ಸರ್ಕಾರ ಮತ್ತು ಅರಣ್ಯ ಇಲಾಖೆ ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರೈತ ಮಹಿಳೆಯರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರ ಶಾಪ ಸರ್ಕಾರಕ್ಕೆ ತಟ್ಟದೆ ಬಿಡುವುದಿಲ್ಲ.
ಶ್ರೀನಿವಾಸಪುರ (ಸೆ.11): ಸರ್ಕಾರ ಮತ್ತು ಅರಣ್ಯ ಇಲಾಖೆ ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರೈತ ಮಹಿಳೆಯರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರ ಶಾಪ ಸರ್ಕಾರಕ್ಕೆ ತಟ್ಟದೆ ಬಿಡುವುದಿಲ್ಲ. ರೈತರ ಪರವಾಗಿ ನನ್ನ ಹೋರಾಟ ಮುಂದುವರೆಯುತ್ತದೆ. ನನ್ನನ್ನು ಜೈಲಿಗೆ ಹಾಕಲಿ ಅಥವಾ ಗುಂಡಿಕ್ಕಿ ಕೊಲ್ಲಲ್ಲಿ ರೈತರ ಪರವಾಗಿ ನಿಲ್ಲುತ್ತೇನೆಂದು ಸಂಸದ ಮುನಿಸ್ವಾಮಿ ಹೇಳಿದರು.
ಅರಣ್ಯ ಇಲಾಖೆಯವರು ಒತ್ತುವರಿ ನೆಪದಲ್ಲಿ ಪಾಳ್ಯ ಗ್ರಾಮದ ರೈತ ಮಹಿಳೆಯರ ಜಮೀನಿನಲ್ಲಿ ಬೆಳೆ ನಾಶ ಪಡಿಸಿದ್ದಲ್ಲದೆ ಅವರ ವಿರುದ್ಧವೇ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿರುವುದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ದಾಖಲಾಗಿರುವ ಶಾಮಲ ಗೋಪಾಲರೆಡ್ಡಿ ಮತ್ತು ಲಕ್ಷ್ಮೀದೇವಮ್ಮ ರವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು.
ಅರಣ್ಯ ಜಮೀನು ತೆರವು: ಕಾಂಗ್ರೆಸ್ ಸರ್ಕಾರದ ವಿರುದ್ದ ಸಂಸದ ಮುನಿಸ್ವಾಮಿ ಆಕ್ರೋಶ
ಕಳೆದ 20 ದಿನಗಳಿಂದ ಶ್ರೀನಿವಾಸಪುರದಲ್ಲಿ ಅರಣ್ಯ ಇಲಾಖೆಯವರು ರೈತರ ಜಮೀನುಗಳ ಒತ್ತುವರಿಯನ್ನು ತೆರವು ಮಾಡುವ ನೆಪದಲ್ಲಿ ಕೋಟ್ಯತರ ಬೆಲೆ ಬಾಳುವ ತರಕಾರಿ ಬೆಳೆಗಳನ್ನು ಹಾಗೂ 40-50 ವರ್ಷಗಳ ಮಾವಿನ ಮರಗಳನ್ನು ನಾಶ ಮಾಡುತ್ತಿದ್ದಾರೆ. ಸರ್ಕಾರ ಇವರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು. ಅರಣ್ಯ ಇಲಾಖೆಯವರು ನೂರು ಕೇಸು ಹಾಕಿದರೂ ನಾನು ಹೆದರುವುದಿಲ್ಲ. ರಾಜ್ಯ ಮಟ್ಟದಲ್ಲಿ ನಮ್ಮ ನಾಯಕರ ಗಮನಕ್ಕೆ ತಂದಿದ್ದೇನೆ. ರಾತ್ರಿ ವೇಳೆ ಜೆಸಿಬಿ ಡ್ರೈವರುಗಳಿಗೆ ಕುಡಿಸಿ ಅರಣ್ಯ ಇಲಾಖೆಯವರು ರೈತರ ಮೇಲೆ ದಬ್ಬಾಳಿಕೆ ಮಾಡಿಸುತ್ತಿದ್ದಾರೆ. ತೆರವು ಕಾರ್ಯಾಚರಣೆ ನಿಲ್ಲುವ ತನಕ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿವಾದಾತ್ಮಕ ಹೇಳಿಕೆ: ಅರಣ್ಯ ಇಲಾಖೆಯವರು ಎಕರೆಗೆ ಐದು ಲಕ್ಷ ಡಿಮ್ಯಾಂಡ್ ಮಾಡುತ್ತಿದ್ದಾರೆ. ಸರ್ಕಾರ ಆತ್ಮಹತ್ಯೆ ಮಾಡಿಕೊಂಡರೆ 2-3 ಲಕ್ಷ ಎಂದು ಹೇಳುತ್ತಿದೆ. ಅರಣ್ಯ ಸಚಿವರು ಮತ್ತು ಕಂದಾಯ ಸಚಿವರು ಆತ್ಮಹತ್ಯೆ ಮಾಡಿಕೊಳ್ಳಲಿ ನಾನೇ ಐದು ಲಕ್ಷ ಅಥವಾ 50 ಲಕ್ಷ ಕೊಡುತ್ತೇನೆಂದು ಸಂಸದ ಮುನಿಸ್ವಾಮಿ ಇದೇ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ದೇಶದ ಭವಿಷ್ಯಕ್ಕಾಗಿ ಸಂಸದ ಸ್ಥಾನ ಬಿಟ್ಟುಕೊಡಲು ಸಿದ್ಧ: ಮುನಿಸ್ವಾಮಿ
ಕೇಂದ್ರ ಸರ್ಕಾರದ ಹೊಣೆ: ಸಂಸದ ಮುನಿಸ್ವಾಮಿ ಅವರಿಗೆ 20 ದಿನಗಳ ನಂತರ ಜ್ಞಾನೋದಯವಾಯಿತೇ. ಸರ್ಕಾರ ಮಟ್ಟದಲ್ಲಿ ತೆರವು ಕಾರ್ಯಾಚರಣೆ ನಿಲ್ಲಿಸದೆ ರೌಡಿಸಂ ರೀತಿಯಲ್ಲಿ ಅರಣ್ಯ ಇಲಾಖೆಯ ಮೇಲೆ ಅಮಾಯಕ ರೈತರಿಂದ ದಬ್ಬಾಳಿಕೆ ಮಾಡಿಸಿ ಜೆಸಿಬಿಗಳನ್ನು ಜಖಂಗೊಳಿಸಿ ಶಾಂತಿಯುತವಾಗಿದ್ದ ಶ್ರೀನಿವಾಸಪುರಕ್ಕೆ ಬೆಂಕಿ ಹಚ್ಚುವ ಕೆಲಸ ಸಂಸದ ಮುನಿಸ್ವಾಮಿ ಮಾಡಿದ್ದಾರೆ. ಇದು ಮೀಸಲು ಅರಣ್ಯವಾಗಿರುವ ಕಾರಣ ಈ ಕಾರ್ಯಾಚರಣೆ ತಡೆಯಬೇಕಾದ ಅಧಿಕಾರಿ ಕೇಂದ್ರ ಸರ್ಕಾರಕ್ಕಿದೆ. ಸಂಸದರು ಕೇಂದ್ರವನ್ನು ಒತ್ತಾಯಿಸಿ ಕಾರ್ಯಾಚಾರಣೆ ಏಕೆ ನಿಲ್ಲಿಸಲಿಲ್ಲ ಎಂದು ರೈತ ಸಂಘದ ಮುಖಂಡ ಶ್ರೀನಿವಾಸಗೌಡ ಪ್ರಶ್ನಿಸಿದ್ದಾರೆ.