
ಮೈಸೂರು (ಫೆ.5) : ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಅಕ್ಷರ, ಆರೋಗ್ಯ, ಅನ್ನವನ್ನು ಕಡೆಗಣಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಕಿಡಿಕಾರಿದರು.
ಆಹಾರ, ಆರೋಗ್ಯ, ಶಿಕ್ಷಣ ಕ್ಷೇತ್ರ ಸುಭಿಕ್ಷವಾಗಿದ್ದಾಗ ದೇಶ ಅಭಿವೃದ್ಧಿಯಾಗುತ್ತದೆ. ಆದರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಕ್ಷೇತ್ರಗಳನ್ನು ಕಡೆಗಣಿಸಿ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಬಜೆಟ್ ಮಂಡಿಸಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ವಿಶ್ವನಾಥ್ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಮೋಹನ್
ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಈ ಕ್ಷೇತ್ರಗಳಿಗೆ ಅನುದಾನ ಕಡಿಮೆ ಮಾಡುತ್ತಾ ಬಂದಿದೆ. ಈ ಬಾರಿಯ ಬಜೆಟ್‌ನಲ್ಲಿ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಗೆ ಶೇ.33.33 ಅನುದಾನ ಕಡಿತಗೊಳಿಸಿದೆ. ಕೈಗಾರಿಕೆ ಆಂತರಿಕ ಪ್ರೋತ್ಸಾಹ ಶೇ.10, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಶೇ.18, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಶೇ.0.23, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಗೆ ಶೇ.12.49 ರಷ್ಟುಅನುದಾನ ಕಡಿಮೆ ಮಾಡಿದೆ. ಒಟ್ಟಾರೆಯಾಗಿ ಶಿಕ್ಷಣ ಕ್ಷೇತ್ರಕ್ಕೆ ಕೇವಲ 32 ಸಾವಿರ ಕೋಟಿ ಮೀಸಲಿಡಲಾಗಿದೆ. ಇದರಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಅವರು ಆರೋಪಿಸಿದರು.
ಮೋದಿ ಬಂದ ಮೇಲೆ ಅಲ್ಪಸಂಖ್ಯಾತ ಶಾಲೆಗಳಿಗೆ ಅನುದಾನ ಸಿಗುತ್ತಿಲ್ಲ. ಇದು ಅಲ್ಪಸಂಖ್ಯಾತರು ಮಾತ್ರವಲ್ಲದೆ ಭಾರತದ ಅಭಿವೃದ್ಧಿಗೂ ಹೊಡೆತ ನೀಡುತ್ತಿದೆ. ನಮಗೆ ಬೇಕಿರುವುದು ಮೂಲ ಸೌಲಭ್ಯ. ವಿಮಾನ ನಿಲ್ದಾಣಗಳಲ್ಲ. ಶಾಸಕರು, ದಲಿತ ನಾಯಕರು ಬಜೆಟ್ ಕುರಿತ ಸರಿಯಾದ ಮಾಹಿತಿಯನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಅವರ ಆಗ್ರಹಿಸಿದರು.
ಕಳೆದ 5 ವರ್ಷಗಳಲ್ಲಿ ದೇಶದ ಅಭಿವೃದ್ಧಿ ದರ ಕಡಿಮೆಯಾಗುತ್ತಲೆ ಇದೆ. ಜನಸಾಮಾನ್ಯರನ್ನು ಕಡೆಗಣಿಸಿರುವ ಸರ್ಕಾರ ಉಳ್ಳವರ ಪರವಾಗಿ ನಿಲ್ಲುತ್ತಿದೆ. ಇದೇನಾ ನಿಮ್ಮ ಅಭಿವೃದ್ಧಿ ಎಂದು ಅವರು ಕಿಡಿಕಾರಿದರು.
ಗೌಪ್ಯತೆ ಬಹಿರಂಗ ಮಾಡಬಾರದು:
ಸಿಡಿ ಗಲಾಟೆ ಒಳ್ಳಯದಲ್ಲ. ರಾಜಕಾರಣವೇ ಬೇರೆ, ಅಂತರಂಗವೇ ಬೇರೆ. ಎಲ್ಲರಿಗೂ ಅವರದೇ ಆದ ಗೌಪ್ಯತೆ ಇರುತ್ತದೆ. ನಿನ್ನ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದೀಯಾ ಎಂದು ಪ್ರಶ್ನಿಸಬೇಕ ಹೊರತು ಗೌಪ್ಯತೆ ಬಗ್ಗೆ ಮಾತನಾಡಬಾರದು. ಅದನ್ನು ಬಹಿರಂಗಪಡಿಸುತ್ತೇನೆ ಎಂದರೆ ಅವರಂತಹ ಮೂರ್ಖ ಇನ್ನೊಬ್ಬ ಇಲ್ಲ. ಇದು ಪ್ರಜಾಪ್ರಭುತ್ವವೂ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಯಾಕೆ ಸುಮ್ಮನಿದ್ದೀರಿ?
ಮಹಾರಾಜರು ನಿರ್ಮಿಸಿದ್ದ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚಲು ಸರ್ಕಾರ ಹೊರಟಿದೆ. ಕಾರ್ಖಾನೆಯಲ್ಲಿ ಈಗಲೂ 220 ಕಾಯಂ ನೌಕರರಿದ್ದು, ಸಾವಿರಾರು ಮಂದಿ ಅರೆಕಾಲಿಕ ನೌಕರರು ದುಡಿಯುತ್ತಿದ್ದಾರೆ. ಅಲ್ಲದೆ 305 ಕೋಟಿ ಲಾಭದಲ್ಲಿದೆ. ಹೀಗಿದ್ದರೂ ಮುಚ್ಚಲು ಹೊರಟಿರುವುದು ಯಾಕೆ? ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಆ ಭಾಗದ ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಏನು ಮಾಡುತ್ತಿದ್ದಾರೆ. ಯಾಕೆ ಇದನ್ನು ಪ್ರಶ್ನೆ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್ತು ಸದಸ್ಯ ಎಚ್. ವಿಶ್ವನಾಥ್ ಪ್ರಶ್ನಿಸಿದರು.
ನೀವೇನಾದರೂ ಭೂಮಿ ಲಪಟಾಯಿಸಲು ನೋಡುತ್ತಿದ್ದೀರಾ? ಸರ್ಕಾರಿ ಭೂಮಿ ಲಪಟಾಯಿಸುವುದರಲ್ಲಿ ನೀವು ನಿಸ್ಸೀಮರು. ಮೋದಿ, ಅಮಿತ್ ಶಾ ಸೇರಿಕೊಂಡು ಕರ್ನಾಟಕದ ಎಲ್ಲಾ ಆಸ್ತಿಗಳನ್ನು ಒಂದೊಂದಾಗಿ ಗುಜರಾತ್‌ನ ಮಾರ್ವಾಡಿಗಳಿಗೆ ಕೊಡುತ್ತಿದ್ದಾರೆ. ಭದ್ರಾವತಿ ವಿಧಾನಸಭೆ ಕ್ಷೇತ್ರದಲ್ಲಿ ಇದುವರೆಗೂ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ. ಹೀಗಾಗಿ, ಭದ್ರಾವತಿ ಕಂಡರೆ ಬಿಜೆಪಿಯವರಿಗೆ ಆಗುವುದಿಲ್ಲ ಎಂದು ಅವರು ಕುಟುಕಿದರು.
ಪ್ರಧಾನಿ ಮೋದಿ ಫೆ.27ಕ್ಕೆ ಶಿವಮೊಗ್ಗಕ್ಕೆ ಬರುತ್ತಿದ್ದು, ಅಲ್ಲಿನ ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಈ ಬಗ್ಗೆ ಪ್ರಶ್ನೆ ಮಾಡಬೇಕು. ಪ್ರಧಾನಿ ಮೋದಿ ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಆದರೆ, ಒಂದೊಂದಾಗಿ ದೇಶದ ಕಾರ್ಖಾನೆಗಳನ್ನು ಮುಚ್ಚುತ್ತಿದ್ದಾರೆ. ಸೇಲಂನಲ್ಲಿ ಇದೇ ರೀತಿಯ ಕಾರ್ಖಾನೆ ಮುಚ್ಚಲು ಮುಂದಾದಾಗ ಅಲ್ಲಿನ ಜನತೆ, ಸಂಸದರು ತಿರುಗಿ ಬಿದ್ದಿದ್ದರಿಂದ ಕಾರ್ಖಾನೆ ಪುನರಾರಂಭವಾಗಿದೆ. ಆ ತಾಕತ್ತು ನಮ್ಮ ಸಂಸದರಿಗೆ ಯಾಕಿಲ್ಲ? ನಮ್ಮ ಮಕ್ಕಳಿಗೆ ಉದ್ಯೋಗ ಬೇಡವೆ? ಸಿಎಂ ಬಸವರಾಜ ಬೊಮ್ಮಾಯಿ ಇದನ್ನು ಪ್ರಶ್ನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
Assembly election: ಬಿಜೆಪಿ ಅಯೋಗ್ಯ ಸರ್ಕಾರ ಮತದಾರರ ಆತ್ಮವನ್ನೆ ಕಸಿಯುತ್ತಿದೆ: ಎಚ್. ವಿಶ್ವನಾಥ್ ಕಿಡಿ
ನನ್ನ ರಕ್ತವೇ ಕಾಂಗ್ರೆಸ್. ಕಾರಣಾಂತಗಳಿಂದ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದೆ. ನಂತರ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದೆ. ಈಗ ಬಿಜೆಪಿ ತೊರೆಯುವ ಹಂತದಲ್ಲಿದ್ದೇನೆ. ನನ್ನ ಝಂಡಾ ಬದಲಾದರೂ ಅಜೆಂಡಾ ಬದಲಾಗಲ್ಲ. ಅಜೆಂಡಾಗೆ ಕುತ್ತು ಬಂದಾಗ ಪಕ್ಷ ತೊರೆಯುತ್ತೇನೆ. ನಾನು ಹಣ ಪಡೆದು ಬಿಜೆಪಿ ಸೇರಿದ್ದರೆ, ಯಡಿಯೂರಪ್ಪ ಅವರ ವಿರುದ್ಧ ಮಾತನಾಡುತ್ತಿರಲಿಲ್ಲ. ಅವರ ಎದುರೇ ಟೀಕಿಸಿದ್ದೇನೆ.
- ಎಚ್. ವಿಶ್ವನಾಥ್, ವಿಧಾನಪರಿಷತ್ ಸದಸ್ಯರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.