
ಬೆಂಗಳೂರು (ಸೆ.04): ಬಿಜೆಪಿ ತೊರೆಯಬೇಕು ಎಂದು ಕನಸಿನಲ್ಲೂ ಯೋಚನೆ ಮಾಡಿಲ್ಲ. ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ನಿಂದ ತಮಗೆ ಯಾರೂ ಆಹ್ವಾನ ನೀಡಿಲ್ಲ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಪುನಃ ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಸುದೀಪ್ ಪಾರ್ಟಿಗೆ ಶಿವಕುಮಾರ್ ಆಗಮಿಸಿದ್ದರು.
ಮಾಜಿ ಶಾಸಕ ರಾಜುಗೌಡ ಮತ್ತು ತಾವು ಹೋಗಿದ್ದೆವು. ಶಿವಕುಮಾರ್ ಮೊದಲಿನಿಂದಲೂ ಸ್ನೇಹಿತರು. ಇಂತಹ ಸಾರ್ವಜನಿಕ ಕಾರ್ಯಕ್ರಮದಲ್ಲಿ ‘ಆಪರೇಷನ್ ಹಸ್ತ’ದ ಬಗ್ಗೆ ಯಾರಾದರೂ ಮಾತನಾಡುತ್ತಾರೆಯೇ. ಇದು ಆಕಸ್ಮಿಕ ಭೇಟಿ. ಬೇರೆ ಅರ್ಥ ಕಲ್ಪಿಸುವುದು ಬೇಡ. ಉಪ ಮುಖ್ಯಮಂತ್ರಿ ನೋಡಿದಾಗ ಮುಖ ತಿರುಗಿಸಿ ಹೋಗುವುದು ಸರಿಯಲ್ಲ. ಸೌಜನ್ಯದ ಭೇಟಿ ಅಷ್ಟೇ. ಕಾಂಗ್ರೆಸ್‌ನವರು ಯಾರೂ ನನ್ನನ್ನು ಮಾತನಾಡಿಸಿಲ್ಲ. ನನ್ನ ಬೆಂಬಲಿಗರೂ ಕಾಂಗ್ರೆಸ್‌ಗೆ ಸೇರ್ಪಡೆ ಆಗುವುದಿಲ್ಲ. ಇದು ಊಹಾಪೋಹ ಅಷ್ಟೇ ಎಂದು ಉತ್ತರಿಸಿದರು.
ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ: ಮಾಜಿ ಸಚಿವ ರೇಣುಕಾಚಾರ್ಯ
ವಿರೋಧಿಗಳ ಮನೆಗೆ ಭೇಟಿಗೆ ಆಕ್ಷೇಪ: ಗದಗ, ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಜಯ ಗಳಿಸಲಿದ್ದಾರೆ. ನಾವು ಅಭ್ಯರ್ಥಿ ಪರ ಕೆಲಸ ಮಾಡಲಿದ್ದೇವೆ. ಹಾವೇರಿ ಅಭ್ಯರ್ಥಿ ಯಾರೆಂದು ಪಕ್ಷ ನಿರ್ಧರಿಸಲಿದೆ. ನಮ್ಮನ್ನು ಸೋಲಿಸಿದವರ ಮನೆಗೆ ಈಶ್ವರಪ್ಪ ಭೇಟಿ ನೀಡುತ್ತಾ, ಅವರ ಜೊತೆ ಓಡಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ವರಿಷ್ಠರ ಗಮನಕ್ಕೆ ತರಲಾಗಿದೆ. ಈಶ್ವರಪ್ಪ ಯಾವ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಎಂಬ ಅನುಮಾನ ಮೂಡುತ್ತಿದೆ. ಆದರೆ ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳಿಗಾಗಿ ಸಚಿವರನ್ನು ಭೇಟಿ ಮಾಡುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಈಶ್ವರಪ್ಪ ವಿರುದ್ಧವೇ ಸಿಡಿದೆದ್ದ ಬಿ.ಸಿ.ಪಾಟೀಲ್: ಬಿಜೆಪಿ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಕಾಂತೇಶನನ್ನು ಮುಂದಿನ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ಕಾಂತೇಶ್‌ಗೆ ಹಾವೇರಿಯಿಂದ ಸ್ಪರ್ಧಿಸಲು ಪಕ್ಷ ಯಾವುದೇ ಸಂದೇಶ ಕೊಟ್ಟಿಲ್ಲ. ಆದರೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದವರನ್ನು ಕರೆದುಕೊಂಡು ಈಶ್ವರಪ್ಪ ಈ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಇಲ್ಲಿಯ ವಾತಾವರಣ ಕೆಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ. ಈ ಹಿಂದೆ ವಲಸಿಗರಿಂದಾಗಿ ಬಿಜೆಪಿಯಲ್ಲಿ ಅಶಿಸ್ತು ಮೂಡಿದೆ ಎಂದು ಈಶ್ವರಪ್ಪ ಟೀಕಿಸಿದ್ದರು. ಅದಕ್ಕೆ ಪ್ರತಿಯಾಗಿ ಈಗ ಈಶ್ವರಪ್ಪ ವಿರುದ್ಧವೇ ಅಶಿಸ್ತಿನ ವಾತಾವರಣ ಮೂಡಿಸುತ್ತಿರುವ ಆರೋಪ ಮಾಡಿ ವಲಸಿಗರಲ್ಲಿ ಒಬ್ಬರಾದ ಬಿ.ಸಿ.ಪಾಟೀಲ್ ಟೀಕಾಪ್ರಹಾರ ನಡೆಸಿದ್ದಾರೆ.
ಸಿದ್ದರಾಮಯ್ಯಗೆ ಬಡವರ ಮಕ್ಕಳು ಉದ್ಧಾರವಾಗಬಾರದು: ಪ್ರತಾಪ್ ಸಿಂಹ ವಾಗ್ದಾಳಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಕಾಂತೇಶ್‌ಗೆ ಪಕ್ಷ ಸೂಚನೆ ಕೊಟ್ಟಿದ್ದರೆ ಕ್ಷೇತ್ರದಲ್ಲಿ ಓಡಾಡಲಿ. ಆದರೆ, ಅಂತಹ ಯಾವುದೇ ಸಂದೇಶ ಪಕ್ಷದಿಂದ ಬಂದಿಲ್ಲ. ಈಶ್ವರಪ್ಪ ಕೂಡ ತಮ್ಮ ಪುತ್ರನೇ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಓಡಾಡುವುದು ಸರಿಯಲ್ಲ. ಈ ರೀತಿ ಮಾಡಿದರೆ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಚುನಾವಣೆ ಎದುರಿಸುವ ಶಕ್ತಿ, ಸಾಮರ್ಥ್ಯ ಇರುವವರೂ ಕೂಡ ಬಹಳಷ್ಟು ಮಂದಿ ಇದ್ದಾರೆ. ಪಕ್ಷ ಅವಕಾಶ ಕೊಟ್ಟರೆ ನಾನೂ ಸ್ಪರ್ಧೆಗೆ ಆಸಕ್ತಿ ಹೊಂದಿದ್ದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.