
ತುಮಕೂರು (ಆ.25): ಧರ್ಮಸ್ಥಳ ಪ್ರಕರಣದಲ್ಲಿ ಎಲ್ಲರೂ ಆರಂಭದಲ್ಲಿಯೇ ಎಡವಿದ್ದು, ತಲೆ ಬುರುಡೆ ಇಟ್ಟುಕೊಂಡು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ದೇಶದಲ್ಲಿ ಅಪಕೀರ್ತಿ ತರುವ ಪ್ರಯತ್ನ ನಡೆಸಲಾಯಿತು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಮೃತದೇಹವನ್ನು ಮಣ್ಣು ಮಾಡಿದ ಮೇಲೆ ಅದನ್ನು ತೆಗೆಯುವ ಅಧಿಕಾರ ನಮಗೆ ಇರುವುದಿಲ್ಲ. ಹಾಗೆ ತೆಗೆಯಬೇಕು ಎಂದರೆ ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ತೆಗೆಯಬೇಕು. ಮಣ್ಣು ಮಾಡಿದ ಮೇಲೆ ಅದರ ಅಧಿಕಾರ ಯಾರಿಗಿದೆ, ಏನಿದೆ ಎಂಬುದು ಕಾನೂನಿನಲ್ಲಿ ಇದೆ.
ಆ ತಲೆ ಬುರುಡೆಯನ್ನು ಎಲ್ಲಿಂದ ಹೊರತೆಗೆದರು? ಎಂದು ವಿಚಾರಣೆ ಮಾಡಬೇಕಿತ್ತು ಎಂದು ಹೇಳಿದರು. ಆರಂಭದಲ್ಲಿ ಏನನ್ನೂ ವಿಚಾರಣೆ ಮಾಡದೆ ತಲೆ ಬುರುಡೆ ಇಟ್ಟುಕೊಂಡು ಧರ್ಮಸ್ಥಳಕ್ಕೆ ದೇಶದಲ್ಲಿ ಅಪಕೀರ್ತಿ ತರುವ ಪ್ರಯತ್ನ ನಡೆದಿದೆ. ಕೆಲ ತನಿಖಾ ತಂಡಗಳು ವಿನಾಕಾರಣ ಈ ಪ್ರಕರಣವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋದವು. ಕಂಡ ಕಂಡಲ್ಲಿ ಗುಂಡಿ ತೆಗೆಯುವ ಮೂಲಕ ಅಲ್ಲಿನ ನಿವಾಸಿಗಳಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಸಾಮಾನ್ಯ ಜ್ಞಾನ ಬಳಸಿಲ್ಲ: ಪ್ರಾರಂಭಿಕ ಹಂತದಲ್ಲಿ ಸಾಮಾನ್ಯ ಜ್ಞಾನ ಬಳಸಿ ವಿಚಾರಣೆ ಮಾಡಿದ್ದರೆ ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ. ಇದು ಎಡಪಂಥೀಯರು, ಬಲಪಂಥೀಯರು ಅನ್ನುವುದನ್ನು ನಾನು ಒಪ್ಪುವುದಿಲ್ಲ. ದೂರು ಕೊಡಲು ಬಂದವನ ಪೂರ್ವಪರ ವಿಚಾರಿಸಬೇಕಿತ್ತು. ಅದನ್ನು ಬಿಟ್ಟು ನ್ಯಾಯಾಧೀಶರ ಮುಂದೆ ‘164 ಸ್ಟೇಟ್ಮೆಂಟ್’ ಮಾಡಿಕೊಂಡು ಎಸ್ಐಟಿ ರಚಿಸಿಕೊಂಡು ಇಷ್ಟು ರಾದ್ಧಾಂತ ಮಾಡಿದ್ದಾರೆ. ಪ್ರಾರಂಭವಿಕವಾಗಿ ತಲೆ ಬುರುಡೆ ತಂದವನನ್ನೇ ವಿಚಾರಣೆ ಮಾಡಬೇಕಾಗಿತ್ತು. ಮೊದಲೇ ಇದನ್ನೆಲ್ಲಾ ಮಾಡಿದ್ದರೆ ಈ ರಾದ್ಧಾಂತಗಳು ನಡೆಯುತ್ತಿರಲಿಲ್ಲ ಎಂದು ರಾಜಣ್ಣ ಹೇಳಿದರು.
ಡಿಸಿಸಿ ಬ್ಯಾಂಕ್‌ಗೆ ಅಧ್ಯಕ್ಷರಾಗಿ ರಾಜಣ್ಣ ಬಹುತೇಕ ಖಚಿತ: ಮಂತ್ರಿ ಸ್ಥಾನ ಕಳೆದುಕೊಂಡರೂ ಡಿಸಿಸಿ ಬ್ಯಾಂಕ್ ನ ಎಲ್ಲಾ 14 ಮಂದಿ ನಿರ್ದೇಶಕ ಸ್ಥಾನಕ್ಕೆ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ಮೂಲಕ ಕೆ.ಎನ್. ರಾಜಣ್ಣ ಅವರು ಮತ್ತೆ ಬ್ಯಾಂಕ್ ನ ಅಧ್ಯಕ್ಷ ಸ್ಥಾನದ ಪಟ್ಟಕ್ಕೇರಲಿದ್ದಾರೆ. ಭಾನುವಾರ ನಡೆದ 6 ನಿರ್ದೇಶಕ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದರೊಂದಿಗೆ ಸಹಕಾರ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಸಹಕಾರ ಸಚಿವ ಸ್ಥಾನದಿಂದ ವಜಾಗೊಂಡ ಬಳಿಕ ಹಲವಾರು ಮುಖಂಡರು ರಾಜಣ್ಣಗೆ ಸವಾಲಾಗಿದ್ದರು. ಅಲ್ಲದೇ ರಾಜಣ್ಣಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಟ್ಟ ತಪ್ಪಿಸಲು ನಾನಾ ರೀತಿಯ ಕಸರತ್ತು ನಡೆಸಿದ್ದರು. ಆದರೆ ರಾಜಣ್ಣ ಅವರ ತಂತ್ರಗಾರಿಕೆಯ ಮುಂದೆ ವಿರೋಧಿಗಳ ಕಸರತ್ತು ವಿಫಲವಾಗಿದ್ದು ಅಂತಿಮವಾಗಿ ಎಲ್ಲಾ 14 ಮಂದಿ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ಮೂಲಕ ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿ ಏರಲಿದ್ದಾರೆ.
ಬ್ಯಾಂಕ್ ನ ನಿರ್ದೇಶಕರಾಗಿ ಈ ಬಾರಿ ಮೂರು ಮಂದಿ ಶಾಸಕರು ಆಯ್ಕೆಯಾಗಿದ್ದಾರೆ. ಈ ಪೈಕಿ ಮಧುಗಿರಿಯ ಶಾಸಕ ಕೆ.ಎನ್. ರಾಜಣ್ಣ, ತಿಪಟೂರು ಶಾಸಕ ಕೆ. ಷಡಕ್ಷರಿ ಹಾಗೂ ಪಾವಗಡ ಶಾಸಕ ವೆಂಕಟೇಶ್ ಅವರು ನಿರ್ದೇಶಕರಾಗಿದ್ದಾರೆ. ಈ ಪೈಕಿ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದರೆ ಷಡಕ್ಷರಿ ಮತ್ತು ವೆಂಕಟೇಶ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ನಿರ್ದೇಶಕರಾಗಿದ್ದಾರೆ.ಮತಕಳವು ವಿಚಾರವಾಗಿ ರಾಜಣ್ಣ ಹೇಳಿದ ಹೇಳಿಕೆ ಹೈಕಮಾಂಡ್ ಗೆ ಸಿಟ್ಟು ತರಿಸಿದ್ದರ ಪರಿಣಾಮ ಅವರು ಮಂತ್ರಿ ಸ್ಥಾನದಿಂದ ವಜಾಗೊಂಡಿದ್ದರು. ಹೀಗಾಗಿ ರಾಜಣ್ಣ ಅವರಿಂದ ಡಿಸಿಸಿ ಬ್ಯಾಂಕ್ ಹುದ್ದೆಯನ್ನು ಕಸಿದುಕೊಳ್ಳಲು ವಿರೋಧಿಗಳು ನಡೆಸಿದ ಎಲ್ಲಾ ತಂತ್ರಗಳು ವಿಫಲವಾದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.