ಚುನಾವಣೆಯ ಮತ ಎಣಿಕೆಗೂ ಮುನ್ನ ಅಮಿತ್ ಶಾ ಅವರು 150ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದಾರೆ ಆರೋಪದ ಕುರಿತು ಸಾಕ್ಷ್ಯ ನೀಡಿ ಎಂದು ಕಾಂಗ್ರೆಸ್ ನ ಜೈರಾಂ ರಮೇಶ್‌ಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.
ನವದೆಹಲಿ (ಜೂ.3): ‘ಜೂ.4ರಂದು ನಡೆಯುವ ಲೋಕಸಭಾ ಚುನಾವಣೆಯ ಮತ ಎಣಿಕೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 150ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದಾರೆ’ ಎಂಬ ನಿಮ್ಮ ಆರೋಪದ ಕುರಿತು ಸಾಕ್ಷ್ಯ ನೀಡಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.
‘ನೀತಿ ಸಂಹಿತೆ ಜಾರಿ ವೇಳೆ ಜಿಲ್ಲಾಧಿಕಾರಿಗಳು ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಹೀಗಿರುವಾಗ ನೀವು 150ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳಿಗೆ ಅಮಿತ್ ಶಾ ಕರೆ ಮಾಡಿದ್ದಾರೆ. ಇದು ಅಧಿಕಾರಿಗಳನ್ನು ಬೆದರಿಸುವ ತಂತ್ರ. ಮತ ಎಣಿಕೆಗೂ ಮುನ್ನ ಇಂಥ ತಂತ್ರ ಇಡೀ ಪ್ರಕ್ರಿಯೆ ಬಗ್ಗೆ ಅನುಮಾನ ಮೂಡುತ್ತದೆ ಎಂದಿದ್ದೀರಿ. ಆದರೆ ಯಾವುದೇ ಅಧಿಕಾರಿಗಳು ಇಂಥ ಸಭೆಯ ಕುರಿತು ಮಾಹಿತಿ ನೀಡಿಲ್ಲ. ಹೀಗಾಗಿ ನೀವು ಮಾಡಿರುವ ಆರೋಪದ ಕುರಿತು ಸಾಕ್ಷ್ಯ ಒದಗಿಸಿ’ ಎಂದು ಆಯೋಗ ಜೈರಾಮ್ ರಮೇಶ್‌ಗೆ ಪತ್ರ ಬರೆದು ಸೂಚಿಸಿದೆ. ಶಾ 150 ಡೀಸಿಗಳಿಗೆ ಕರೆ ಮಾಡಿದ್ದರು ಎಂದು ಶನಿವಾರ ಜೈರಾಂ ಟ್ವೀಟರ್‌ನಲ್ಲಿ ಆರೋಪಿಸಿದ್ದರು.
ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ಸಮಬಲ: ಸಮೀಕ್ಷೆ!
ಮತ ಎಣಿಕೆ: ಚು. ಆಯೋಗಕ್ಕೆ ಬಿಜೆಪಿ, ಇಂಡಿಯಾ ದೂರು, ಪ್ರತಿದೂರು
ಲೋಕಸಭೆ ಚುನಾವಣೆ ಮುಗಿದ ಬಳಿಕ ಪ್ರತಿಪಕ್ಷ ಇಂಡಿಯಾ ಬ್ಲಾಕ್ ಮತ್ತು ಆಡಳಿತಾರೂಢ ಬಿಜೆಪಿ ಎರಡೂ ಕೂಟಗಳು ಭಾನುವಾರ ಚುನಾವಣಾ ಆಯೋಗದ ಬಾಗಿಲು ತಟ್ಟಿವೆ.
ಮಂಗಳವಾರದ ಮತ ಎಣಿಕೆ ಸಮಯದಲ್ಲಿ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರತಿಪಕ್ಷಗಳು ಆಯೋಗವನ್ನು ಕೇಳಿವೆ. ಆದರೆ ಈ ಅರ್ಜಿ ವಿರೋಧಿಸಿರುವ ಬಿಜೆಪಿ, ಚುನಾವಣಾ ಪ್ರಕ್ರಿಯೆಯ ‘ಸಮಗ್ರತೆಯನ್ನು ಹಾಳುಮಾಡಲು ಪ್ರತಿಪಕ್ಷಗಳು ಸಂಯೋಜಿತ ಪ್ರಯತ್ನಗಳನ್ನು ನಡೆಸಿವೆ. ಪ್ರಜಾಸತ್ತಾತ್ಮಕ ಸಂಸ್ಥೆಗಳ ಪ್ರಕ್ರಿಯೆಗೆ ಅಪಾಯ ಉಂಟು ಮಾಡುತ್ತಿವೆ. ಈ ಬಗ್ಗೆ ಆಯೋಗ ಎಚ್ಚರದಿಂದ ಇರಬೇಕು’ ಎಂದು ಬಿಜೆಪಿ ಪ್ರತಿದೂರು ನೀಡಿದೆ.
ಪಂಜಾಬಿ ಹಾಡಿನ ಮೂಲಕ ಇಂಡಿಯಾ ಮೈತ್ರಿ ಎಷ್ಟು ಸ್ಥಾನ ಗೆಲ್ಲಲಿದೆ ಎಂದ ರಾಹುಲ್ ಗಾಂಧಿ!
ಮತ ಎಣಿಕೆ ದಿನ ಎಚ್ಚರವಾಗಿರಿ: ಕೈ ಅಭ್ಯರ್ಥಿಗಳಿಗೆ ಖರ್ಗೆ, ರಾಹುಲ್ ಸಲಹೆ
ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುವ ಜೂ.4ರಂದು ಎಚ್ಚರದಿಂದಿರಿ. ಮತ ಎಣಿಕೆ ವೇಳೆ ಯಾವುದೇ ಗೋಲ್‌ಮಾಲ್ ಆಗದಂತೆ ನೋಡಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪಕ್ಷದ ಲೋಕಸಭಾ ಅಭ್ಯರ್ಥಿಗಳು, ರಾಜ್ಯ ಘಟಕದ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದ ಮಾರನೇ ದಿನವಾದ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಅಭ್ಯರ್ಥಿಗಳು, ನಾಯಕರ ಜೊತೆ ಆನ್‌ಲೈನ್ ಸಭೆ ನಡೆಸಿದ ರಾಹುಲ್, ಮತದಾನದ ದಿನಕ್ಕೆ ಪಕ್ಷ ನಡೆಸಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.