
ಹಾವೇರಿ: ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಘರ್ವಾಪ್ಸಿ ಬಗ್ಗೆ ಬಿಸಿಬಿಸಿ ಚರ್ಚೆ ಆಗ್ತಿದೆ.. ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದರ ಮುಂದುವರಿದ ಭಾಗವೇ ಇತ್ತೀಚೆಗೆ ಧಾರವಾಡದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ಆಗಿರೋದು ಎನ್ನಲಾಗ್ತಿದೆ. ಈ ಮಧ್ಯೆ ಇವತ್ತು ಸಂಸದ ಬಸವರಾಜ್ ಬೊಮ್ಮಾಯಿ ಅವರು ನೀಡಿರುವ ಬಿಗ್ ಸ್ಟೇಟ್ಮೆಂಟ್ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಬಸವರಾಜ್ ಬೊಮ್ಮಾಯಿ ಅವರು ಯತ್ನಾಳ್ ಹಾಗೂ ಕೆಎಸ್ ಈಶ್ವರ್ಪ್ಪ ಅವರನ್ನು ಮತ್ತೆ ಪಕ್ಷಕ್ಕೆ ವಾಪಸ್ ಕರೆ ತರುವ ಬಗ್ಗೆ ಪರೋಕ್ಷವಾಗಿ ಮಾತನ್ನಾಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಮಾತನ್ನಾಡಿರುವ ಬಸವರಾಜ್ ಬೊಮ್ಮಾಯಿ.. ರಾಜಕಾರಣ ನಿಂತ ನೀರಲ್ಲ, ಚುನಾವಣೆಗೆ ಇನ್ನು ಒಂದೂವರೆ ವರ್ಷ ಇದೆ. ಜನರ ಬಳಿಗೆ ಹೋದಾಗ ಈ ಸರ್ಕಾರ ಕಿತ್ತೊಗೆಯಬೇಕು ಅನ್ನೋ ಭಾವನೆಯಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ನೀವೆಲ್ಲ (ಯತ್ನಾಳ್ ಮತ್ತು ಈಶ್ವರಪ್ಪ) ಒಂದಾಗಬೇಕು ಅನ್ನೋದು ಜನರ ಅಭಿಪ್ರಾಯ. ಜನ ಸಾಮಾನ್ಯರು ಮತ್ತು ಕಾರ್ಯಕರ್ತರಲ್ಲೂ ಒಗ್ಗಟ್ಟಿನ ಭಾವನೆ ಒಂದೇ. ಜನರ ಒತ್ತಡಕ್ಕೆ ಹೊಂದಿಕೊಳ್ಳಬೇಕು ಅನ್ನೋ ಭಾವನೆ ನಮ್ಮಲ್ಲೂ ಮೂಡಿದೆ. ಬಿಜೆಪಿಯಲ್ಲಿನ ಈ ಬೆಳವಣಿಗೆ ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆ ಆಗಲಿದೆ.
ಎಲ್ಲಾ ಸಾಧ್ಯಸಾಧ್ಯತೆಗಳನ್ನ ಗಮನದಲ್ಲಿ ಇಟ್ಟುಕೊಂಡು ನಾವು ಈ ವಿಚಾರವನ್ನು ಹೈಕಮಾಂಡ್ ಅಂಗಳಕ್ಕೆ ಕೊಂಡೊಯ್ಯುವುದು ನಮ್ಮ ಕರ್ತವ್ಯ. ಶೀಘ್ರದಲ್ಲೇ ಆ ಕೆಲಸ ಆಗಲಿದೆ. ಹೈಕಮಾಂಡ್ ಮಟ್ಟದಲ್ಲಿ ಸಹಮತ ಮೂಡಿಸಲು ನಾವು ಕೆಲಸ ಮಾಡುತ್ತೇವೆ. ಇಂದು ಅಮಿತ್ ಶಾವರನ್ನ ವಿರೋಧ ಪಕ್ಷದ ನಾಯಕ ಅಶೋಕ್ ಭೇಟಿ ಮಾಡಲಿದ್ದಾರೆ. ಅಶೋಕ್–ಅಮಿತ್ ಶಾ ಭೇಟಿ ವೇಳೆ ಈ ವಿಚಾರವೂ ಚರ್ಚೆಯಾಗುವ ಸಾಧ್ಯತೆಯಿದೆ. ಇದು ಕೇವಲ ಆರಂಭ, ಮುಂದೆ ಹಲವು ಸುತ್ತಿನ ಚರ್ಚೆಗಳು ನಡೆಯಲಿವೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ..
ಇತ್ತೀಚೆಗೆ ವಿಜಯೇಂದ್ರ ಮತ್ತು ಯತ್ನಾಳ್ ಭೇಟಿ ಆಗಿರೋ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದು ಮಾಡಿತ್ತು. ಉಭಯ ನಾಯಕರು ಧಾರವಾಡದಲ್ಲಿ ಭೇಟಿಯಾಗಿದ್ದು, ಸುಮಾರು 30 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಭೇಟಿ ಯತ್ನಾಳ್ ಅವರನ್ನು ಮತ್ತೆ ಪಕ್ಷಕ್ಕೆ ವಾಪಸ್ ಕರೆದುಕೊಂಡು ಬಂದು ಮುಂದಿನ ಚುನಾವಣೆ ಎದುರಿಸಲು ಪಕ್ಷವನ್ನು ಒಗ್ಗೂಡಿಸುವ ಯತ್ನ ಎಂದು ಹೇಳಲಾಗುತ್ತಿದೆ..
ಕೆಲವು ಮಾಹಿತಿಗಳ ಪ್ರಕಾರ ಶಿವಮೊಗ್ಗದ ಈಶ್ವರಪ್ಪ ಮತ್ತು ಬಿಎಸ್ ಯಡಿಯೂರಪ್ಪ ಮತ್ತೆ ಭೇಟಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ದಸರಾ ಹಿನ್ನೆಲೆಯಲ್ಲಿ ಬನ್ನಿ ಕೊಡುವ ನೆಪದಲ್ಲಿ ಬಿಎಸ್ ಯಡಿಯೂರಪ್ಪ ಅವರು ಕೆಎಸ್ಈ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಮತ್ತೆ ಈಶ್ವರಪ್ಪ ಜೊತೆ ಸಮನ್ವಯ ಸಾಧಿಸಲು ಯಡಿಯೂರಪ್ಪ ಮುಂದಾಗಿದ್ದಾರೆ ಎಂಬ ವಿವಾರ ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದಿದೆ.
ಹಾಗೆಯೇ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಬಗ್ಗೆಯೂ ಪಕ್ಷದೊಳಗೆ ಚರ್ಚೆ ಶುರು ಆಗುತ್ತಿದೆಯಂತೆ.. ಹೆಗಡೆ ಅವರು ಪ್ರಸ್ತುತ ಸಕ್ರಿಯ ರಾಜಕಾರಣದಿಂದ ದೂರ ಇದ್ದಾರೆ. ಅವರನ್ನು ಮತ್ತೆ ರಾಜಕಾರಣದಲ್ಲಿ ಸಕ್ರಿಯಗೊಳಿಸಿದರೆ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿಬರುತ್ತಿದೆ ಎನ್ನಲಾಗಿದೆ. ಅಂತೆಯೇ ಮುಂದಿನ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿಯ ಪ್ರಮುಖ ನಾಯಕರು ತಂತ್ರ ರೂಪಿಸುತ್ತಿದ್ದಾರೆ. ಇವತ್ತು ಅಶೋಕ್ ಅವರು ಅಮಿತ್ ಶಾ ಭೇಟಿ ಮಾಡಿದ ಬಳಿಕ ಮತ್ತಷ್ಟು ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.