ರಾಜ್ಯದಿಂದ 25 ರೈಲುಗಳಲ್ಲಿ 35000 ಬಿಜೆಪಿಗರಿಗೆ ಅಯೋಧ್ಯೆ ಪ್ರವಾಸ: ವಿಜಯೇಂದ್ರ ಹೇಳಿದ್ದೇನು?

By Kannadaprabha NewsFirst Published Jan 21, 2024, 8:24 AM IST
Highlights

ಪಕ್ಷದ ಕಾರ್ಯಕರ್ತರಿಗೆ ಅಯೋಧ್ಯೆಯ ಶ್ರೀರಾಮ ಮಂದಿರ ದರ್ಶನ ಮಾಡಿಸುವ ಸಲುವಾಗಿ ರಾಜ್ಯ ಬಿಜೆಪಿಯು ರಾಮಮಂದಿರ ದರ್ಶನ ಅಭಿಯಾನ ಆರಂಭಿಸಿದೆ. ಇದರ ಅಂಗವಾಗಿ ರಾಜ್ಯದಿಂದ ಹೆಚ್ಚೂ ಕಡಿಮೆ 35 ಸಾವಿರ ಬಿಜೆಪಿ ಕಾರ್ಯಕರ್ತರು ಜ.31ರಿಂದ ಮಾ.25ರವರೆಗೆ ಸುಮಾರು 25 ರೈಲುಗಳಲ್ಲಿ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆಯಲಿದ್ದಾರೆ.

ಬೆಂಗಳೂರು (ಜ.21): ಪಕ್ಷದ ಕಾರ್ಯಕರ್ತರಿಗೆ ಅಯೋಧ್ಯೆಯ ಶ್ರೀರಾಮ ಮಂದಿರ ದರ್ಶನ ಮಾಡಿಸುವ ಸಲುವಾಗಿ ರಾಜ್ಯ ಬಿಜೆಪಿಯು ರಾಮಮಂದಿರ ದರ್ಶನ ಅಭಿಯಾನ ಆರಂಭಿಸಿದೆ. ಇದರ ಅಂಗವಾಗಿ ರಾಜ್ಯದಿಂದ ಹೆಚ್ಚೂ ಕಡಿಮೆ 35 ಸಾವಿರ ಬಿಜೆಪಿ ಕಾರ್ಯಕರ್ತರು ಜ.31ರಿಂದ ಮಾ.25ರವರೆಗೆ ಸುಮಾರು 25 ರೈಲುಗಳಲ್ಲಿ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಒಟ್ಟು ಆರು ದಿನಗಳ ಪ್ರವಾಸ ಇದಾಗಿದ್ದು, ಪ್ರತಿಯೊಬ್ಬರಿಗೆ ಊಟ, ವಸತಿ ಸಹಿತ ಮೂರು ಸಾವಿರ ರು. ವಚ್ಚವಾಗಲಿದೆ. ಅದನ್ನು ಕಾರ್ಯಕರ್ತರೇ ಭರಿಸಬೇಕು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಅಭಿಯಾನ ಕುರಿತು ಮಾಹಿತಿ ನೀಡಿದ್ದಾರೆ. ಶನಿವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆಗೆ ತೆರಳುವವರನ್ನು ಪಕ್ಷದ ಕಾರ್ಯಕರ್ತರು ಎನ್ನದೇ ರಾಮಭಕ್ತರು ಎಂದು ಉಲ್ಲೇಖಿಸಿದರು.  ಒಟ್ಟು ಆರು ದಿನಗಳ ಇದರ ವೆಚ್ಚವನ್ನು ಭಕ್ತರು ಸ್ವಂತವಾಗಿ ಭರಿಸುತ್ತಾರೆ. ಈ ಅಭಿಯಾನದ ಸಂಚಾಲಕರಾಗಿ ಬಿಜೆಪಿ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಸಹ ಸಂಚಾಲಕರಾಗಿ ಮಾಜಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

Latest Videos

ರಾಜ್ಯದಲ್ಲಿ ಕಾಂಗ್ರೆಸ್‌ನ 5 ಗ್ಯಾರಂಟಿ ಯೋಜನೆ ಯಶಸ್ವಿ: ಸಚಿವ ತಿಮ್ಮಾಪುರ ಪುತ್ರ!

ಪ್ರತಿ ರಾಮಭಕ್ತರಿಗೆ ಕ್ಯೂ ಆರ್ ಕೋಡ್ ಹೊಂದಿರುವ ಐಡಿ ಕಾರ್ಡ್‌ ಅನ್ನು ವಿತರಿಸಲಾಗುತ್ತದೆ. ಕರ್ನಾಟಕದ ಪ್ರಮುಖ ರೈಲು ನಿಲ್ದಾಣಗಳಿಂದ ರೈಲುಗಳ ವ್ಯವಸ್ಥೆಯನ್ನು ಮಾಡಲಾಗಿದೆ.  ಅಯೋಧ್ಯೆಯಲ್ಲಿ ಕನ್ನಡ ಭಾಷೆಯ ಹೆಲ್ಪ್ ಲೈನ್ ಕೇಂದ್ರವಿದ್ದು ಕರ್ನಾಟಕದ ರಾಮಭಕ್ತರಿಗೆ ಕನ್ನಡ ಭಾಷೆಯಲ್ಲೇ ಪ್ರಕಟಣೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಅಯೋಧ್ಯೆಯಲ್ಲಿ ವಸತಿಗಾಗಿ ವ್ಯವಸ್ಥಿತವಾದ ಜರ್ಮನ್ ಟೆಂಟ್‍ ಹೌಸ್‍ಗಳಿದ್ದು, ಸ್ನಾನಗೃಹ, ಶೌಚಾಲಯ ವ್ಯವಸ್ಥೆಗಳಿರುತ್ತದೆ. ಅಯೋಧ್ಯೆಯಲ್ಲಿ 48 ಕಡೆ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಅದರಲ್ಲಿ ಎರಡು ಕಡೆ ಕರ್ನಾಟಕದ ರಾಮಭಕ್ತರಿಗಾಗಿ ಭೋಜನದ ವ್ಯವಸ್ಥೆ ಮಾಡಲಾಗಿದೆ. 

ಲೋಕಸಭೆ ಚುನಾವಣೆ ಅಭ್ಯರ್ಥಿ ಆಗೋದಿಲ್ಲ: ಶಾಸಕ ಕೆ.ಎಂ.ಶಿವಲಿಂಗೇಗೌಡ

ಒಂದು ರೈಲಿನಲ್ಲಿ 1,500 ಜನ ಪ್ರಯಾಣ ಮಾಡುತ್ತಾರೆ. ಪ್ರತಿ ರೈಲಿಗೆ ರೈಲ್ ಪ್ರಮುಖ್ ಮತ್ತು ಬೋಗಿ ಪ್ರಮುಖ್ ಇರುತ್ತಾರೆ. ಊಟ ಉಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಿದ್ದಾರೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ವಿಜಯೇಂದ್ರ ಅವರು ‘ಪರಿವರ್ತನಾ ಪಥ ರಾಮಮಂದಿರ ರಥ’ ಪುಸ್ತಕ ಬಿಡುಗಡೆ ಮಾಡಿದರು. ಅಯೋಧ್ಯೆಯ ಪ್ರಮುಖ ಘಟನಾವಳಿಗಳನ್ನು ಇದು ಒಳಗೊಂಡಿದೆ. ‘ಕಮಲ ಪಥ’ ತಂಡವು ಈ ಪುಸ್ತಕವನ್ನು ಸಿದ್ಧಪಡಿಸಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ರಾಮಮಂದಿರ ದರ್ಶನ ಅಭಿಯಾನದ ಸಹ ಸಂಚಾಲಕರಾಗಿ ನೇಮಕಗೊಂಡಿರುವ ಜಗದೀಶ್ ಹಿರೇಮನಿ ಅವರು ಉಪಸ್ಥಿತರಿದ್ದರು.

click me!