Karnataka Politics: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ: ಕಾಂಗ್ರೆಸ್‌ ಪ್ರತಿಭಟನೆ

By Kannadaprabha News  |  First Published Aug 20, 2022, 9:45 AM IST

ಕೊಡಗಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆಎಸೆದಿರುವುದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ


ನವಲಗುಂದ (ಆ.19) : ಕೊಡಗಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆಎಸೆದಿರುವುದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಅಣ್ಣಿಗೇರಿ ಹಾಗೂ ನವಲಗುಂದ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣದ ಲಿಂಗರಾಜ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿದರು. ಬಳಿಕ ಮೆರವಣಿಗೆ ಮೂಲಕ ತಹಸೀಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಮೊಟ್ಟೆಎಸೆದಿರುವವರ ವಿರುದ್ಧ ಕ್ರಮಕೈಗೊಳ್ಳುವ ಜತೆಗೆ ಸಿದ್ದರಾಮಯ್ಯ ಅವರಿಗೆ ಝಡ್‌ ಪ್ಲಸ್‌ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಬಿಜೆಪಿಗೆ ಸಾಂವಿಧಾನಿಕ ಹುದ್ದೆಗಳ ಬಗ್ಗೆ ಗೌರವವಿಲ್ಲ ಎಂದಿರುವ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ದೂರಿದರು.

ಮಹಾತ್ಮ ಗಾಂಧಿಯವರನ್ನು ಕೊಂದವರು ನನ್ನನ್ನ ಬಿಡ್ತಾರಾ? ಸಿದ್ದರಾಮಯ್ಯ ಆತಂಕ!

Tap to resize

Latest Videos

ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನೋದ ಅಸೂಟಿ ಮಾತನಾಡಿ, ಬಿಜೆಪಿ ಈ ರೀತಿಯ ವರ್ತನೆ ಮುಂದುವರಿಸಿದರೆ ನಾವು ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು. ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ವಿರೋಧ ಪಕ್ಷದವರಿಗೆ ಭದ್ರತೆ ಒದಗಿಸಬೇಕು ಎಂದರು.

ಪ್ರತಿಭಟನೆ(Protest)ಯಲ್ಲಿ ಮಾಜಿ ಸಚಿವ ಕೆ.ಎನ್‌. ಗಡ್ಡಿ, ಬ್ಲಾಕ್‌ ಅಧ್ಯಕ್ಷರಾದ ವರ್ಧಮಾನಗೌಡ ಹಿರೇಗೌಡರ, ಮಂಜು ಮಾಯಣ್ಣವರ, ನವಲಗುಂದ ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಸ್ಥಾಯಿ ಸಮಿತಿ ಚೇರ್‌ಮನ್‌ ಸುರೇಶ ಮೇಟಿ, ಸದಸ್ಯರಾದ ಮಂಜು ಜಾಧವ, ಜೀವನ ಪವಾರ, ಮೋದಿನ ಶಿರೂರ, ಮಾಂತೇಶ ಭೋವಿ, ಹನಮಂತ ವಾಲಿಕಾರ, ಕಲ್ಲಪ್ಪ ಹುಬ್ಬಳ್ಳಿ, ರೆಹಮಾನಸಾಬ್‌ ಧಾರವಾಡ, ರಾಜು ದೊಡಮನಿ, ಅನಿಲಕುಮಾರ ಮಜ್ಜಗಿ, ಶರೀಫ ಗುದಗಿ, ರಮೇಶ ಕರೆಟ್ಟನವರ, ಮಕಬುಲ್‌ ಮುಲ್ಲಾ, ನಾರಾಯಣ ರಂಗರಡ್ಡಿ, ಕಿರಣ ಉಳ್ಳಿಗೇರಿ ಸೇರಿದಂತೆ ಇತರರು ಇದ್ದರು.

ಹೆಸರು ಖರೀದಿ ಕೇಂದ್ರ ಆರಂಭಿಸಿ: ಮುಂಗಾರಿನಲ್ಲಿ ಬೆಳೆದ ಹೆಸರನ್ನು ಬೆಂಬಲ ಬೆಲೆಯಡಿ ಖರೀದಿಸಲು ಕೇಂದ್ರ ಆರಂಭಿಸಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ರೈತರು ಹೆಸರನ್ನು ಸ್ವಚ್ಛಗೊಳಿಸಿ, ದಾಸ್ತಾನು ಮಾಡಿಕೊಂಡು ರಸ್ತೆಯಲ್ಲೇ ಕಾಯುತ್ತಿದ್ದಾರೆ. ಆದರೆ ಸರಿಯಾದ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಆದಕಾರಣ ಕೂಡಲೇ ಕೇಂದ್ರ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್‌ ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ರವಾನಿಸುವುದಾಗಿ ಭರವಸೆ ನೀಡಿದರು.

ಸಿದ್ದು ಕಾರಿಗೆ ಮೊಟ್ಟೆ: 26ಕ್ಕೆ ಕೊಡಗು ಎಸ್‌ಪಿ ಕಚೇರಿಗೆ ಮುತ್ತಿಗೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಹನಕ್ಕೆ ಮೊಟ್ಟೆಎಸೆದಿರುವುದು ಅಮಾನವೀಯ. ಇದನ್ನು ಖಂಡಿಸಿ ಕೊಡಗು ಜಿಲ್ಲೆ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಆ. 26ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಶ್ರೀ ಸಿದ್ದರಾಮಯ್ಯನವರ ಅಭಿಮಾನಿ ಬಳಗ ತಿಳಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಳಗದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡರ, ದಾವಣಗೆರೆಯಲ್ಲಿ ಇತ್ತೀಚಿಗೆ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಿಂದಾಗಿ ಬಿಜೆಪಿಗೆ ನಡುಕ ಶುರುವಾಗಿದೆ. ಈ ಕಾರಣಕ್ಕಾಗಿಯೇ ಮೊಟ್ಟೆಎಸೆದು ಅವಮಾನಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

'ಸಿದ್ದರಾಮಯ್ಯರನ್ನು ಅಪಮಾನಿಸಲು ಮುಂದಾದರೇ ಉಗ್ರ ಹೋರಾಟ'

ಪ್ರಜಾಪ್ರಭುತ್ವದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ವ್ಯಕ್ತಿ ಗೌರವಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುವ ಮೂಲಕ ಮೊಟ್ಟೆಎಸೆದು ಅವಮಾನಿಸಿರುವುದು ನಾಡಿನ ಜನತೆಯನ್ನೇ ಅವಮಾನಿಸಿದಂತಾಗಿದೆ. ಕ್ಷುಲ್ಲಕ ವಿಚಾರಕ್ಕಾಗಿ ಹಿರಿಯ ಜನನಾಯಕರನ್ನು ಅವಮಾನಿಸಿರುವುದು ಖಂಡನೀಯ. ಇದು ರಾಜ್ಯ ಸರ್ಕಾರದ ಆಡಳಿತ ಮತ್ತು ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದು ಇದರಿಂದ ಸಾಬೀತಾಗಿದೆ. ಈ ಕೂಡಲೇ ಗೃಹ ಸಚಿವ ಅರಗ ಜ್ಞಾನೇಂದ್ರ ಬಹಿರಂಗವಾಗಿ ಜನತೆಯ ಕ್ಷಮೆಕೇಳಬೇಕು. ಅಲ್ಲದೇ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಆ. 26ರಂದು ಕೊಡಗು ಜಿಲ್ಲೆಯ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ. ಅಂದಿನ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

click me!