ಕಾಂಗ್ರೆಸ್ ಸರ್ಕಾರಕ್ಕೆ ಕುರ್ಚಿರೋಗ ಬಂದಿದೆ: ಡಿ.ವಿ.ಸದಾನಂದ ಗೌಡ ವಾಗ್ದಾಳಿ

Govindaraj S   | ANI
Published : Nov 26, 2025, 07:18 AM IST
DV Sadananda Gowda

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕುರ್ಚಿರೋಗ ಬಂದಿದೆ. ಅವರ ಕುರ್ಚಿ ಕಾದಾಟದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ರೈತರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಡಿ.ವಿ.ಸದಾನಂದ ಗೌಡ ವಾಗ್ದಾಳಿ ಮಾಡಿದರು.

ತುಮಕೂರು (ನ.26): ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕುರ್ಚಿರೋಗ ಬಂದಿದೆ. ಅವರ ಕುರ್ಚಿ ಕಾದಾಟದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ರೈತರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ಇರಬೇಕಾಗಿದ್ದ ರೈತರು ಸರ್ಕಾರದ ವಿರುದ್ಧ ಸಿಡಿದೆದ್ದು ಬೀದಿಗೆ ಬಂದಿದ್ದಾರೆ. ಇಷ್ಟಾಗಿಯೂ ಸರ್ಕಾರ ಎಚ್ಚೆತ್ತುಕೊಂಡು ರೈತರ ಸಂಕಷ್ಟ ಕೇಳುವ ಪ್ರಯತ್ನ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ವಾಗ್ದಾಳಿ ಮಾಡಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿ, ಅನಾವೃಷ್ಟಿ, ಬೆಳೆಗೆ ರೋಗ , ಮಾರುಕಟ್ಟೆ ವ್ಯತ್ಯಯಗಳಿಂದ ರೈತರು ಬದುಕು ಚಿಂತಾಜನಕವಾಗಿದೆ. ಸರ್ಕಾರವಂತೂ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಜವಾಬ್ದಾರಿಯುತ ವಿಪಕ್ಷವಾದ ಬಿಜೆಪಿ ರೈತರ ರಕ್ಷಣೆಗೆ ನಿಲ್ಲುತ್ತದೆ. ರೈತರ ಜೊತೆ ಸೇರಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ರೂಪಿಸುತ್ತದೆ. ರೈತರು ಆತಂಕ ಪಡಬೇಡಿ, ರೈತ ವಿರೋಧಿ ಸರ್ಕಾರ ತೊಲಗಿ ಮುಂದೆ ರೈತ ಪರ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

ಈಗ ಮೆಕ್ಕೆಜೋಳ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಇನ್ನೂ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿಲ್ಲ. ಬೆಳೆಹಾನಿಗೆ ಪರಿಹಾರ ಘೋಷಿಸಿ ಒಂದೂವರೆ ತಿಂಗಳಾದರೂ ಪರಿಹಾರ ಕೊಡುವಲ್ಲಿ ರಾಜ್ಯ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ರಾಜ್ಯದ ಎಲ್ಲಾ ಸಮಸ್ಯೆಗಳಿಗೂ ಕೇಂದ್ರ ಸರ್ಕಾರದ ಕಡೆ ಬೊಟ್ಟುತೋರಿಸುವುದು ಮತ್ತು ಪರಿಹಾರಕ್ಕಾಗಿ ಅವರ ಕಡೆ ಮುಖ ನೋಡುವುದಕ್ಕಷ್ಟೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸೀಮಿತವಾಗಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ರೈತ ಪರವಾದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ನೀಡುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್‌ ಯೋಜನೆಯಡಿ ರಾಜ್ಯದ 51 ಲಕ್ಷ ರೈತರಿಗೆ 6 ಸಾವಿರ ರು.ಗಳನ್ನು ವಾರ್ಷಿಕವಾಗಿ ನೀಡುತ್ತಿದೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷರು. ಗೆ ಏರಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 1.75 ಲಕ್ಷ ಕೋಟಿ ರು. ಹಣವನ್ನು ದೇಶದ ರೈತರಿಗೆ ನೀಡಲಾಗಿದೆ ಎಂದರು.

ಪ್ರಧಾನ ಮಂತ್ರಿ ಕಿಸಾನ್ ಮಾನ್‌ಧನ್‌ ಯೋಜನೆಯಡಿ 60 ವರ್ಷದ ನಂತರ ಪಿಂಚಣಿ ರೂಪದಲ್ಲಿ ಮಾಸಿಕ 3 ಸಾವಿರ ರು..ನೀಡಲಾಗುತ್ತದೆ. ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿರು.ನೀಡಲಾಗಿದೆ. ಹನಿ ನಿರಾವರಿ ಪ್ರೋತ್ಸಾಹಿಸಲು ಕೃಷಿ ಸಂಚಾ ಯೋಜನೆಅಡಿಯಲ್ಲಿ 93 ಸಾವಿರ ಕೋಟಿ ಹಣ ನೀಡಲಾಗಿದೆ. ಹೀಗೆ ಹಲವಾರು ರೈತಪರ ಯೋಜನೆಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಸದಾನಂದಗೌಡರು ಹೇಳಿದರು.

ಬೆಲೆ ಹೆಚ್ಚಳದಿಂದ ಸಂಕಷ್ಟ

ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಪೂರ್ಣ ಕಡೆಗಣಿಸಿದೆ. ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿರುವ ರಾಜ್ಯದ 24 ಲಕ್ಷ ಹಾಲು ಉತ್ಪಾದಕ ರೈತ ಕುಟುಂಬಗಳು ಪಶು ಆಹಾರ ಬೆಲೆ ಹೆಚ್ಚಳದಿಂದ ಸಂಕಷ್ಟಕ್ಕೊಳಗಾಗಿವೆ. ಬಾಕಿ ಉಳಿಸಿಕೊಂಡಿರುವ 620 ಕೋಟಿರು. ಪ್ರೋತ್ಸಾಹ ಧನವನ್ನುಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತರು ತಮ್ಮ ನೀರು ಬಳಸಿಕೊಳ್ಳಲು ವಿದ್ಯುತ್ ಸಂಪರ್ಕ ಮತ್ತು ಟಿಸಿ ಅಳವಡಿಕೆಗೆ 2 ಲಕ್ಷರೂ. ನಿಗದಿ ಮಾಡಿ ಸರ್ಕಾರ ರೈತರ ಜೇಬು ಕತ್ತರಿಸುತ್ತಿದೆ. ನೀರಾವರಿ ಯೋಜನೆಗಳು ಸಂಪೂರ್ಣ ನೆನೆಗುದಿಗೆ ಬಿದ್ದಿವೆ. ಸರ್ಕಾರ ರೈತ ವಿರೋಧಿ ಧೋರಣೆ ವಿರುದ್ಧ ಬಿಜೆಪಿ ಎಲ್ಲಾ ತಾಲೂಕಿನಲ್ಲಿ ಈ ತಿಂಗಳ 26-27ರಂದು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಡಿಸೆಂಬರ್ 1-2ರಂದು ಹೋರಾಟ ನಡೆಸಲು ನಿಶ್ಚಯ ಮಾಡಿದೆ ಎಂದು ಹೇಳಿದರು.

ಈ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ರೈತ ಮೋರ್ಚಾ ರಾಜ್ಯಉಪಾಧ್ಯಕ್ಷ ಬ್ಯಾಟರಂಗೇಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದರೆ, ಮುಖಂಡ ದಿಲೀಪ್‌ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್‌ಗೌಡ, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ಪ್ರಧಾನ ಕಾರ್ಯದರ್ಶಿ ರವೀಂದ್ರ, ಜಿಲ್ಲಾಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿತ್ರಮ್ಮ, ಮಾಧ್ಯಮ ಪ್ರಮುಖರಾದ ಜೆ.ಜಗದೀಶ್, ಮರಿತಿಮ್ಮಯ್ಯ ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ