
ಧಾರವಾಡ (ಜ.06): ಅಯೋಧ್ಯಾ ಕರಸೇವಕರ ಮೇಲಿನ ಕೇಸ್ ವಾಪಸ್ ಪಡೆಯದೇ ಇದೀಗ ಅವರ ಬಂಧನವನ್ನು ಬಂಡವಾಳ ಮಾಡಿಕೊಂಡು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಪ್ಲಾನ್ ಮಾಡುತ್ತಿದೆ. ಚುನಾವಣಾ ಗಿಮಿಕ್‌ಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಬನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳೆಂಟು ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಇದೇ ಆರ್.ಅಶೋಕ ಅವರೇ ಹೋಮ್ ಮಿನಿಸ್ಟರ್ ಇದ್ದರು. ಈಗ ಕರಸೇವಕರ ಪರ ಹೋರಾಟ ಮಾಡುತ್ತಿರುವವರು ಆಗ ಏಕೆ ಕರಸೇವಕರ ಮೇಲಿನ ಕೇಸ್ ವಾಪಸ್ ಪಡೆಯಲಿಲ್ಲ ಎಂದು ಪ್ರಶ್ನಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಕೆಲವೊಂದಿಷ್ಟು ಪ್ರಕರಣ ಹಿಂಪಡೆದಿದ್ದೆ. ಕೆಲವೊಂದಿಷ್ಟು ಆಗಲಿಲ್ಲ. ನಾನು ಕೇವಲ 10 ತಿಂಗಳಷ್ಟೇ ಮುಖ್ಯಮಂತ್ರಿಯಾಗಿದ್ದೆ ಎಂದು ಶೆಟ್ಟರ್ ಸ್ಪಷ್ಟಪಡಿಸಿದರು. ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಒಂದು ಸಣ್ಣ ಪ್ರಕರಣವನ್ನು ದೊಡ್ಡದು ಮಾಡಿ ಹೋರಾಟ ಮಾಡುವುದರ ಹಿಂದಿನ ಉದ್ದೇಶ ರಾಜಕೀಯ ಗಿಮಿಕ್ ಆಗಿದೆ. ಸರ್ಕಾರದ ನಿರ್ದೇಶನದ ಮೇರೆಗೆ ಆರೋಪಿ ಬಂಧನ ಆಗಿಲ್ಲ. ಪೊಲೀಸರು ರೂಟಿನ್ ಕೆಲಸದಲ್ಲಿ ಬಂಧಿಸಿದ್ದಾರೆ. ಆದರೆ, ಬಿಜೆಪಿಯವರು ಅನಗತ್ಯವಾಗಿ ರಾಜಕೀಕರಣಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.
371 ಜೆ ಅಡಿ ಖಾಲಿ ಹುದ್ದೆಗಳ ಮುಂಬಡ್ತಿ ಪ್ರಕ್ರಿಯೆ ಆರಂಭಿಸಲು ಪ್ರಿಯಾಂಕ್ ಖರ್ಗೆ ಸೂಚನೆ
ಕಲಬುರಗಿಯ ಮಣಿಕಂಠ ರಾಠೋಡ್ ಮೇಲೆ ಹತ್ತಾರು ಕ್ರಿಮಿನಲ್ ಕೇಸ್‌ಗಳಿವೆ. ಅವನಿಗೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿತ್ತು. ಈಗ ಬಂಧಿತನಾಗಿರುವ ಶ್ರೀಕಾಂತ ಪೂಜಾರಿ ಮೇಲೆಯೂ ಹತ್ತಾರು ಕೇಸ್‌ಗಳಿದ್ದವು. ಅವರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ, ಕ್ರಿಮಿನಲ್ ಆರೋಪಿಗಳಿಗೆ ರಕ್ಷಣೆ ಕೊಟ್ಟು ಬೆಳೆಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ದೂರಿದರು. ಧಾರ್ಮಿಕ ವಿಚಾರಗಳ ಮೇಲೆ ಅಧಿಕಾರಕ್ಕೆ ಬರುತ್ತೇವೆ ಎಂದರೆ, ಅದು ಬಿಜೆಪಿ ಭ್ರಮೆಯಷ್ಟೇ.
28 ಸೀಟು ಗೆಲ್ಲಲು 3-4 ದಿನದಲ್ಲಿ ರಾಜ್ಯ ಪ್ರವಾಸ ಶುರು: ಬಿ.ಎಸ್.ಯಡಿಯೂರಪ್ಪ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಂತಹ ಭಾವನಾತ್ಮಕ ವಿಚಾರಗಳಿಗೆ ಕೈ ಹಾಕಿ ಬಿಜೆಪಿ ಕೈಸುಟ್ಟುಕೊಂಡಿದೆ. ಈಗಲೂ ಅವರು ಏನೇ ಭಾವನಾತ್ಮಕ ವಿಚಾರವನ್ನು ಮುನ್ನಲೆಗೆ ತಂದರೂ ಚುನಾವಣೆಯಲ್ಲಿ ಲಾಭ ಆಗುವುದಿಲ್ಲ ಎಂದು ಲೇವಡಿ ಮಾಡಿದರು. ಸಂವಿಧಾನಿಕ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳ ಬಗ್ಗೆ ಸಂಸದೀಯ ಪದ ಬಳಸಿ ಟೀಕೆ ಮಾಡಲಿ, ಕೀಳು ಮಟ್ಟದ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆಗುತ್ತದೆಯೇ? ಆದರೆ, ಸಿಎಂ ಸಿದ್ದರಾಮಯ್ಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರ್.ಅಶೋಕ ರಾಜಕಾರಣಿ ಎನ್ನುವುದಕ್ಕೆ ನಾಚಿಕೆ ಆಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.