ದೀಪಾವಳಿ ಹಬ್ಬಕ್ಕೆ ವಿದ್ಯುತ್ ದೀಪ ಅಲಂಕಾರಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬೆಸ್ಕಾಂ ಜಾಗೃತ ದಳದ ಜಯನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬೆಂಗಳೂರು (ನ.16): ದೀಪಾವಳಿ ಹಬ್ಬಕ್ಕೆ ವಿದ್ಯುತ್ ದೀಪ ಅಲಂಕಾರಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬೆಸ್ಕಾಂ ಜಾಗೃತ ದಳದ ಜಯನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ನಡುವೆ ವಿದ್ಯುತ್ ಕಳವು ಪ್ರಕರಣ ಬಹಿರಂಗಗೊಂಡ ಬೆನ್ನಲ್ಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪಗಳು ತೀವ್ರಗೊಂಡಿದೆ.
ಕುಮಾರಸ್ವಾಮಿ ಅವರ ಮನೆಗೆ ಅನಧಿಕೃತ ಸಂಪರ್ಕ ಪಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್, ‘ಜಗತ್ತಿನ ಏಕೈಕ ಮಹಾಪ್ರಾಮಾಣಿಕ ಎಚ್.ಡಿ ಕುಮಾರಸ್ವಾಮಿಯವರ ಜೆ.ಪಿ ನಗರದ ನಿವಾಸಕ್ಕೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ. ಕುಮಾರಸ್ವಾಮಿ ಅವರೇ, ನಮ್ಮ ಸರ್ಕಾರ ಗೃಹಜ್ಯೋತಿಯಲ್ಲಿ 200 ಯೂನಿಟ್ ಉಚಿತ ಕೊಡುತ್ತಿದೆಯೇ ಹೊರತು 2000 ಯೂನಿಟ್ ಅಲ್ಲ. ವಿದ್ಯುತ್ತನ್ನೇ ಬಿಡದೆ ಲೂಟಿ ಮಾಡುವ ತಾವು ರಾಜ್ಯವನ್ನು ಇನ್ನೆಷ್ಟು ಲೂಟಿ ಮಾಡಿರಬಹುದು ಎಂದು ಕಿಡಿ ಕಾರಿದೆ.
ಬಿಜೆಪಿ- ಜೆಡಿಎಸ್‌ನಿಂದ ಶೀಘ್ರವೇ ಬಹಳಷ್ಟು ಮಂದಿ ಕಾಂಗ್ರೆಸ್‌ಗೆ: ಸಚಿವ ಚಲುವರಾಯಸ್ವಾಮಿ
ಜೆಡಿಎಸ್ ಕಚೇರಿಗೆ ಪೋಸ್ಟರ್: ಈ ಮಧ್ಯ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಚೇರಿಯ ಕಾಪೌಂಡ್ ಮೇಲೆ, ಕರೆಂಟ್ ಕಳ್ಳ, ‘ಕುಮಾರಸ್ವಾಮಿಯವರೇ 200 ಯುನಿಟ್ ಉಚಿತವಿದೆ ನೆನಪಿಟ್ಟುಕೊಳ್ಳಿ. ಹೆಚ್ಚು ಕದಿಯಬೇಡಿ’ ಎಂದು ಪೋಸ್ಟರ್ ಅಂಟಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಜೆಡಿಎಸ್ ತಿರುಗೇಟು, ಪ್ರತಿಭಟನೆ: ಇದಕ್ಕೆ ಟ್ವಿಟ್ಟರ್ (ಎಕ್ಸ್) ಮೂಲಕ ತಿರುಗೇಟು ನೀಡಿರುವ ಜೆಡಿಎಸ್, ‘ಕೊಳಕುಮಂಡಲ’ ರಾಜ್ಯ ಕಾಂಗ್ರೆಸ್ ತುರ್ತಾಗಿ ಜನರ ಬೇರೆಡೆಗೆ ಸೆಳೆಯಲು ಈ ವಿಚಾರ ಆಯ್ದುಕೊಂಡಿದೆ. ಕಳೆದ ಒಂದು ವಾರದಿಂದ ಕುಮಾರಸ್ವಾಮಿ ನಡೆಸಿರುವ ಸರ್ಜಿಕಲ್ ಸ್ಟ್ರೈಕ್‌ನಿಂದ ಪತರಗುಟ್ಟಿ ಹೋಗಿದೆ. ಭಾನುವಾರದ ಅವರ ಸುದ್ದಿಗೋಷ್ಠಿಯಿಂದ ನವರಂಧ್ರಗಳು ಆಸ್ಫೋಟಗೊಂಡಿವೆ ಎಂದು ಟೀಕಿಸಿದೆ. ಇದೇ ವೇಳೆ ಜೆಡಿಎಸ್ ಕಚೇರಿ ಗೋಡೆಗೆ ಪೋಸ್ಟರ್ ಅಂಟಿಸಿರುವ ಸಂಬಂಧ ಕುಮಾರಸ್ವಾಮಿ ಬೆಂಬಲಿಗರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಫ್‌ಐಆರ್ ದಾಖಲು: ಪ್ರಕರಣದ ಬಗ್ಗೆ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಜಯನಗರ ಠಾಣೆ ಬೆಸ್ಕಾಂ ಜಾಗೃತ ದಳದ ಪೊಲೀಸರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಪ್ರಶಾಂತ್ ಕುಮಾರ್ ನೀಡಿದ ದೂರಿನ ಮೇರೆಗೆ ಬೆಸ್ಕಾಂ ಜಾಗೃತ ದಳ ಪೊಲೀಸ್ ಅಧಿಕಾರಿಗಳು ವಿದ್ಯುತ್ -2003 ಕಾಯ್ದೆ 135ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?: ದೀಪಾವಳಿ ಹಬ್ಬದ ಪ್ರಯುಕ್ತ ಕುಮಾರಸ್ವಾಮಿ ಅವರ ಜೆ.ಪಿ.ನಗರ 3ನೇ ಹಂತದಲ್ಲಿರುವ ಮನೆಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಅದಕ್ಕೆ ಮನೆಯ ವಿದ್ಯುತ್ ಮೀಟರ್‌ನಿಂದ ಸಂಪರ್ಕ ಪಡೆಯುವ ಬದಲು ರಸ್ತೆ ಬದಿಯ ವಿದ್ಯುತ್ ಕಂಬದಿಂದ ಸಂಪರ್ಕ ಪಡೆಯಲಾಗಿತ್ತು. ಈ ಕುರಿತ ವಿಡಿಯೋ ಎಲ್ಲೆಡೆ ವೈರಲ್ ಆದ ಹಿನ್ನೆಲೆಯಲ್ಲಿ ಬೆಸ್ಕಾಂ ಜಾಗೃತ ದಳದ ಡಿವೈಎಸ್ಪಿ ಅನುಷಾ ಮತ್ತು ತಂಡ ಹಾಗೂ ಬೆಸ್ಕಾಂ ಅಧಿಕಾರಿಗಳು ಮಂಗಳವಾರ ಕುಮಾರಸ್ವಾಮಿ ಅವರ ಮನೆಗೆ ತೆರಳಿ ಪರಿಶೀಲಿಸಿತ್ತು. ಈ ವೇಳೆ ರಸ್ತೆ ಬದಿಯ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಇಇ ಪ್ರಶಾಂತ್ ಕುಮಾರ್ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಇನ್‌ಸ್ಪೆಕ್ಟರ್ ಎಡ್ವಿನ್ ಪ್ರದೀಪ್.ಎಸ್.ನೇತೃತ್ವದಲ್ಲಿ ತನಿಖೆಗೆ ಸೂಚಿಸಲಾಗಿದೆ ಎಂದು ಬೆಸ್ಕಾಂ ಜಾಗೃತ ದಳ ಅಧಿಕಾರಿಗಳು ಮಾಹಿತಿ ನೀಡಿದರು.
ಜೈಲು ಇಲ್ಲ, ದಂಡಕ್ಕೆ ಸೀಮಿತ: ವಿದ್ಯುತ್ ಲೈನ್‌ನಿಂದ ವಿದ್ಯುತ್ ಕಳವು ಮಾಡಿರುವುದರಿಂದ ವಿದ್ಯುತ್ ಶಕ್ತಿ-2003ರ ಕಾಯ್ದೆ 135 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾಯ್ದೆ ಅಡಿಯಲ್ಲಿ ಮೂರು ವರ್ಷ ಜೈಲು ಅಥವಾ ದಂಡ ವಿಧಿಸಬಹುದಾಗಿದೆ. ಕುಮಾರಸ್ವಾಮಿ ಅವರು ಅಚಾತುರ್ಯದಿಂದ ಘಟನೆ ನಡೆದಿರುವುದನ್ನು ಒಪ್ಪಿಕೊಂಡು ದಂಡ ಪಾವತಿಸುವುದಾಗಿ ಹೇಳಿರುವುದರಿಂದ ಶಿಕ್ಷೆ ದಂಡಕ್ಕೆ ಸೀಮಿತವಾಗಲಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
Chikkamagaluru: ಕಿಲ್ಲರ್ ಒಂಟಿ ಸಲಗ ಆಪರೇಷನ್ ವೇಳೆ ಮತ್ತೊಂದು ಕಾಡಾನೆ ಸೆರೆ
ಬೆಸ್ಕಾಂ ಪೊಲೀಸರು ಎಫ್ಐಆರ್ ಹಾಕಬೇಕಾದರೆ ಕುಮಾರಸ್ವಾಮಿ ತಪ್ಪು ಮಾಡಿರಬೇಕು. ಅಪರಾಧ ಮಾಡಿರುವ ಕಾರಣಕ್ಕೆ ಎಫ್ಐಆರ್ ದಾಖಲಿಸಲಾಗಿದೆ. ತಪ್ಪಾಗಿದೆ ಪಶ್ಚಾತಾಪ ಪಡುತ್ತೇನೆ ಎಂದರೆ ಅದು ಶಿಕ್ಷೆಯಾಗುತ್ತಾ?
- ಸಿದ್ದರಾಮಯ್ಯ, ಮುಖ್ಯಮಂತ್ರಿ.