ಪಕ್ಷ ವಿರೋಧಿಗಳನ್ನು ಕುತ್ತಿಗೆ ಹಿಡಿದು ಆಚೆ ಹಾಕಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ

By Kannadaprabha NewsFirst Published Jan 25, 2024, 10:23 PM IST
Highlights

ಪಕ್ಷದಲ್ಲಿ ಇದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ಮಾಡುವವರನ್ನು ಕುತ್ತಿಗೆ ಹಿಡಿದು ಆಚೆ ಹಾಕಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿರುವುದು ಕಾಂಗ್ರೆಸ್ ಪಾಳೆಯದಲ್ಲಿ ನಾನಾ ಚರ್ಚೆ ಹುಟ್ಟು ಹಾಕಿದೆ. 

ಕೊಪ್ಪಳ (ಜ.25): ಪಕ್ಷದಲ್ಲಿ ಇದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ಮಾಡುವವರನ್ನು ಕುತ್ತಿಗೆ ಹಿಡಿದು ಆಚೆ ಹಾಕಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿರುವುದು ಕಾಂಗ್ರೆಸ್ ಪಾಳೆಯದಲ್ಲಿ ನಾನಾ ಚರ್ಚೆ ಹುಟ್ಟು ಹಾಕಿದೆ. ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ವೀಕ್ಷಕರ ಆಂತರಿಕ ಸಭೆಯಲ್ಲಿ ಮಾತನಾಡಿರುವ ಅನ್ಸಾರಿ ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಕ್ಷದಲ್ಲಿಯೇ ಇರುತ್ತಾರೆ. ಆದರೆ, ಪಕ್ಷದ ವಿರೋಧಿ ಕೆಲಸ ಮಾಡುತ್ತಿರುತ್ತಾರೆ. ಪಕ್ಷದಲ್ಲಿಯೇ ಇದ್ದುಕೊಂಡು ಒಡೆಯುವ ಕೆಲಸ ಮಾಡುತ್ತಿರುತ್ತಾರೆ. ಇಂಥವರನ್ನು ಮುಲಾಜಿಲ್ಲದೆ ಕಿತ್ತು ಹಾಕಬೇಕು. ಇಂಥವರಿಂದಲೇ ಪಕ್ಷ ಸೋಲಾಗಲು ಕಾರಣವಾಗುತ್ತದೆ ಎಂದರು. ಸ್ವಪಕ್ಷೀಯರೇ ಬೇರೆ ಪಕ್ಷದವರೊಂದಿಗೆ ಕೈಜೋಡಿಸಿ, ಡೀಲ್ ಮಾಡುತ್ತಾರೆ. ಇದಕ್ಕೆ ಅವಕಾಶ ನೀಡಿದ್ದರಿಂದಲೇ ಸೋಲಾಗುತ್ತದೆ. ಹೀಗಾಗಿ ಪಕ್ಷ ಕಟ್ಟಲು ಇಂಥವರನ್ನು ಮೊದಲು ಆಚೆ ಹಾಕಬೇಕು. ಅವರು ಎಷ್ಟೇ ದೊಡ್ಡವರು ಇರಲಿ, ಮುಲಾಜಿಲ್ಲದೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

Latest Videos

ಮೈತ್ರಿ ತೀರ್ಮಾನ ಮಾಡದಿದ್ದರೆ ಜೆಡಿಎಸ್‌ ಪಕ್ಷ ಹೈಜಾಕ್‌ ಆಗ್ತಾ ಇತ್ತು: ವೈ.ಎಸ್‌.ವಿ.ದತ್ತ

ನನಗೂ ಸಾಕಷ್ಟು ಅನುಭವ ಇದೆ. ನಾನು 1989ರಿಂದ ರಾಜಕಾರಣದಲ್ಲಿ ಇದ್ದೇನೆ. ಯಾರ‍್ಯಾರು ಏನೇನು ಎನ್ನುವುದು ಗೊತ್ತಿದೆ ಮತ್ತು ಏನೇನು ಮಾಡುತ್ತಿದ್ದಾರೆ ಎನ್ನುವುದೂ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಇದರಿಂದ ನನಗೆ ನೋವು ಸಹ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಆಗಿರುವ ಅನ್ಯಾಯವನ್ನು ಪರೋಕ್ಷವಾಗಿ ಹೇಳಿಕೊಂಡಂತೆ ಇತ್ತು. ಕಳೆದ ಚುನಾವಣೆಯಲ್ಲಿ ಕೆಲವರು ಇಕ್ಬಾಲ್ ಅನ್ಸಾರಿ ವಿರುದ್ಧ ಸಿಡಿದು, ಬೇರೊಂದು ಪಕ್ಷದವರೊಂದಿಗೆ ಕೈಜೋಡಿಸಿರುವ ಕುರಿತು ಯಾರ ಹೆಸರನ್ನು ಹೇಳದೆ ತಮ್ಮ ನೋವು ತೋಡಿಕೊಂಡಿದ್ದಾರೆ ಎಂದೇ ಹೇಳಲಾಗುತ್ತದೆ.

ಮುಸ್ಲಿಮರು ಸಿದ್ದು ನಂಬಿ ಬಂದವರು: ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಂಬಿಕೊಂಡು ಬಂದವರು. ಸಮುದಾಯ ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ನಿವಾಸದಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ಸಮುದಾಯದ ನಾಯಕರಾಗಿದ್ದಾರೆ ಎಂದು ಹೇಳಿದರು.

ರಾಮಲಲ್ಲಾ ಪ್ರತಿಷ್ಠಾಪನೆ ದಿನ ಮಸೀದಿ ಕೆಡವುವ ಸಂಕಲ್ಪ ತೊಟ್ಟಿದ್ದ ಸಂಸದ ಅನಂತ ಕುಮಾರ್ ಹೆಗಡೆ!

ರಾಜ್ಯದಲ್ಲಿ ಸಿದ್ದರಾಮಯ್ಯಗೆ ಮುಸ್ಲಿಂ ಸಮುದಾಯದವರು ಶೇ.88ರಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ಸಮುದಾಯದ ನಾಯಕರಾಗಿದ್ದಾರೆ. ಅವರು ಅಭಿವೃದ್ಧಿ ಕಡೆಗೆ ಚಿಂತನೆ ಮಾಡುವ ನಾಯಕರು ಎಂದು ಪ್ರಶಂಸಿದರು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಧಿಕಾರಕ್ಕೆ ಬಂದು ಮೂರೇ ತಿಂಗಳಲ್ಲಿ ಮಹಿಳೆಯರಿಗೆ, ಹಿಂದುಳಿದ ವರ್ಗದ ಜನರಿಗೆ ಯೋಜನೆ ಜಾರಿಗೆ ತಂದಿರುವ ನಿದರ್ಶನಗಳಿವೆ ಎಂದರು. ಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೇ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಸಂಸದರು ಆಯ್ಕೆಯಾಗುತ್ತಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.

click me!