ್ಲಾ ಧರ್ಮದವರಿಗೆ ಏಕರೂಪ ಸಂಹಿತೆ ಅನ್ವಯವಾಗಬೇಕು ಎಂದು ಪ್ರತಿಪಾದಿಸುತ್ತಿದ್ದರು. ಆದ್ದರಿಂದಲೇ ನಾವು ಜಾತ್ಯತೀತ ನಾಗರಿಕ ಸಂಹಿತೆ ತರುತ್ತಿದ್ದೇವೆ’ ಎಂದ ಮೋದಿ, ‘ತ್ರಿವಳಿ ತಲಾಖನ್ನು ನಾವು ನಿಷೇಧಿಸಿದೆವು. ಶಾಸನ ಸಭೆಗಳಲ್ಲಿ ಮಹಿಳಾ ಮೀಸಲು ಜಾರಿಗೆ ಬರಬೇಕು ಎಂಬ ನಿರ್ಣಯ ಅಂಗೀಕರಿಸಿದೆವು. ಇವು ನಾವು ದೇಶದ ಒಳಿತಿಗಾಗಿ ತಂದ ಸಾಂವಿಧಾನಿಕ ತಿದ್ದುಪಡಿಗಳು’ ಎಂದರು.

ಕೋವಿಡ್‌ ಅಕ್ರಮ ಬಗ್ಗೆ ಮೊದಲ ಎಫ್‌ಐಆರ್‌: ಮೂವರು ಅಧಿಕಾರಿಗಳ ಹೆಸರು ಉಲ್ಲೇಖ

ವಾಜಪೇಯಿ ಉದಾಹರಣೆ: ‘1996ರಲ್ಲಿ ವಾಜಪೇಯಿ ಅಸಂವಿಧಾನಿಕ ಮಾರ್ಗ ಆಶ್ರಯಿಸದೆ 13 ದಿನಗಳ ತಮ್ಮ ಸರ್ಕಾರ ತ್ಯಜಿಸಿದರು. ಇದು ಸಂವಿಧಾನ ಬಗ್ಗೆ ನಮಗಿರುವ ಗೌರವ ತೋರಿಸುತ್ತದೆ’ ಎಂದು ಮೋದಿ ಹೇಳಿದರು. ‘2000ರಲ್ಲಿ ವಾಜಪೇಯಿ ಸರ್ಕಾರ ಸಂವಿಧಾನ ಅಂಗೀಕಾರದ 50ನೇ ವರ್ಷವನ್ನುಆಚರಿಸಿತ್ತು. ನಾನು ಗುಜರಾತ್‌ ಸಿಎಂ ಆಗಿದ್ದಾಗ ಸಂವಿಧಾನಕ್ಕೆ 60 ವರ್ಷ ಆಗಿತ್ತು. ಆಗ ಆನೆ ಮೇಲೆ ಸಂವಿಧಾನದ ಮೆರವಣಿಗೆ ಮಾಡಿಸಿದೆ. ಈಗ 75 ವರ್ಷವಾಗಿದೆ. ಸಂವಿಧಾನವು ಭಾರತದ ಏಕತೆಯ ಅಡಿಪಾಯವಾಗಿದೆ. ನಾವು ವಿವಿಧತೆಯನ್ನು ಸಂಭ್ರಮಿಸಿದರೆ ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಿದಂತೆ. ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಎನ್ನುವುದು ಬರಿ ಘೋಷಣೆಯಲ್ಲ. ನಮ್ಮ ಪಾಲಿಗದು ನಂಬಿಕೆ’ ಎಂದರು.

click me!