ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಕೇವಲ ಲೋಕಸಭೆ ಚುನಾವಣೆಗೆ ಸೀಮಿತವಾಗದೆ ದೀರ್ಘಾವಧಿವರೆಗೆ ಮುಂದುವರಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು (ಸೆ.24): ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಕೇವಲ ಲೋಕಸಭೆ ಚುನಾವಣೆಗೆ ಸೀಮಿತವಾಗದೆ ದೀರ್ಘಾವಧಿವರೆಗೆ ಮುಂದುವರಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ದೆಹಲಿಯಿಂದ ರಾಜ್ಯಕ್ಕೆ ಆಗಮಿಸಿದ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈತ್ರಿ ವಿಚಾರದಲ್ಲಿ ಸೌಹಾರ್ದಯುತವಾಗಿ ಚರ್ಚೆ ನಡೆಸಲಾಗಿದೆ. ಉಭಯ ಪಕ್ಷಗಳ ಮೈತ್ರಿಯನ್ನು ದೀರ್ಘಾವಧಿವರೆಗೆ ಮುಂದುವರಿಸುವ ಕುರಿತು ಹಲವು ವಿಚಾರಗಳನ್ನು ಸಮಾಲೋಚನೆ ನಡೆಸಲಾಗಿದೆ.
ಮೈತ್ರಿಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂದು ಹೇಳಿದರು. ನಾಡಿನ ಜನತೆಯ ಹಿತದೃಷ್ಟಿಯಿಂದ ಕೆಲವು ವಿಚಾರಗಳನ್ನು ಬಿಜೆಪಿ ವರಿಷ್ಠರೊಂದಿಗೆ ಚರ್ಚೆ ಮಾಡಲಾಗಿದ್ದು, ಅವುಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ. ನಾಡಿನ ಸಮಸ್ಯೆಗಳ ಪರಿಹಾರಕ್ಕಾಗಿ ಬಿಜೆಪಿ ಜತೆ ಮೈತ್ರಿ ಮುಂದುವರಿಸಬೇಕಿದ್ದು, ಈ ವಿಚಾರದಲ್ಲಿ ಯಾವುದೇ ರೀತಿಯ ಪ್ರತಿಷ್ಠೆ ಇಲ್ಲ ಎಂದು ಹೇಳಿದರು.
ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲವು ಸಭೆಗಳನ್ನು ನಡೆಸಲು ಮನವಿ ಮಾಡಲಾಗಿದೆ. ದಸರಾ ಹಬ್ಬದ ನಂತರ ಮೈತ್ರಿ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸುತ್ತೇವೆ. ಉಭಯ ಪಕ್ಷಗಳ ನಡುವೆ ಈ ವಿಚಾರದಲ್ಲಿ ಗೊಂದಲವಿಲ್ಲ. ನಾಡಿನ, ರಾಷ್ಟ್ರದ ಅಭಿವೃದ್ಧಿಗಾಗಿ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಎಂದ ಅವರು, ಕಾವೇರಿ ನದಿ ನೀರು ವಿವಾದ ಕುರಿತಂತೆ ಅಮಿತ್ ಶಾ ಅವರ ಜೊತೆ ಚರ್ಚಿಸಿದ್ದು, ನಮಗೆ ಆಗಿರುವ ಅನ್ಯಾಯದ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ನಾಡಿನ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯ ಲೋಕಸಭೆ ಟಿಕೆಟ್‌ಗೆ ನಾನು ಆಕಾಂಕ್ಷಿಯಲ್ಲ: ನಿಖಿಲ್ ಕುಮಾರಸ್ವಾಮಿ
ಏರ್‌ಪೋರ್ಟ್‌ಗೇ ತೆರಳಿ ಎಚ್‌ಡಿಕೆಗೆ ಸ್ವಾಗತ ಕೋರಿದ ಮುನಿರತ್ನ: ದೆಹಲಿಯಲ್ಲಿ ಎನ್‌ಡಿಎ ಜತೆ ಜೆಡಿಎಸ್ ಮೈತ್ರಿ ಚರ್ಚೆ ಮುಗಿಸಿ ಹಿಂತಿರುಗಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಬಿಜೆಪಿ ಶಾಸಕ ಮುನಿರತ್ನ ಸ್ವಾಗತಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುನಿರತ್ನ, ಹೂಗುಚ್ಛ ನೀಡಿ ಇಬ್ಬರನ್ನು ಬರಮಾಡಿಕೊಂಡರು. ದೆಹಲಿಯಲ್ಲಿ ಮೈತ್ರಿ ಚರ್ಚೆಯಾಗುತ್ತಿದ್ದಂತೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು ಒಂದಾಗುವ ಸಂದೇಶ ಇದಾಗಿದೆ ಎಂದು ಹೇಳಲಾಗಿದೆ.