ಬಿಜೆಪಿ ನನ್ನ ತವರು ಮನೆಯಾಗಿದ್ದು, ನಾವೇ ಕಟ್ಟಿ ಬೆಳೆಸಿದ ಮನೆ, ಕೆಲ ಅಸಮಾಧಾನದಿಂದ ಹೊರ ಹೋಗಿದ್ದು ನಿಜವಾದರೂ ಈಗ ನಮ್ಮ ಮನೆಗೆ ನಾನು ಮರಳಿದ್ದೇನೆ.
ದಾವಣಗೆರೆ (ಜ.29): ಬಿಜೆಪಿ ನನ್ನ ತವರು ಮನೆಯಾಗಿದ್ದು, ನಾವೇ ಕಟ್ಟಿ ಬೆಳೆಸಿದ ಮನೆ, ಕೆಲ ಅಸಮಾಧಾನದಿಂದ ಹೊರ ಹೋಗಿದ್ದು ನಿಜವಾದರೂ ಈಗ ನಮ್ಮ ಮನೆಗೆ ನಾನು ಮರಳಿದ್ದೇನೆ. ದೇಶದ ಹಿತರಕ್ಷಣೆ, ಅಭಿವೃದ್ಧಿಗಾಗಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕೆಂಬ ಜನರ ಒತ್ತಾಯ, ಕಾರ್ಯಕರ್ತರ ಒತ್ತಾಸೆಯಂತೆ ನಾವೂ ಕೆಲಸ ಮಾಡಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಗೆ ಭಾನುವಾರ ಹುಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯೆ ಭೇಟಿ ನೀಡಿದ್ದ ವೇಳೆ ಪಕ್ಷದಿಂದ ಸನ್ಮಾನಿತರಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 34 ವರ್ಷದಿಂದಲೂ ಜನಸಂಘ, ಬಿಜೆಪಿಯಲ್ಲಿದ್ದ ನಾವು ಕೆಲ ಘಟನೆಗಳಿಂದಾಗಿ ಬೇಸರಗೊಂಡು ಬಿಜೆಪಿ ತೊರೆದಿದ್ದು, ಪಕ್ಷದಲ್ಲಿ ಈಗ ಎಲ್ಲವೂ ತಿಳಿಯಾಗಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿ ರಾಜ್ಯ ನಾಯಕರ ಕರೆಯ ಮೇರೆಗೆ ಮಾತೃಪಕ್ಷಕ್ಕೆ ಮರಳಿದ್ದೇನೆ ಎಂದರು.
ಸಂವಿಧಾನ ಬದಲಾಯಿಸುವ ವಿರೋಧಿಗಳ ಬಗ್ಗೆ ಎಚ್ಚರ ವಹಿಸಿ: ಸಿದ್ದರಾಮಯ್ಯ
ಯಾವುದೇ ಷರತ್ತು ಹಾಕಿ, ಬೇಡಿಕೆಗಳ ಇಟ್ಟು ನಾನು ಬಿಜೆಪಿಗೆ ಮರಳಿಲ್ಲ. ನರೇಂದ್ರ ಮೋದಿಯವರ ಮೂರನೇ ಬಾರಿಗೆ ಪ್ರಧಾನಿ ಮಾಡಲು ನನ್ನೊಂದು ಅಳಿಲು ಸೇವೆ ಇರಬೇಕೆಂಬ ಕಾರಣಕ್ಕಾಗಿ ಸ್ವಪಕ್ಷಕ್ಕೆ ಮರಳಿದ್ದೇನೆ. ಬಿಜೆಪಿಗೆ ನಾನು ಮರಳಬೇಕೆಂದು ಕಳೆದ ಐದಾರು ತಿಂಗಳಿನಿಂದಲೂ ಕಾರ್ಯಕರ್ತರ ಪಡೆ ಹಾಗೂ ಪಕ್ಷದ ವರಿಷ್ಠರ ಒತ್ತಡವಿತ್ತು. ಕೇಂದ್ರದ ನಾಯಕರು ನನ್ನೊಂದಿಗೆ ಚರ್ಚಿಸಿದರು. ಹಾಗಾಗಿ ಬಿಜೆಪಿಗೆ ಮರಳಿ, ಮಾತೃ ಪಕ್ಷಕ್ಕೆ ಬಂದ ಖುಷಿ ಇದೆ ಎಂದು ತಿಳಿಸಿದರು.
ವರಿಷ್ಠರು ಕೊಟ್ಟ ಜವಾಬ್ದಾರಿ ನಿಭಾಯಿಸುವೆ: ಬಿಜೆಪಿ ವರಿಷ್ಠರು ನನಗೆ ಶೆಟ್ಟರ್‌ರೇ ನೀವು ಇಂತಹ ಕೆಲಸ ಮಾಡಿ ಅಂತ ಸೂಚಿಸಿದ್ದನ್ನು ಚಾಚೂ ತಪ್ಪದೇ ಮಾಡುತ್ತೇನೆ. ಪಕ್ಷದ ವರಿಷ್ಠರು ತೀರ್ಮಾನಿಸಿ, ಕೈಗೊಂಡು ನೀಡುವ ಯಾವುದೇ ಜವಾಬ್ದಾರಿ ನಿಭಾಯಿಸುತ್ತೇನೆ. ಕಳೆದೊಂದು ದಶಕದಿಂದಲೂ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಉತ್ತಮ ಆಡಳಿತ ನೀಡುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳೂ ಆಗುತ್ತಿದೆ. ಮೂರನೇ ಬಾರಿಯೂ ಮೋದಿ ನೇತೃತ್ವದಲ್ಲಿ ಬಿಜೆಪಿ ಭಾರೀ ಅಂತರದಲ್ಲಿ ಗೆಲುವು ಕಾಣಬೇಕು. ಮೋದಿ ಕೈಬಲಪಡಿಸಬೇಕೆಂಬುದು ದೇಶ ವಾಸಿಗಳ ಕೂಗು ಆಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಶಂಕರ ಮುನೇನಕೊಪ್ಪ, ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ಮುಖಂಡರಾದ ಲೋಕಿಕೆರೆ ನಾಗರಾಜ, ಡಾ.ಟಿ.ಜಿ.ರವಿಕುಮಾರ, ಕೆ.ಬಿ.ಕೊಟ್ರೇಶ, ಬಿ.ಎಂ.ಸತೀಶ ಕೊಳೇನಹಳ್ಳಿ, ಬಿ.ಜಿ.ಅಜಯಕುಮಾರ, ಕಡ್ಲೇಬಾಳು ಧನಂಜಯ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಕೆ.ಎಲ್.ಕಲ್ಲೇಶ, ಟಿಂಕರ್ ಮಂಜಣ್ಣ ಇತರರಿದ್ದರು.
ಲಕ್ಷ್ಮಣ ಸವದಿ ನನ್ನ ಸಂಪರ್ಕದಲ್ಲಿಲ್ಲ: ಮಾಜಿ ಸಚಿವ ಲಕ್ಷ್ಮಣ ಸವದಿ ಏನು ಮಾಡುತ್ತಾರೋ ನನಗೆ ಗೊತ್ತಿಲ್ಲ. ಸವದಿ ನನ್ನ ಸಂಪರ್ಕದಲ್ಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. ಕಾಂಗ್ರೆಸ್ ಪಕ್ಷ ಬಿಟ್ಟು, ಮಾತೃ ಪಕ್ಷಕ್ಕೆ ವಾಪಾಸ್ಸಾದ ಬಗ್ಗೆ ನನಗೆ ಯಾವುದೇ ಪಾಪಪ್ರಜ್ಞೆ ಇಲ್ಲ ಎಂದರು. ಬೆಂಗಳೂರಿನಲ್ಲಿ ನಿನ್ನೆ ಕೇಶವ ಕೃಪಾಗೆ ಹೋಗಿದ್ದ ವೇಳೆ ಪಕ್ಷದ ಹಿರಿ-ಕಿರಿಯ ಮುಖಂಡರು, ಕಾರ್ಯಕರ್ತರು ನಾನು ಬಿಜೆಪಿ ಮರಳಿದ್ದಕ್ಕೆ ತೀವ್ರ ಸಂತೋಷ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲೂ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಪಕ್ಷಕ್ಕೆ ವಾಪಸ್ ಬಂದಿದ್ದಕ್ಕೆ ಸ್ವಾಗತಿಸಿದ್ದಾರೆ ಎಂದು ತಿಳಿಸಿದರು.
ತುಮಕೂರು ತನಕ ಮೆಟ್ರೋಗೆ ಸಿಎಂ ಸಿದ್ದರಾಮಯ್ಯಗೆ ಮನವಿ: ಸಚಿವ ಪರಮೇಶ್ವರ್
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಗೆಲ್ಲಲಿ ಎಂಬುದಾಗಿ ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ ಕರೆ ನೀಡಿರುವುದು ಒಳ್ಳೆಯದೇ ಆಯಿತು. ಕಾಂಗ್ರೆಸ್‌ನ ಹಿರಿಯ ನಾಯಕರು ಎದುರಾಳಿ ಪಕ್ಷ ಬಿಜೆಪಿ ಗೆಲ್ಲಲಿ ಎಂಬುದಾಗಿ ಹಾರೈಸಿರುವುದು ಒಳ್ಳೆಯ ಬೆಳವಣಿಗೆ.
-ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ.