Mysuru: ಅಮಿತ್‌ ಶಾ ಹೇಳಿಕೆ ಹಾಸ್ಯಾಸ್ಪದ: ಎಚ್‌.ಸಿ.ಮಹದೇವಪ್ಪ

By Govindaraj S  |  First Published Jan 1, 2023, 11:40 PM IST

ಕಬ್ಬು ಬೆಳೆಗಾರರಿಗೆ ಸರಿಯಾದ ಬೆಂಬಲ ಬೆಲೆ ನೀಡದಂತಹ ದಯನೀಯ ಪರಿಸ್ಥಿತಿಯಲ್ಲಿ ಮಂಡ್ಯಕ್ಕೆ ಬಂದಿದ್ದ ಕೇಂದ್ರ ಸಚಿವ ಅಮಿತ್‌ ಶಾ ಅವರು ಮಂಡ್ಯದ ಎಲ್ಲಾ ಏಳು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿರುವುದು ಹಾಸ್ಯಾಸ್ಪದವಾದ ಸಂಗತಿಯಾಗಿದೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.


ಮೈಸೂರು (ಜ.01): ಕಬ್ಬು ಬೆಳೆಗಾರರಿಗೆ ಸರಿಯಾದ ಬೆಂಬಲ ಬೆಲೆ ನೀಡದಂತಹ ದಯನೀಯ ಪರಿಸ್ಥಿತಿಯಲ್ಲಿ ಮಂಡ್ಯಕ್ಕೆ ಬಂದಿದ್ದ ಕೇಂದ್ರ ಸಚಿವ ಅಮಿತ್‌ ಶಾ ಅವರು ಮಂಡ್ಯದ ಎಲ್ಲಾ ಏಳು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿರುವುದು ಹಾಸ್ಯಾಸ್ಪದವಾದ ಸಂಗತಿಯಾಗಿದೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ವ್ಯಂಗ್ಯವಾಡಿದ್ದಾರೆ. ಮಂಡ್ಯ ಮಾತ್ರವಲ್ಲದೇ ಇಡೀ ರಾಜ್ಯದ ಜನ ಸಾಮಾನ್ಯರ ಬದುಕು ಅಲ್ಲೋಲ ಕಲ್ಲೋಲವಾಗಿರುವ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ, ಇವರ ಯಾವ ಧೈರ್ಯದ ಮೇಲೆ ಹೀಗೆ ಮಾತನಾಡುತ್ತಾರೆ ಎಂದು ನೆನೆಸಿಕೊಂಡರೆ ನನಗೆ ಗೊಂದಲವಾಗುತ್ತದೆ. ಮಂಡ್ಯ ಅಥವಾ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯು ಗೆಲ್ಲುವುದಿಲ್ಲ.

ಒಂದು ವೇಳೆ ಕಳೆದ ಬಾರಿಯಂತೆ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ನಡೆಸಿದರೆ ಬಹುಶಃ ಸ್ಪರ್ಧೆ ಮಾಡಬಹುದಷ್ಟೇ ಎಂದು ಅವರು ತಿಳಿಸಿದ್ದಾರೆ. ಯಡಿಯೂರಪ್ಪ ಅವರನ್ನು ಬಿಟ್ಟು ದೇವೇಗೌಡರನ್ನು ಆಹ್ವಾನಿಸಿ, ಅವರೊಟ್ಟಿಗೆ ಬಿಜೆಪಿಗರು ಚುನಾವಣಾ ಆತ್ಮೀಯತೆ ತೋರುತ್ತಿರುವುದನ್ನು ನೋಡಿದರೆ, ಈ ಬಾರಿಯೂ ಇವರ ಒಳ ಒಪ್ಪಂದದ ಚುನಾವಣೆಯ ಸಾಧ್ಯತೆಯು ದಟ್ಟವಾಗಿದೆ ಎಂದು ಅನಿಸುತ್ತದೆ. ಯಾವುದಕ್ಕೂ ಈ ಕೋಮುವಾದಿಗಳು ಮತ್ತು ಫ್ಯೂಡಲ್‌ಗಳಿಂದ ಜನರು ಅಂತರ ಕಾಯ್ದುಕೊಳ್ಳುವುದು ಅವರ ಬದುಕಿಗೂ ಒಳ್ಳೆಯದು, ಪ್ರಜಾಪ್ರಭುತ್ವಕ್ಕೂ ಒಳ್ಳೆಯದು ಎಂದು ಅವರು ತಿಳಿಸಿದ್ದಾರೆ.

Tap to resize

Latest Videos

Mandya: ಬಿಜೆಪಿ ನೆಲೆ ವಿಸ್ತರಣೆಗೆ ರಣತಂತ್ರ: ಗೃಹ ಸಚಿವ ಅಮಿತ್‌ ಶಾ

ಬಡವರ ಬಗ್ಗೆ ಮೋದಿಗೆ ಎಂತಹ ಕಾಳಜಿ ಇದೆ: ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ 1 ವರ್ಷ ಉಚಿತ ಪಡಿತರವ ವಿತರಿಸಲು ಕೇಂದ್ರ ನಿರ್ಧರಿಸಿದ್ದು, ಇದನ್ನು ಬಡವರ ಬಗ್ಗೆ ಮೋದಿ ಅವರಿಗೆ ಎಂತಹ ಕಾಳಜಿ ಇದೆ ನೋಡಿ ಎಂದು ಬಿಜೆಪಿಗರು ಹೇಳಲು ಆರಂಭಿಸಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಜರಿದಿದ್ದಾರೆ.

ಆದರೆ ಅನ್ನಭಾಗ್ಯ ಯೋಜನೆಯಡಿ ಪೂರ್ಣ 5 ವರ್ಷಗಳ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಬಡ ಕುಟುಂಬಗಳಿಗೆ ಅಕ್ಕಿ ಮತ್ತು ಆಹಾರ ಧಾನ್ಯಗಳನ್ನು ವಿತರಿಸುವ ಕೆಲಸ ಮಾಡಿದ ಸಂದರ್ಭದಲ್ಲಿ ಇದೇ ಬಿಜೆಪಿಗರು ಅನ್ನಭಾಗ್ಯ ಬಡವರನ್ನು ಸೋಮಾರಿಗೊಳಿಸುವ ಯೋಜನೆ ಎಂದು ಹೇಳಿದ್ದರು.ಮೋದಿ ಅವರ ಆಹಾರ ಧಾನ್ಯ ವಿತರಣೆಯ ನಿರ್ಧಾರವು ಬಡವರ ಪರ ಎಂದ ಮೇಲೆ, ಸಿದ್ದರಾಮಯ್ಯ ಅವರ ಅನ್ನಭಾಗ್ಯವು ಅದಾನಿ ಪರ ಇರುತ್ತದೆಯೇ? ಈ ಎರಡು ತಲೆ ಹಾವಿನಂತಹ ಬಿಜೆಪಿಗರಿಗೆ ಇನ್ನೇನು ಹೇಳುವುದು? ಎಂದು ಪ್ರಶ್ನಿಸಿದ್ದಾರೆ.

ಆಹಾರ ಯೋಜನೆಗಳಿಂದ ಎಂದಿಗೂ ಆರ್ಥಿಕತೆ ನಷ್ಟವಾಗುವುದಿಲ್ಲ. ಉತ್ಪಾದನೆಯಲ್ಲಿ ತೊಡಗುತ್ತಲೇ ಬಂದಿರುವ ಬಡವರಿಗೆ ಆಹಾರ ದೊರೆತರೆ ಅವರ ದುಡಿಯುವ ಶಕ್ತಿ ಹೆಚ್ಚಾಗುತ್ತದೆ ಮತ್ತು ಅದು ಆರ್ಥಿಕತೆಯ ಮೇಲೆ ಆರೋಗ್ಯಕರ ಪರಿಣಾಮ ಬೀರುತ್ತದೆ ಎಂಬ ಅರ್ಥಶಾಸ್ತ್ರೀಯ ಜ್ಞಾನವನ್ನು ಅಸಮರ್ಪಕ ಶೀರ್ಷಿಕೆ ನೀಡುವ ಮಾಧ್ಯಮದ ಆದಿಯಾಗಿ ಎಲ್ಲರೂ ಹೊಂದಬೇಕು ಎಂದು ಅವರು ತಿಳಿಸಿದ್ದಾರೆ.

ಕಳಸಾ ಬಂಡೂರಿ, ನಾವು ನುಡಿದಂತೆ ನಡೆದುಕೊಂಡಿದ್ದೇವೆ: ಸಿಎಂ ಬೊಮ್ಮಾಯಿ

ಇನ್ನು ಆಹಾರ ಯೋಜನೆಯನ್ನು ಮೋದಿ ಅಥವಾ ಸಿದ್ದರಾಮಯ್ಯ ಅವರ ಆದಿಯಾಗಿ ಯಾರೇ ಜಾರಿ ಮಾಡಿದರೂ ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕೇ ಹೊರತು ಅಸೂಯೆ ಪಡಬಾರದು ಅಥವಾ ಒಬ್ಬರು ಮಾಡಿದ್ದು ಸರಿ ಇನ್ನೊಬ್ಬರು ಮಾಡಿದ್ದು ಸರಿಯಲ್ಲ ಎಂಬ ಪೂರ್ವಾಗ್ರಹ ಹೊಂದಬಾರದು ಎಂದಿದ್ದಾರೆ.

click me!