
ತುಮಕೂರು (ಅ.15): ಮಾಧ್ಯಮಗಳು ಬರೀ ಕಾಂಗ್ರೆಸ್ ಬಗ್ಗೆ ಮಾತ್ರ ಮಾತನಾಡುತ್ತವೆ. ಬಿಜೆಪಿಯಲ್ಲೂ ನವೆಂಬರ್ ಕ್ರಾಂತಿ ಆಗುತ್ತದೆ. ಬಿಜೆಪಿಯಲ್ಲಿ ವಿಜಯೇಂದ್ರರನ್ನು ತೆಗೆಯಬೇಕು ಅಂತ ಒಂದು ದೊಡ್ಡ ಗುಂಪೇ ಇದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ತಿಂಗಳ 14ರಂದು ಬಿಹಾರ ಎಲೆಕ್ಷನ್ ಫಲಿತಾಂಶ ಬರುತ್ತದೆ. ಅನಂತರ ಅದಕ್ಕೆಲ್ಲಾ ಚಾಲನೆ ದೊರೆಯುತ್ತದೆ ಎಂದರು. ವಿಜಯೇಂದ್ರನನ್ನು ತೆಗೆದರೆ ಯಡಿಯೂರಪ್ಪನವರು ಸುಮ್ಮನೆ ಇರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಎಂದ ರಾಜಣ್ಣ, ಮತ ವರ್ಗಾವಣೆ ಮಾಡುವ ಸಾಮರ್ಥ್ಯ ಇರುವ ನಾಯಕರ ವಿರುದ್ಧ ತೀರ್ಮಾನ ತೆಗೆದುಕೊಳ್ಳುವಾಗ ಹೈಕಮಾಂಡ್ ಸಾಕಷ್ಟು ಯೋಚನೆ ಮಾಡುತ್ತದೆ.
ಸಿದ್ದರಾಮಯ್ಯ ಅವರು ಕೂಡಾ ಮತ ವರ್ಗಾವಣೆ ಮಾಡುವ ಸಾಮರ್ಥ್ಯ ಇರುವಂತವರು ಎಂದರು. ನಾನು ಸಿಹಿ ಸುದ್ದಿ, ಕಹಿ ಸುದ್ದಿ ಎರಡನ್ನು ಸಮಚಿತ್ತದಿಂದ ತೆಗೆದುಕೊಳ್ಳುತ್ತೇನೆ. ನನಗೆ ಕಿರೀಟ ಬರೋದು ಇಲ್ಲ. ಹೋಗೋದು ಇಲ್ಲ. ನವೆಂಬರ್ ಕ್ರಾಂತಿ ಆಗುತ್ತೆ, ನೋಡ್ತಾ ಇರಿ. ಸಿಎಂ ಆಗಲು ಹೈಕಮಾಂಡ್ ತೀರ್ಮಾನವೇ ಅಂತಿಮ. ಶಾಸಕರ ಅಭಿಪ್ರಾಯವೇನು ಬೇಕಾಗಿಲ್ಲ ಎಂದು ಡಿಸಿಎಂ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಎಂಎಲ್ಎಗಳದ್ದು ಯಾವ ಲೆಕ್ಕಕ್ಕೂ ಇಲ್ಲ ಅಂತಾ ಯಾರಾದರೂ ಹೇಳಿದರೆ ಅದು ಮೂರ್ಖತನದ ಪರಮಾವಧಿ ಎಂದು ಹೇಳಿದರು.
ಮಿಡಿಗೇಶಿ ನೆಲದಲ್ಲಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾಗ ನನ್ನ ಮನವಿಗೆ ಸ್ಪಂದಿಸಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ ಭಾಗ್ಯ ಘೋಷಿಸಿದ್ದರು. ಅದು ಮುಂದುವರಿದು ಇಡೀ ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ವರವಾಯಿತು ಇದು ಮಿಡಿಗೇಶಿ ನೆಲದ ಗುಣ ಎಂದು ನೆನಪಿಸಿದರು. ಅಂದು ಸಿಎಂ ಬಳಿ ವಿದ್ಯಾರ್ಥಿಗಳ ಪರವಾಗಿ ದನಿ ಎತ್ತಿ ಶೂ ಭಾಗ್ಯ ದೊರಕಿಸಿ ಕೊಟ್ಟು ಮಿಡಿಗೇಶಿ ಇತಿಹಾಸ ಸೃಷ್ಠಿಸಿದೆ. ಇದು ರಾಜ್ಯದ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ವರದಾನವಾಗಿದೆ ಎಂದರು. ಭೂಮಿಗೆ ಬೆಲೆ ಹೆಚ್ಚುತ್ತಿದ್ದು, ರೈತರು ಭೂ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ, ಮಿಡಿಗೇಶಿ ಹೋಬಳಿ ಸದಾ ಕಾಲ ನನಗೆ ಆಶೀರ್ವಾದ ಮಾಡಿರುವ ಹೋಬಳಿ, ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ರೈತರ ಮನೆ ಬಾಗಿಲಿಗೆ ಹೋಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದು,ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ಸಾಗುವಳಿ ಚೀಟಿ ವಿತರಣೆ ವಿಳಂಬವಾಗಿದೆ. ಕಾಲ ಮಿತಿಯಲ್ಲಿ ವಿಲೇವಾರಿ ಮಾಡೋಣ, ನಲ್ಲೇಕಾಮನಹಳ್ಳಿಗೆ 32 ನಿವೇಶನದ ಹಕ್ಕು ಪತ್ರ, ಚಂದ್ರಬಾವಿಗೆ 25, ನಾರಪ್ಪನಹಳ್ಳಿಗೆ 16, ಚಿನ್ನೆಹಳ್ಳಿಗೆ 17, ನಾಗಲಾಪುರ 118 ನಿವೇಶನ , ರಾಜೀವ್ ಗಾಂಧಿ ವಸತಿ ಯೋಜನೆಯಡಿ ಹಂಚಲಾಗುತ್ತಿದೆ. ಬಸವ ವಸತಿ ಯೋಜನೆ ಮಿಡಿಗೇಶಿಯಲ್ಲಿ 35 ಕಾರ್ಯಾದೇಶ ಪತ್ರ, ಒಟ್ಟು 218 ಮನೆ ಕಟ್ಟಲು ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ಹಾಗೂ ವಿವಿಧ ಇಲಾಖೆಗಳಿಂದ ಸವಲತ್ತುಗಳನ್ನು ವಿತರಿಸಲಾಗುತ್ತಿದೆ. 98 ಜನಕ್ಕೆ ಪೌತಿ ಖಾತೆ ಕೊಡುತ್ತಿದ್ದೇವೆ ಜನರ ಮನೆ ಬಾಗಿಲಿಗೆ ಹೋಗಿ ಅವರ ಕೆಲಸ ಕಾರ್ಯ ಮಾಡಿಕೊಡುವುದು ಜನಸಂಪರ್ಕಸಭೆಯ ಮೂಲ ಉದ್ದೇಶ ಈ ಹೋಬಳಿಯಲ್ಲಿ 1009 ಫಲಾನುಭವಿಗಳಿಗೆ ವಿವಿಧ ಸೌಲಭ್ಯ ನೀಡುತ್ತಿದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.