ರಾಜ್ಯದ ಅಬಕಾರಿ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಅವರಿಗೆ ನೂರು ರೂಪಾಯಿ ಅಂದ್ರೂ ಗೊತ್ತಿಲ್ಲ..ಸಾವಿರ ರೂಪಾಯಿ ಅಂದ್ರೂ ಗೊತ್ತಿಲ್ಲ..! ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಸಚಿವ ತಿಮ್ಮಾಪೂರ ಬಗ್ಗೆ ಹೀಗೆ ಲೇವಡಿ ಮಾಡಿದ್ದಾರೆ.
ಬಾಗಲಕೋಟೆ (ಆ.10): ರಾಜ್ಯದ ಅಬಕಾರಿ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಅವರಿಗೆ ನೂರು ರೂಪಾಯಿ ಅಂದ್ರೂ ಗೊತ್ತಿಲ್ಲ..ಸಾವಿರ ರೂಪಾಯಿ ಅಂದ್ರೂ ಗೊತ್ತಿಲ್ಲ..! ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಸಚಿವ ತಿಮ್ಮಾಪೂರ ಬಗ್ಗೆ ಹೀಗೆ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯವಹಾರ ಜ್ಞಾನ ಇಲ್ಲದೆ ತಿಮ್ಮಾಪೂರ ಏನೇನೋ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಕಿಸೆಯಲ್ಲಿ 100 ಇದ್ದಾಗ 1000 ಟೆಂಡರ್ ಯಾಕೆ ಕರೆದರು? ಎಂಬ ಸಚಿವ ತಿಮ್ಮಾಪುರ ಪ್ರಶ್ನೆಗೆ ಉತ್ತರಿಸಿದ ಕಾರಜೋಳ, ಸಿದ್ದರಾಮಯ್ಯ ಸರ್ಕಾರ 2018ರಲ್ಲಿ ಮನೆಗೆ ಹೋಗುವಾಗ 15000 ಕೋಟಿ ಟೆಂಡರ್ ಕರೆದು, ವರ್ಕ್ ಆರ್ಡರ್ ಕೊಟ್ರು. ಹಾಗಾದ್ರೆ ಅದರ ಕಮಿಷನ್ ಯಾರಿಗೆ ಹೋಯಿತು? 15000 ಕೋಟಿ ಹಣ ನಿಮ್ಮ ಬಳಿ ಇತ್ತೇ? ಎಂದು ಕಾರಜೋಳ ಪ್ರಶ್ನಿಸಿದರು.
ಭ್ರಷ್ಟಾಚಾರದ ಪಾಪದ ಕೂಸು ಹುಟ್ಟು ಹಾಕಿದವರೇ ಕಾಂಗ್ರೆಸ್ಸಿಗರು: ಬಿ.ವೈ.ವಿಜಯೇಂದ್ರ
ಸಿಎಂ ಉತ್ತರಕ್ಕೆ ಕಾದಿರುವೆ: 1 ಲಕ್ಷ ಕೋಟಿ ನಡೆಯುತ್ತಿರುವ ಕಾಮಗಾರಿಗಳ ಟೆಂಡರ್ ಮಾಡಿದರೂ ಮುಂದೆ ಬರುವ ಸರ್ಕಾರದ ತಲೆ ಮೇಲೆ ಹೊರಿಸಿ ಹೋದರು. ಅಂದು ನಿಮ್ಮ ಬಳಿ .1 ಲಕ್ಷ ಕೋಟಿ ಅನುದಾನ ಇತ್ತೇ? ಈ ಕುರಿತಂತೆ ನಾನು ತಿಮ್ಮಾಪುರ ಅವರ ಉತ್ತರಕ್ಕೆ ಕಾಯುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಉತ್ತರಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: 2023-24ನೇ ಸಾಲಿನಲ್ಲಿ ಸಿದ್ದರಾಮಯ್ಯ ಸರ್ಕಾರ ಎಸ್ಸಿ, ಎಸ್ಟಿಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ತುಳಿತಕ್ಕೊಳಗಾದ ಜನರಿಗೆ ಅನ್ಯಾಯ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಕಳಕಳಿ, ಕಾಳಜಿಯ ಅರಿವೇ ಇಲ್ಲದಂತಾಗಿದೆ. ಕುರ್ಚಿ ಆಸೆಗಾಗಿ ಈ ರೀತಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆಗೆ .70.51 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಕಾನೂನಿನ ವಿರುದ್ಧವಾಗಿ ಇವರ ನಡವಳಿಕೆ ಇದೆ. ಸಂವಿಧಾನದ ಆಶಯದ ತದ್ವಿರುದ್ಧವಾಗಿ, ವೋಟ್ ಬ್ಯಾಂಕ್ ಆಸೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಅಧಿಕಾರಿಗಳಿಂದ ಲಂಚದಾರೋಪ ಇದೇ ಮೊದಲು: ರಾಜ್ಯದಲ್ಲಿ ಸಚಿವರ ವಿರುದ್ಧ ಅಧಿಕಾರಿಗಳೇ ರಾಜ್ಯಪಾಲರಿಗೆ ದೂರು ನೀಡಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಪ್ರಕರಣ. ವರ್ಗಾವಣೆಗೆ ಲಂಚ ಕೇಳುತ್ತಾರೆ ಎಂದು ಇಲಾಖೆ ನೌಕರನ ಮೇಲೆ ಮತ್ತು ಸರ್ಕಾರದ ಮೇಲೆ ರಾಜ್ಯಪಾಲರಿಗೆ ಅಧಿಕಾರಿಗಳೇ ದೂರು ನೀಡಿದ್ದಾರೆ. ಹೀಗಾಗಿ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ನೀಡಿ ತನಿಖೆಗೆ ಆದೇಶಿಸಬೇಕಿತ್ತು ಎಂದು ಹೇಳಿದರು.
ಆರೋಪ ಹೊತ್ತ ಸಚಿವರು ನಿರ್ದೋಷಿಗಳೆಂದು ಸಾಬೀತಾದ ಮೇಲೆ ಅಧಿಕಾರದಲ್ಲಿ ಮುಂದುವರೆಯಲಿ. ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ನಿರ್ಲಜ್ಜತನದಿಂದ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ ಎಂದು ಜರಿದ ಅವರು, ನಾನು, ಇನ್ನೂ ಕೆಂಪಣ್ಣ ಎಲ್ಲಿದ್ದೀಯಾ ಅಂತ ಕೇಳಿದ್ದೆ. ಅವನು ನಿನ್ನೆ ಹೊರಗೆ ಬಂದಿದ್ದಾನೆ. ಕೆಂಪಣ್ಣ ಬಾಣಲೆಯಿಂದ ಬೆಂಕಿಗೆ ಬಿದ್ದಂಗಾಯ್ತು ಅಂತ ಹೇಳಿದ್ದಾನೆ. ಆದರೆ ಬೆಂಕಿಗೆ ಅಲ್ಲ; ಇದು ಇನ್ನೂ ಮುಂದೆ ಹೋಗುತ್ತೆ ನೋಡುತ್ತಿರಿ ಎಂದರು.
ದಳಪತಿಗಳ ತಳಮಳ: ಒಂದು ಕಾಲದ ಆಪ್ತ ಮಿತ್ರರು ಈಗ ಆಜನ್ಮ ಶತ್ರುಗಳು!
ಕಾಂಗ್ರೆಸ್ಸಿಗರಿಂದಲೇ ಸ್ಟೇ: ಭ್ರಷ್ಟಾಚಾರ ಪ್ರಕರಣದಲ್ಲಿ ಕೆಲವರು (ಕಾಂಗ್ರೆಸ್ಸಿಗರು) ಕೋರ್ಚ್‌ಗೆ ಹೋಗಿ ಸ್ಟೇ ತಂದಿರುವುದು ಆಶ್ಚರ್ಯಕರ ಸಂಗತಿ. ಸಿಡಿ ಸೇರಿದಂತೆ ನೈತಿಕತೆ ಪ್ರಶ್ನೆ ಬಂದಾಗ ಕೋರ್ಚ್‌ಗೆ ಹೋಗಿ ಸ್ಟೇ ತಂದಿದ್ದು ನೋಡಿದ್ದೀವಿ. ಆದ್ರೆ ಭ್ರಷ್ಟಾಚಾರ ಪ್ರಸಾರ ಮಾಡದಂತೆ ಕೋರ್ಚ್ ಸ್ಟೇ ತಂದದ್ದು, ಸ್ವಾತಂತ್ರ್ಯಾ ನಂತರದ ಇತಿಹಾಸದಲ್ಲಿ ಇದೇ ಮೊದಲು. ಆರೋಪ ಬಂದರೆ ತನಿಖೆ ಮಾಡಿಸಲಿ, ಬೇಕಿದ್ದರೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.