
ಬೆಳಗಾವಿ (ಅ.15): ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ವಿಚಾರ ಕುರಿತು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನೀವು ಪ್ರಶ್ನೆ ಕೇಳುವುದನ್ನು ಬಿಟ್ಟರೆ ನಿಲ್ಲುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಬದಲಾವಣೆ ವಿಚಾರ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮಗಿಂತ ಮಾಧ್ಯಮಗಳಿಗೆ ಆತುರತೆ ಇದೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲವೇ ಇಲ್ಲ. ಸಿದ್ದರಾಮಯ್ಯ ಕರೆದ ಸಭೆಯಲ್ಲಿ ಇಲಾಖಾವಾರು ಚರ್ಚೆ ಆಗಿದೆ. ಸಂಪುಟ ವಿಸ್ತರಣೆ ಕುರಿತು ಚರ್ಚೆ ಆದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳು ಇರುವುದು ಸಹಜ ಎಂದರು.
ಬಿಜೆಪಿಯಿಂದ ಸಮಾಜ ಒಡೆಯುವ ಕೆಲಸ: ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಂಗಡಗಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ರಾಜ್ಯದಲ್ಲಿ ಹಿಂದುಳಿದವರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯುವ ಉದ್ದೇಶದಿಂದ ಸರ್ಕಾರದಿಂದ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ. ಆದರೆ ಇದಕ್ಕೆ ಕೆಲವು ಶ್ರೀಮಂತರು ಮತ್ತು ಬಲಾಢ್ಯರ ವಿರೋಧ ಇದೆ. ಬಡವರಿಂದ ಈ ಸಮೀಕ್ಷೆ ಕಾರ್ಯಕ್ಕೆ ವಿರೋಧ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ತುಳಿತಕ್ಕೆ ಒಳಗಾದ, ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಲುಪಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯ. ಆದರೆ ನಾವು ಯಾವುದೇ ಷಡ್ಯಂತ್ರಕ್ಕೆ ಬಗ್ಗುವುದಿಲ್ಲ. ರಾಜ್ಯದಲ್ಲಿ ಈಗಾಗಲೇ ಶೇ. 75ರಷ್ಟು ಸಮೀಕ್ಷ ಕಾರ್ಯ ಪೂರ್ಣಗೊಂಡಿದೆ. ಅದರಲ್ಲೂ ನನ್ನ ಉಸ್ತುವಾರಿ ಜಿಲ್ಲೆಯಾದ ಕೊಪ್ಪಳದಲ್ಲಿ ಶೇ. 98ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ವಿಪಕ್ಷ ನಾಯಕರು ಆರೋಪ ಮಾಡುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ₹2,000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬೊಕ್ಕಸ ಖಾಲಿಯಾಗಿದ್ದರೆ, ಇಷ್ಟು ದೊಡ್ಡ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವೇ? ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಹಾಗೂ ಇತಿಹಾಸ ನಿರ್ಮಾಣವಾಗಿದ್ದರೆ ಅದಕ್ಕೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ. ಅತ್ಯಂತ ಹಿಂದುಳಿದ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 371(ಜೆ) ಜಾರಿಗೆ ತರುವ ಮೂಲಕ ಈ ಭಾಗದ ಜನರ ಬದುಕನ್ನು ಹಸನು ಮಾಡಿದ್ದಾರೆ ಎಂದರು. ಜಿಲ್ಲೆಯಲ್ಲಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಇಂದಿರಾ ಕ್ಯಾಂಟೀನ್, ನೀರಾವರಿ ಯೋಜನೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇನ್ನು ತೋಟಗಾರಿಕೆ ಪಾರ್ಕ್ ಉದ್ಘಾಟನೆಯಾಗಿದ್ದು, ಕೆಕೆಆರ್‌ಡಿಬಿ ವತಿಯಿಂದ ₹8.5 ಕೋಟಿ ಅನುದಾನ ಒದಗಿಸಲಾಗಿದೆ. ₹50 ಕೋಟಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.