ಕೇಂದ್ರ ಸಚಿವಗೂ ಸಿಡಿ ಭೀತಿ: ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ತಂದ ಸದಾನಂದಗೌಡ

By Suvarna NewsFirst Published Jul 2, 2021, 10:39 PM IST
Highlights

* ಮಾಧ್ಯಮಗಳ ವಿರುದ್ದ ನಿರ್ಬಂಧಕಾಜ್ಞೆ ಪಡೆದ ಸದಾನಂದಗೌಡ 
* ಕೆಲ ಪತ್ರಿಕೆ, ಚಾನಲ್ ಗಳಲ್ಲಿ ತಮ್ಮ ವಿರುದ್ಧ ಸುಳ್ಳುಸುದ್ದಿ ಪ್ರಸಾರ  
* ನಕಲಿ ಸಿಡಿ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆ

ಬೆಂಗಳೂರು, (ಜುಲೈ.02): ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೂ ಸಿ.ಡಿ. ಭೀತಿ ಎದುರಾದಂತಿದೆ. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ನಿಂದ ತಮ್ಮ ವಿರುದ್ದ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದಾರೆ.

ಕೇಂದ್ರ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಕೆಲ ಪತ್ರಿಕೆ, ಚಾನಲ್​​ಗಳಲ್ಲಿ ತಮ್ಮ ವಿರುದ್ಧ ಸುಳ್ಳುಸುದ್ದಿ ಪ್ರಸಾರ ಮಾಡುವ ಸಾಧ್ಯತೆ ಇದೆ. ಕಿಡಿಗೇಡಿಗಳು ನಕಲಿ ಸಿಡಿ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆಯೂ ಇದೆ  ಎಂದು ಕಾರಣ ನೀಡಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ರಾಸಲೀಲೆ ಸಿ.ಡಿ.ರಿಲೀಸ್: ಕೋರ್ಟ್‌ಗೆ ಹೋಗಿದ್ದ 6 ಸಚಿವರಿಗೆ ಬಿಗ್ ರಿಲೀಫ್

ಈ ಕುರಿತು ಕೆಲ ಹಳೆಯ ದೃಷ್ಟಾಂತಗಳ ಉದಾಹರಣೆಯನ್ನೂ ನೀಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ, ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ಕುರಿತು ನಕಲಿ ವಿಡಿಯೋ ಮಾಡಲಾಗಿತ್ತು ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಇಂಥ ವಿಡಿಯೋ ಪ್ರಸಾರ ಮಾಡಿದರೆ ಘನತೆಗೆ ಧಕ್ಕೆ ಆಗಲಿದೆ. ಅದರಿಂದ ಚಾರಿತ್ರ್ಯ ವಧೆಯಾಗಲಿದೆ. ಆದ್ದರಿಂದ ತಮ್ಮ ಬಗ್ಗೆಯೂ ಇಂತಹ ವಿಡಿಯೋ ಪ್ರಸಾರ ಮಾಡುವ ಅಪಾಯವಿದ್ದು, ಹಾಗಾದಲ್ಲಿ ಘನತೆಗೆ ಧಕ್ಕೆಯಾಗಲಿದೆ. ಚಾರಿತ್ರ್ಯ ವಧೆಯಾಗಲಿದೆ ಎಂದು ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಮಾನ್ಯ ಮಾಡಿದ ಕೋರ್ಟ್, ಮಾನಹಾನಿಕರ ವರದಿ ಮಾಡದಂತೆ ನಿರ್ಬಂಧ ವಿಧಿಸಿದೆ.

 6 ಸಚಿವರು ನಿರ್ಬಂಧಕಾಜ್ಞೆ ತಂದಿದ್ರು
ಈ ಹಿಂದೆ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಹಿರಂಗವಾಗುತ್ತಿದ್ದಂತೆಯೇ ರಾಜ್ಯ ಸರ್ಕಾರದ 6 ಸಚಿವರು ಇದೇ ರೀತಿ ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಅರ್ಜಿ ಸಲ್ಲಿಸಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆದಿದ್ದರು.

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕ್ರೀಡಾ ಸಚಿವ ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸಹ ತಮ್ಮ ವಿರುದ್ಧ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿ ನಿರ್ಬಂಧ ತಂದಿದ್ದರು. ಆಗ ಇದಕ್ಕೆ ಸದಾನಂದಗೌಡ್ರು ಬೇಸರ ವ್ಯಕ್ತಪಡಿಸಿದ್ದರು. ಆದ್ರೆ, ಇದೀಗ ತಾವೇ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

click me!