ಮೈತ್ರಿ ಬಳಿಕ ಇಂದು ಬಿಜೆಪಿ ನಾಯಕರ ಜತೆ ಎಚ್‌.ಡಿ.ಕುಮಾರಸ್ವಾಮಿ ಮೊದಲ ಸಭೆ!

By Kannadaprabha News  |  First Published Jan 21, 2024, 9:31 AM IST

ಲೋಕಸಭೆ ಚುನಾವಣೆಗೆ ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗಲಿದ್ದಾರೆ. 


ಬೆಂಗಳೂರು (ಜ.21): ಲೋಕಸಭೆ ಚುನಾವಣೆಗೆ ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗಲಿದ್ದಾರೆ. ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಡಾಲರ್ಸ್ ಕಾಲೋನಿಯಲ್ಲಿನ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸದಲ್ಲಿ ಸಭೆ ನಿಗದಿಯಾಗಿದೆ.  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿದಂತೆ ಇತರರು ಉಪಸ್ಥಿತರಿರಲಿದ್ದಾರೆ. 

ಎಚ್‌.ಡಿ.ಕುಮಾರಸ್ವಾಮಿ ಜತೆಗೆ ಜೆಡಿಎಸ್‌ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸಹ ತೆರಳುವ ಸಾಧ್ಯತೆ ಇದೆ. ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡ ಬಳಿಕ ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗುತ್ತಿರುವುದು ಇದೇ ಮೊದಲು.  ಮೈತ್ರಿಯ ಸಂದರ್ಭದ ವೇಳೆ ಕುಮಾರಸ್ವಾಮಿ ರಾಜ್ಯ ಬಿಜೆಪಿ ನಾಯಕರೊಂದಿಗೆ ಯಾವುದೇ ಚರ್ಚೆಗಳನ್ನು ನಡೆಸಿರಲಿಲ್ಲ. ನೇರವಾಗಿ ಬಿಜೆಪಿ ವರಿಷ್ಠರ ಜತೆ ಮಾತುಕತೆ ನಡೆಸಿದ್ದರು.  ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯ ಸಂದರ್ಭದಲ್ಲಾಗಲಿ, ಇತ್ತೀಚೆಗೆ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನೂ ಭೇಟಿಯಾದಾಗಲೂ ಸಹ ರಾಜ್ಯ ನಾಯಕರನ್ನು ಭೇಟಿಯಾಗಲಿಲ್ಲ. 

Tap to resize

Latest Videos

ಮಹಿಳೆಗೆ ನಾಯಿ ಕಚ್ಚಿದ ಕೇಸ್: ನಟ ದರ್ಶನ್‌ಗೆ ಪೊಲೀಸ್ ಕ್ಲೀನ್‌ಚಿಟ್

ವರಿಷ್ಠರೊಂದಿಗೆ ಮಾತುಕತೆ ನಡೆಸಿದ ಬಳಿಕ ಇದೀಗ ಮೊದಲ ಬಾರಿ ಭೇಟಿಯಾಗುತ್ತಿದ್ದು, ರಾಜ್ಯ ರಾಜಕೀಯ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.  ಈ ನಡುವೆ, ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್‌ ಕಣಕ್ಕಿಳಿಯುತ್ತಿದ್ದು, ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಂದು ಜೆಡಿಎಸ್‌ನ ನಾಯಕರು ಘೋಷಣೆ ಮಾಡಿದ್ದರು.  ಇದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಯಾವುದೇ ಸಮಾಲೋಚನೆ ನಡೆಸದೆ ಜೆಡಿಎಸ್‌ ನಾಯಕರೇ ತೀರ್ಮಾನ ಕೈಗೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆಯೂ ಬಿಜೆಪಿ ನಾಯಕರ ಭೇಟಿಯ ವೇಳೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

click me!