ಕೆಲವರು ಬೇರೆ ಯಾರೂ ಸಿಗದಿದ್ದಾಗ ಪಕ್ಕದಲ್ಲಿರುವ ಸ್ನೇಹಿತರಿಗೆ ಮದ್ದು ಹಾಕಿ ಬಿಡುತ್ತಾರೆ ಎಂದು ವಿಪ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಟಾಂಗ್ ನೀಡಿದರು.
ಮೈಸೂರು (ಅ.13): ಕೆಲವರು ಬೇರೆ ಯಾರೂ ಸಿಗದಿದ್ದಾಗ ಪಕ್ಕದಲ್ಲಿರುವ ಸ್ನೇಹಿತರಿಗೆ ಮದ್ದು ಹಾಕಿ ಬಿಡುತ್ತಾರೆ ಎಂದು ವಿಪ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಟಾಂಗ್ ನೀಡಿದರು. ದಸರಾ ಅಧ್ವಾನವಾಗಿತ್ತು ಎಂಬ ವಿಶ್ವನಾಥ್ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕೆಲವರು ರಾಜಕೀಯವಾಗಿ ಏನೂ ಮಾಡಲು ಆಗದಿದ್ದಾಗ ಹೀಗೆ ಮಾತನಾಡುತ್ತಾರೆ. ಬೇರೆ ಯಾರೂ ಸಿಗದಿದ್ದಾಗ ಪಕ್ಕದಲ್ಲಿನ ಸ್ನೇಹಿತರಿಗೆ ಮದ್ದು ಹಾಕಿ ಬಿಡುತ್ತಾರೆ ಎಂದು ಮಾರ್ಮಿಕವಾಗಿ ತಿಳಿಸಿದರು. ಐತಿಹಾಸಿಕ ದಸರಾ ಮಹೋತ್ಸವಕ್ಕೆ ತನ್ನದೇ ಆದ ಮಹತ್ವವಿದೆ. ದಸರಾ ಗೌರವಕ್ಕೆ ಕುಂದುಂಟಾಗುವ ರೀತಿ ನಾನು ಎಂದೂ ನಡೆದುಕೊಂಡಿಲ್ಲ.
ಅಗೌರವ ಬರುವಂತೆ ಮಾಡಿಲ್ಲ. ಎಲ್ಲರ ಸಲಹೆ ಪಡೆದು ಅದ್ಧೂರಿಯಾಗಿ ಆಚರಿಸಿದ್ದೇನೆ. ಲಕ್ಷಾಂತರ ಮಂದಿ ದಸರಾ ವೀಕ್ಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವರು ದಸರಾ ಆದ ಮೇಲೆ, ದಸರಾ ನಡೆಯುವಾಗ ಇಂತಹ ಮದ್ದು ಹಾಕುವ ಕೆಲಸವನ್ನು ಜೊತೆಯಲ್ಲಿ ಇದ್ದುಕೊಂಡೇ ಮಾಡಿದ್ದಾರೆ ಎಂದರು. ರಾಜಕೀಯವಾಗಿ ನನ್ನನ್ನು ಏನನ್ನು ಮಾಡಲಾಗದು. ಚಾಮುಂಡೇಶ್ವರಿ ಅಂತಹವರಿಗೆ ಒಳ್ಳೆಯದು ಮಾಡಲಿ. ಅವರನ್ನೆಲ್ಲಾ ಎದುರಿಸುವ ಶಕ್ತಿಯನ್ನು ನನಗೆ ಕೊಡಲಿ. ಮದ್ದು ಹಾಕಲು ಯಾರೂ ಸಿಗದಿದ್ದಾಗ ಆತ್ಮೀಯರು ಎನಿಸಿಕೊಳ್ಳುವವರಿಗೆ ಮದ್ದು ಹಾಕಿ ಬಿಡುತ್ತಾರೆ.
ಉದ್ದೇಶ ಪೂರ್ವಕವಾಗಿ ಟಿಪ್ಪು ರೈಲು ಹೆಸರು ಬದಲಿಸಲಾಗಿದೆ: ಸಂಸದ ಪ್ರತಾಪ್ ಸಿಂಹ
ಮೈಸೂರಿನಲ್ಲಿ ನನಗೆ ಯಾರೂ ಹಿತಶತ್ರುಗಳಿಲ್ಲ. ರಾಜಕೀಯವಾಗಿಯೂ ಯಾರು ಶತ್ರುಗಳಿಲ್ಲ. ಮದ್ದು ಹಾಕುವವರು ಮಾತ್ರ ಇದ್ದಾರೆ. ಆತ್ಮೀಯರಂತೆ, ಸ್ನೇಹಿತರಂತೆ ಪಕ್ಕದಲ್ಲಿಯೇ ಇರುತ್ತಾರೆ. ಅಂತವರ ಬಗ್ಗೆ ನನಗೆ ಗೊತ್ತಿದೆ ಎಂದು ಕುಟುಕಿದರು. ದಸರಾ ಮಹೋತ್ಸವ ಯಶಸ್ವಿಯಾಗಿದೆ. ಮೈಸೂರಿನವರೇ ಉಸ್ತುವಾರಿ ಸಚಿವರಾಗಿದ್ದಾಗಲೂ ಎಲ್ಲಾ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿರಲಿಲ್ಲ. ನಾನು ಪ್ರತಿ ಕಾರ್ಯಕ್ರಮದಲ್ಲಿಯೂ ಉತ್ಸಾಹದಿಂದ ಪಾಲ್ಗೊಂಡಿದ್ದೇನೆ. ಈ ಎಲ್ಲಾ ಮಾಹಿತಿ ಪಡೆದುಕೊಂಡಿದ್ದೇನೆ. ನಾನು ಪ್ರಮಾಣಿಕವಾಗಿ, ಈ ಉತ್ಸವವನ್ನು ಅಚ್ಚುಕಟ್ಟಾಗಿ ಮಾಡಿದ್ದೇನೆ ಎಂದು ಅವರು ಹೇಳಿದರು.
ಯಾವುದೇ ಕಾರ್ಯಕ್ರಮ ರೂಪಿಸುವಾಗಲೂ ಹಸ್ತಕ್ಷೇಪ ಮಾಡಿಲ್ಲ. 23 ಉಪ ಸಮಿತಿಗಳಿಂದ ಇನ್ನೂ ಲೆಕ್ಕ ಬಂದಿಲ್ಲ. ಹೀಗಾಗಿ ಮುಂದಿನ ವಾರ ದಸರಾ ಲೆಕ್ಕ ಕೊಡುತ್ತೇನೆ. ಅಂತಿಮವಾಗಿ ಎಲ್ಲರಿಂದ ಲೆಕ್ಕ ಬಂದ ಮೇಲೆ ನಿಖರವಾಗಿ ಗೊತ್ತಾಗಲಿದೆ. ಈ ಬಾರಿಯ ದಸರಾದ ಒಟ್ಟಾರೆ ಪ್ರಗತಿ ಮತ್ತು ಆಗಿರುವ ಲೋಪಗಳ ಬಗ್ಗೆ ಮುಂದಿನ ವರ್ಷಗಳಲ್ಲಿ ಏನನ್ನೂ ಸರಿಪಡಿಸಿಕೊಳ್ಳಬೇಕು ಎಂಬುದರ ಕುರಿತು ಪುಸ್ತಕ ತರಲು ಚಿಂತನೆ ನಡೆಸಿದ್ದೇನೆ ಎಂದರು. ಮೇಯರ್ ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಇದ್ದರು.
Mysuru: ಅರಣ್ಯ ಇಲಾಖೆ ವಶದಲ್ಲಿದ್ದ ಹಾಡಿಯ ವ್ಯಕ್ತಿ ಅನುಮಾನಾಸ್ಪದ ಸಾವು
ರಾಹುಲ್ ಬಾಲಿಶ ಹೇಳಿಕೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಮಾಡಿದ 40 ಪರ್ಸೆಂಟ್ ಆರೋಪಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ. ರಾಹುಲ್ ಮೊದಲು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಷ್ಟುಪರ್ಸೆಂಟ್ ತೆಗೆದುಕೊಂಡಿದ್ದೀರಿ ಎಂದು ತಮ್ಮ ಎಡ-ಬಲದಲ್ಲಿರುವವರನ್ನು ಕೇಳಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಬಾರದು, ಬಾಲಿಷ ಹೇಳಿಕೆ ನೀಡಬಾರದು ಎಂದರು. ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನವರೇನು ಸತ್ಯ ಹರಿಶ್ಚಂದ್ರರಾ? ರಾಹುಲ್ ಅಕ್ಕ-ಪಕ್ಕದಲ್ಲಿರುವವರೆಲ್ಲ ಬೇಲ್ ಮೇಲೆ ಹೊರಗಿರುವವರು. 40% ಆರೋಪ ಮಾಡುವವರು ಒಂದೇ ಒಂದು ದಾಖಲೆ ಕೂಡ ಕೊಡಲಿಲ್ಲ ಎಂದರು.