
ದಾವಣಗೆರೆ(ಆ.04): ‘‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ಬಿರುಕಿದೆ ಎಂಬುದು ಇತರೆ ಪಕ್ಷಗಳ ಭ್ರಮೆ ಹಾಗೂ ಕೆಲ ಮಾಧ್ಯಮಗಳ ಸೃಷ್ಟಿ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರು ಒಟ್ಟಾಗಿದ್ದೇವೆ. ರಾಜ್ಯದ ಭ್ರಷ್ಟ, ಕೋಮುವಾದಿ ಹಾಗೂ ಜನ ಪೀಡಕವಾಗಿರುವ ಬಿಜೆಪಿ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯಲು ರಾಹುಲ್ ಗಾಂಧಿ ನಾಯಕತ್ವದಲ್ಲಿ ಶ್ರಮಿಸುತ್ತೇವೆ’’ ದಾವಣಗೆರೆಯ ಶಾಮನೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ಸಾಗರದಂತೆ ಸೇರಿದ್ದ ಜನ ಸಮೂಹದ ಮುಂದೆ ಹೀಗೆ ಹೇಳುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ‘ಸಿದ್ದರಾಮಯ್ಯ ಅಮೃತ ಮಹೋತ್ಸವ’ ಕಾರ್ಯಕ್ರಮದ ನಂತರ ಕಾಂಗ್ರೆಸ್ ಇಬ್ಭಾಗವಾಗಿಸುತ್ತದೆ ಎಂಬ ಇತರೆ ರಾಜಕೀಯ ಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿದರು. ಜತೆಗೆ, ಮುಂದಿನ ಚುನಾವಣೆಗೆ ಸಾಮೂಹಿಕ ನಾಯಕತ್ವ ಬದಲಿಗೆ ರಾಹುಲ್ ಗಾಂಧಿ ನಾಯಕತ್ವ ಎಂಬ ಹೊಸ ಟ್ವಿಸ್ಟ್ ಕೂಡ ನೀಡಿದರು.
ತಮಗೆ ಮಾನಸಿಕ ಹಾಗೂ ದೈಹಿಕವಾಗಿ ಕ್ಷಮತೆ ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿ ಇರುವುದಾಗಿ ಹೇಳುವ ಮೂಲಕ ಇನ್ನೂ ಸುದೀರ್ಘ ಕಾಲ ರಾಜಕಾರಣದಲ್ಲಿರುವ ಸುಳಿವು ನೀಡಿದರು.
ಪಕ್ಷ ನಿಷ್ಠೆ:
ಅಲ್ಲದೆ, ಅಮೃತೋತ್ಸವ ಮೂಲಕ ಸಿದ್ದರಾಮಯ್ಯ ಅವರ ವ್ಯಕ್ತಿ ಪೂಜೆ ನಡೆಯುತ್ತಿದೆ. ಪಕ್ಷಕ್ಕಿಂತ ಸಿದ್ದರಾಮಯ್ಯ ದೊಡ್ಡವರು ಎಂದು ಬಿಂಬಿಸಲಾಗುತ್ತಿದೆ ಎಂಬ ಆರೋಪಗಳು ತೊಳೆದುಹೋಗುವಂತೆ ಮಾಡಲು ಅತ್ಯಂತ ಸ್ಪಷ್ಟವಾಗಿ ಹಾಗೂ ದೃಢವಾಗಿ ಪಕ್ಷ ನಿಷ್ಠೆಯನ್ನು ಪ್ರತಿಪಾದಿಸಿದರು. ಪಕ್ಷ ಸೇರಿದ ಕ್ಷಣದಿಂದ ಇದುವರೆಗೂ ತಮ್ಮನ್ನು ಪೊರೆದ ಸೋನಿಯಾ, ರಾಹುಲ್ ಗಾಂಧಿ ಅವರ ಗುಣಗಾನ ಮಾಡಿದರು.
ಸಿದ್ದು ಅಮೃತೋತ್ಸವದಿಂದ ಬಿಜೆಪಿಗರಿಗೆ ನಡುಕ: ಪರಂ
ಬೇರೆ ಪಕ್ಷದಿಂದ ಬಂದ ನಾನು ಕಾಂಗ್ರೆಸ್ ಸೇರಿದ ದಿನದಿಂದ ಇವತ್ತಿನವರೆಗೂ ನನ್ನ ಮೇಲೆ ಅಪಾರ ವಿಶ್ವಾಸ ಹಾಗೂ ಪ್ರೀತಿಯನ್ನು ರಾಹುಲ್ ಗಾಂಧಿ ಇಟ್ಟುಕೊಂಡಿದ್ದಾರೆ. ಅನ್ಯಪಕ್ಷದಿಂದ ಬಂದ ನಾನು ಮುಖ್ಯಮಂತ್ರಿಯಾಗಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕಾರಣ. ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನ ಪರವಾಗಿ ಬಂಡೆಯಂತೆ ನಿಂತು ರಾಹುಲ್ ಹಾಗೂ ಸೋನಿಯಾ ಗಾಂಧಿ ಸಹಕಾರ ನೀಡಿದರು ಎಂದರು.
ಇ.ಡಿ. ವಿರುದ್ಧ ಕಿಡಿ:
ನ್ಯಾಷನಲ್ ಹೆರಾಲ್ಡ್ ಪ್ರಕರಣದ ನೆಪದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಇಡಿ ಮೂಲಕ ವಿಚಾರಣೆಗೊಳಪಡಿಸಿದ ಕೇಂದ್ರ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ಈ ಪ್ರಕರಣದಲ್ಲಿ ಮನಿ ಲಾಂಡ್ರಿಂಗ್ ನಡೆದಿಲ್ಲ. ಆದರೂ ಕೂಡ ರಾಹುಲ್ ಗಾಂಧಿ ವರನ್ನು 50 ಗಂಟೆಕಾಲ ವಿಚಾರಣೆ ಮಾಡಲಾಗಿದೆ. ಆಯಾಚಿತವಾಗಿ ಒದಗಿಬಂದಿದ್ದ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ ಸೋನಿಯಾ ಗಾಂಧಿ ಅವರನ್ನು ಅವರ ವಯಸ್ಸುಲೆಕ್ಕಿಸದೇ ಗಂಟೆ ಗಟ್ಟಲೇ ವಿಚಾರಣೆ ನಡೆಸಲಾಗಿದೆ.
ಇಂತಹ ದ್ವೇಷದ ರಾಜಕಾರಣ ಇನ್ನೆಷ್ಟುದಿನ ನಡೆಯಲು ಸಾಧ್ಯ. ಜನಶಕ್ತಿಯನ್ನು ಅಂಕುಶದಿಂದ ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಯೂ ಕೆನಾಟ್ ಪ್ರಾಸಿಕ್ಯೂಟ್ ಇನೋಸೆಂಟ್ ಮ್ಯಾನ್ ಅಂಡ್ ವುಮನ್ (ಮುಗ್ದರನ್ನು ಪ್ರಾಸಿಕ್ಯೂಟ್ ಮಾಡಲು ಸಾಧ್ಯವಿಲ್ಲ) ಸಂವಿಧಾನ ಇದಕ್ಕೆ ಅವಕಾಶ ಕೊಟ್ಟಿಲ್ಲ. ಸೇಡಿನ ರಾಜಕಾರಣ ಮಾಡುವ ಕೋಮುವಾದಿ ಬಿಜೆಪಿಯನ್ನು ಕಿತ್ತೊಗೆಯುವ ಕಾಲ ಬಂದಿದೆ ಎಂದರು.
ಸಿದ್ದರಾಮೋತ್ಸವ ಎಫೆಕ್ಟ್: ಪುಣೆ- ಬೆಂಗಳೂರು ಹೆದ್ದಾರಿಯಲ್ಲಿ 20 ಕಿ.ಮೀ. ಟ್ರಾಫಿಕ್ ಜಾಮ್
ರಾಹುಲ್ ಗುಣಗಾನ:
ಯಾವ ನಾಯಕನಿಗೆ ಬಡವರ ಬಗ್ಗೆ, ದಲಿತರ ಬಗ್ಗೆ, ಹಿಂದುಳಿದವರ ಬಗ್ಗೆ ಕಾಳಜಿ ಇದೆಯೋ ಅಂತಹವರು ದೇಶದ ಚುಕ್ಕಾಣಿ ಹಿಡಿಯಬೇಕು. ಇಂತಹ ಆದರ್ಶ ವ್ಯಕ್ತಿ ರಾಹುಲ್ ಗಾಂಧಿ. ಪ್ರಧಾನಿಯಾಗಲು ಅರ್ಹ ವ್ಯಕ್ತಿ. ಅವರೇ ಈ ದೇಶದ ಆಶಾಕಿರಣ ಎಂದು ಗುಣಗಾನ ಮಾಡಿದರು. ಅಲ್ಲದೆ, ತಮ್ಮ ಭಾಷಣದ ಆರಂಭದಲ್ಲಿ ಹುಟ್ಟಹಬ್ಬದ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ನಾನು ಹೋಗುವುದಿಲ್ಲ. ಆದರೆ, ಸಿದ್ದರಾಮಯ್ಯ ಅವರ ಮೇಲೆ ವಿಶೇಷ ಪ್ರೀತಿ ಇರುವುದರಿಂದ ಈ ಕಾರ್ಯಕ್ರಮಕ್ಕೆ ಬಂದ್ದಿದೇನೆ ಎಂಬ ರಾಹುಲ್ ಗಾಂಧಿ ಹೇಳಿಕೆ ಸ್ಮರಿಸಿದ ಅವರು ನಾನು ರಾಹುಲ್ ಗಾಂಧಿಗೆ ಅವರಿಗೆ ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ ಎಂದರು.
ಸರ್ಕಾರಕ್ಕೆ ತರಾಟೆ:
ಇದೇ ವೇಳೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ಪ್ರಧಾನಿ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವಹಿಸದವರು ಈಗ ಅಧಿಕಾರ ಹಿಡಿದು ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕು. ಲೂಟಿ ಹೊಡೆಯಬೇಕು ಮತ್ತು ಸಂವಿಧಾನ ಬದಲಾಯಿಸಿ ಈ ದೇಶದಲ್ಲಿ ಸರ್ವಾಧಿಕಾರ ತರಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಆದರೆ, ಅದು ಎಂದಿಗೂ ಸಾಧ್ಯವಿಲ್ಲ. ಈ ದೇಶದ ಜನತೆ ಸಂವಿಧಾನ ಬದಲಾಗಲು ಬಿಡುವುದಿಲ್ಲ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.