ಜನಸಂಕಲ್ಪ ಯಾತ್ರೆ ಆರಂಭಿಸಿ ಜನರ ಬಳಿ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ: ಎಚ್‌.ಸಿ.ಮಹದೇವಪ್ಪ

By Govindaraj SFirst Published Oct 13, 2022, 9:20 PM IST
Highlights

ಬಿಜೆಪಿಗರು ಜನ ಸಂಕಲ್ಪ ಯಾತ್ರೆ ಆರಂಭಿಸಿ ಜನರ ಬಳಿ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆಯೇ ಆಗಿದೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ.

ಮೈಸೂರು (ಅ.13): ಬಿಜೆಪಿಗರು ಜನ ಸಂಕಲ್ಪ ಯಾತ್ರೆ ಆರಂಭಿಸಿ ಜನರ ಬಳಿ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆಯೇ ಆಗಿದೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ. ದುರಾಡಳಿತದ ಮೂಲಕ ಹೆಜ್ಜೆ ಹೆಜ್ಜೆಗೂ ಜನರನ್ನು ಹಿಂಸಿಸಿ ರಾಜ್ಯದ ಸಾಮರಸ್ಯ ಹಾಳು ಮಾಡಿದ ಇವರಿಗೆ ಜನರೇ ನೇರವಾಗಿ ಛೀಮಾರಿ ಹಾಕಲು ಇದು ಜನತೆಗೆ ಸಿಕ್ಕ ಸದಾವಕಾಶವಾಗಿದೆ ಎಂದು ನನಗೆ ಅನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. 

ಇದರ ಜೊತೆಗೆ ಯಡಿಯೂರಪ್ಪನವರಿಗೆ ವಯಸ್ಸಾಯಿತು ಎಂದು ಅವರನ್ನು ನಿರ್ದಾಕ್ಷಿಣ್ಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ ಬಿಜೆಪಿಗರು, ಇದೀಗ ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯ ಪ್ರವಾಸ ಮಾಡಿ ಪ್ರಚಾರ ನಡೆಸಲೇಬೇಕು ಮತ್ತು ಸಿದ್ದರಾಮಯ್ಯ ಅವರ ವಿರುದ್ಧ ಏನಾದರೂ ಮಾತನಾಡಲೇಬೇಕು ಎಂದು ತಾಕೀತು ಮಾಡಿದಂತೆ ತೋರುತ್ತಿದೆ. 

ಯಾರೂ ಸಿಗದಿದ್ದಾಗ ವಿಶ್ವನಾಥ್‌ ಆತ್ಮೀಯರಿಗೆ ಮದ್ದಾಕುತ್ತಾರೆ: ಸಚಿವ ಸೋಮಶೇಖರ್‌

ಮುಖ್ಯಮಂತ್ರಿ ಸ್ಥಾನವನ್ನು ನಿರ್ವಹಿಸುವ ವಿಷಯದಲ್ಲಿ ಯಡಿಯೂರಪ್ಪ ಅವರಿಗೆ ವಯಸ್ಸಾಯಿತು ಎನ್ನುವ ಬಿಜೆಪಿಗರಿಗೆ, ರಾಜ್ಯಾದ್ಯಂತ ಪ್ರವಾಸ ಮಾಡಿ ಚುನಾವಣಾ ಪ್ರಚಾರ ನಡೆಸಿ ಎನ್ನುವಾಗ ಯಡಿಯೂರಪ್ಪ ಅವರಿಗೆ ವಯಸ್ಸು ಉಕ್ಕುತ್ತಿದೆ ಎಂದು ಅನಿಸಿದೆಯಾ? ಇನ್ನು ಅಗತ್ಯವಾದ ಪ್ರಮಾಣದಲ್ಲಿ ಓಡಾಟ ಮಾಡಿ ಪ್ರಚಾರ ನಡೆಸಲಿಲ್ಲ ಎಂದರೆ ಯಡಿಯೂರಪ್ಪನವರಿಗೆ ಸ್ವಪಕ್ಷೀಯರಿಂದಲೇ ಇಡಿ ಮತ್ತು ಸಿಬಿಐ ದಾಳಿಯ ಭಯ ಇದೆ ಎಂಬ ಸುದ್ದಿ ಇದೆ. ಇದು ನಿಜವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಮೀಸಲಾತಿ ಹೆಚ್ಚಳ ನಿರ್ಧಾರ ಸ್ವಾಗತಾರ್ಹ: ಎಸ್ಸಿ ವರ್ಗದ ಮೀಸಲಾತಿಯನ್ನು ಹಾಲಿ ಅಸ್ತಿತ್ವದಲ್ಲಿರುವ ಶೇ. 15 ರಿಂದ ಶೇ. 17ಕ್ಕೆ ಹಾಗೂ ಎಸ್ಟಿವರ್ಗದ ಮೀಸಲಾತಿಯನ್ನು ಹಾಲಿ ಅಸ್ತಿತ್ವದಲ್ಲಿರುವ ಶೇ 3 ರಿಂದ ಶೇ. 7ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಿರುವ ಸರ್ವಪಕ್ಷ ಸಭೆಯ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದ್ದಾರೆ.

ಈ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಿಂದೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ಮತ್ತು ನಾನು ಬಹಳಷ್ಟು ಹೊತ್ತು ಚರ್ಚೆ ಮಾಡಿದ್ದೆವು. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಅಧಿಕಾರದಲ್ಲಿದ್ದಾಗ ಪ.ಜಾತಿ, ಪ.ಪಂಗಡ ಸಮುದಾಯದ ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬ ಕಾರಣಕ್ಕಾಗಿ ನ್ಯಾ. ನಾಗಮೋಹನ್‌ ದಾಸ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ ಮೇಲೆ ಅವರು ಇಡೀ ರಾಜ್ಯವನ್ನು ಪ್ರವಾಸ ಮಾಡಿ, ವಸ್ತು ನಿಷ್ಠವಾದ ವರದಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದರು.

ನಂತರ ಈ ವರದಿಯನ್ನು ಮತ್ತೊಮ್ಮೆ ಕೂಲಂಕುಷವಾಗಿ ವಿಶ್ಲೇಷಣೆ ಮಾಡಿ ಅದನ್ನು ಜಾರಿಗೊಳಿಸುವ ಹೊತ್ತಿಗೆ ಸರ್ಕಾರ ಬದಲಾಯಿತು. ಆದರೆ ಈಗ ನಮ್ಮ ಸರ್ಕಾರದ ಅವಧಿಯಲ್ಲಿ ಬಹಳಷ್ಟು ಕಾಳಜಿ ವಹಿಸಿ ಸಿದ್ದಪಡಿಸಲಾದ ನಾಗಮೋಹನ್‌ ದಾಸ್‌ ಅವರ ವರದಿಯನ್ನು ಆಧರಿಸಿ ಪ.ಜಾತಿ/ ಪ.ಪಂಗಡ ಮೀಸಲಾತಿ ಹೆಚ್ಚಿಸಿರುವುದಕ್ಕೆ ಸರ್ವಪಕ್ಷಗಳ ಸಭೆಯಲ್ಲಿ ಸಮ್ಮತಿ ದೊರೆತಿರುವುದು ನಿಜಕ್ಕೂ ಸಾಮಾಜಿಕ ನ್ಯಾಯ ದೊರಕಿಸಲು ಶ್ರಮಿಸಿದ ನಮ್ಮ ಕಾಂಗ್ರೆಸ್‌ ಸರ್ಕಾರದ ಬದ್ಧತೆಗೆ ಸಲ್ಲುವ ಶ್ರೇಯವಾಗಿದೆ.

ಉದ್ದೇಶ ಪೂರ್ವಕವಾಗಿ ಟಿಪ್ಪು ರೈಲು ಹೆಸರು ಬದಲಿಸಲಾಗಿದೆ: ಸಂಸದ ಪ್ರತಾಪ್‌ ಸಿಂಹ

ಜೊತೆಗೆ ಜಾತಿಗಣತಿ ವರದಿಯನ್ನೂ ಕೂಡಾ ಜಾರಿಗೊಳಿಸಿದರೆ ಯಾವ ಯಾವ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಏನಾಗಿದೆ ಎಂಬ ಚಿತ್ರಣವೂ ಕೂಡ ನಮಗೆ ಸ್ಪಷ್ಟವಾಗಿ ದೊರೆಯಲಿದ್ದು ಈ ಹಿನ್ನಲೆಯಲ್ಲಿ ಜಾತಿ ಗಣತಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

click me!