ದೇಶದಲ್ಲಿ ಶೂದ್ರರನ್ನು ಯಥಾಸ್ಥಿತಿಯಲ್ಲಿಡುವ ವ್ಯವಸ್ಥಿತ ಹುನ್ನಾರವನ್ನು ಕೆಲವು ಕಾಣದ ಶಕ್ತಿಗಳು ಮಾಡುತ್ತಿವೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸಿಂಧನೂರು (ಜ.31): ದೇಶದಲ್ಲಿ ಶೂದ್ರರನ್ನು ಯಥಾಸ್ಥಿತಿಯಲ್ಲಿಡುವ ವ್ಯವಸ್ಥಿತ ಹುನ್ನಾರವನ್ನು ಕೆಲವು ಕಾಣದ ಶಕ್ತಿಗಳು ಮಾಡುತ್ತಿವೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ ಸಮಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿದ ನಂತರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದಿಂದ ಶಾಲಾ-ಕಾಲೇಜುಗಳಿಗೆ ಗಂಟೆ ಬಾರಿಸಿರಿ, ಪೂಜೆ ಮಾಡಿರಿ ಎಂದು ಹೇಳಿಲ್ಲ. ಬದಲಾಗಿ ಕಡ್ಡಾಯವಾಗಿ ಸಂವಿಧಾನ ಪೀಠಿಕೆ ಓದುವಂತೆ ಆದೇಶ ನೀಡಲಾಗಿದೆ. ಸಂವಿಧಾನಕ್ಕೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಸಂಘಟನಾತ್ಮಕವಾಗಿ ಹೋರಾಟ ಮಾಡದಿದ್ದರೆ ಉಳಿಗಾಲವಿಲ್ಲ. ಅಲ್ಲದೆ ಒಕ್ಕೂಟದ ವ್ಯವಸ್ಥೆಗೂ ಚ್ಯುತಿ ಬರುತ್ತದೆ ಎಂದರು. ಮಂಡಲ ಆಯೋಗ ಜಾರಿಗೆ ತಂದ ಸಮಯದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನದ ವಿರೋಧಿಗಳು ಅದನ್ನು ವಿರೋಧಿಸಿದ್ದಾರೆ. ಈಗಲೂ ಸದಾಶಿವ ಆಯೋಗದ ವರದಿಗೆ ಅನುಮತಿ ನೀಡದೆ ಕಣ್ಣುಮುಚ್ಚಾಲೆ ಆಡುತ್ತಿವೆ ಎಂದು ಟೀಕಿಸಿದರು.
ಅಬಕಾರಿ ಸಚಿವ ಆರ್.ವಿ.ತಿಮ್ಮಾಪುರ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳ ಮಂತ್ರದೊಂದಿಗೆ ರಾಜಕೀಯ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಗಳು ಒಗ್ಗಟ್ಟಾಗಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಮೈಸೂರಿನ ಗುರುಲಿಂಗ ಪೆದ್ದಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು. ಹಿರಿಯೂರು ಆದಿಜಾಂಭವ ಮಠದ ಷಡಕ್ಷರಿ ಮುನಿಸ್ವಾಮಿ ಕವನ ಓದಿದರು. ಆರ್.ಬೋನವೆಂಚರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆ ವಹಿಸಿದ್ದರು. ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ರಾಮಣ್ಣ ಗೋನವಾರ ಸ್ವಾಗತಿಸಿದರು. ಉಪನ್ಯಾಸಕ ಈಶ್ವರ ಹಲಗಿ ನಿರೂಪಿಸಿದರು.
ಮಂಡ್ಯದಲ್ಲಿ ಕೋಮುಬೀಜ ಬಿತ್ತಿದ ಎಚ್‌ಡಿಕೆ: ಸಚಿವ ಎನ್.ಚಲುವರಾಯಸ್ವಾಮಿ
ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜೆ.ಡಿ.ಎಸ್.ಮುಖಂಡ ಬಸವರಾಜ ನಾಡಗೌಡ, ಮಾದಿಗ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಾಲಸ್ವಾಮಿ ಕೊಡ್ಲಿ, ಹೋರಾಟಗಾರ ಡಿ.ಎಚ್.ಪೂಜಾರ, ನಿವೃತ್ತ ಅರಣ್ಯಾಧಿಕಾರಿ ಯಮನಪ್ಪ ಗಿರಿಜಾಲಿ, ಆರ್.ತಿಮ್ಮಯ್ಯ ನಾಯಕ, ಬಿ.ಎಸ್.ಎನ್.ಎಲ್.ನಿವೃತ್ತ ಅಧಿಕಾರಿ ಯಮನಪ್ಪ, ಚೌರಪ್ಪ ಜವಳಗೇರಾ, ಸುಭಾಷ್ ಫ್ರಾಂಕ್ಲಿನ್, ಬಿ.ತಿಕ್ಕಯ್ಯ, ನಗರಸಭೆ ಸದಸ್ಯರಾದ ಶರಣಪ್ಪ ಉಪ್ಪಲದೊಡ್ಡಿ, ಹುಸೇನಮ್ಮ ನಿರುಪಾದಿ, ಉಮಾ ಸುರೇಶ, ಮುರ್ತುಜಾ ಹುಸೇನ್, ಪ್ರಿಯಾಂಕಾ, ಛಲವಾದಿ ಸಮಾಜದ ಮುಖಂಡರಾದ ಸಣ್ಣಬಸವರಾಜ, ನರಸಪ್ಪ ಕಟ್ಟಿಮನಿ, ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಲಿಂಗಪ್ಪ, ಛಲವಾದಿ ನೌಕರರ ಕ್ಷೇಮಾಭಿವೃದ್ಧಿ ವೇದಿಕೆಯ ಎಚ್.ಎಫ್.ಮಸ್ಕಿ ಇದ್ದರು.