'ಯಡಿಯೂರಪ್ಪ ಹೆಸರಿಗಷ್ಟೇ ಸಿಎಂ, ಸಹಿ ಮಾಡೋದು ವಿಜಯೇಂದ್ರ'

By Suvarna NewsFirst Published Jun 3, 2020, 4:49 PM IST
Highlights

ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಅಲ್ಲದೇ ಕೆಲವರಿಗೆ ತಿರುಗೇಟು ಸಹ ಕೊಟ್ಟಿದ್ದಾರೆ.

ಕೊಪ್ಪಳ, (ಜೂನ್.03): ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದು, ಸಂವಿಧಾನಿಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಸಂವಿಧಾನಿಕ ಮುಖ್ಯಮಂತ್ರಿ ವಿಜಯೇಂದ್ರ. ಹೀಗಾಗಿ ಬಿಜೆಪಿಯಲ್ಲಿ ಭುಗಿಲೆದ್ದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಕೊಪ್ಪಳದಲ್ಲಿ ಇಂದು (ಬುಧವಾರ) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಬಿಜೆಪಿ ಶಾಸಕರಿಗೆ ನೀಡಲಾದ ಅನುದಾನವನ್ನು ವಾಪಾಸ್ ತೆಗೆದುಕೊಂಡಿದ್ದಾರೆ. ಮತ್ತೆ ಪ್ರತ್ಯೇಕ ಅನುದಾನವನ್ನೂ ಕೊಟ್ಟಿಲ್ಲ. ಹಾಗಾಗೇ ಶಾಸಕರು ಬಂಡಾಯ ಹೇಳುತ್ತಿದ್ದಾರೆ ಎಂದರು. 

'ಕೊರೋನಾ ಸಂದರ್ಭ ನಾನು ಸಿಎಂ ಆಗಿದ್ದರೆ ಏನ್‌ ಮಾಡುತ್ತಿದ್ದೆ'

ಬಿಜೆಪಿಯಲ್ಲಿ ಭಿನ್ನಮತ ಇರುವುದು ಸತ್ಯ ಎಂಬ ಯತ್ನಾಳ್ ಹೇಳಿಕೆಗೆ  ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ನಮ್ಮ ನಾಯಕ ಅಲ್ಲ. ಮೋದಿ, ಅಮಿತ್ ಷಾ, ನಡ್ಡಾ ನಮ್ಮ ನಾಯಕರು ಎಂದಿದ್ದಾರೆ. ಹಾಗಾಗಿ ಬಿಜೆಪಿ ಭಿನ್ನಮತದಲ್ಲಿ ಕೈಹಾಕಲ್ಲ. ಬಿಜೆಪಿ ಸರ್ಕಾರ ಬಿದ್ದರೇ ನಾವು ಜವಾಬ್ದಾರರಲ್ಲ ಎಂದು ಹೇಳಿದರು.

ಸೋಮಣ್ಣಗೆ ಟಾಂಗ್ ಕೊಟ್ಟ ಮಾಜಿ ಸಿಎಂ

ವಸತಿ ಸಚಿವ ಸೋಮಣ್ಣ ಅವರ ಬಗ್ಗೆ ಪ್ರತಿಕ್ರಿಯಿಸಿ, ಸಚಿವ ಸೋಮಣ್ಣ ಅವರ ಹೇಳಿಕೆ ಆರ್ಥಿಕತೆಯ ಬಗ್ಗೆ ಅವರಿಗಿರುವ ಅಜ್ಞಾನವನ್ನು ತೋರಿಸುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತಿನಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿತ್ತು. ಈಗ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ. ರಾಜ್ಯ ಮಾತ್ರವಲ್ಲ ಇಡೀ ದೇಶವೇ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಬೊಕ್ಕಸ ಖಾಲಿ ಮಾಡಿದ್ದಾರೆ ಎಂದು ಹೇಳುವ ಸಿಟಿ ರವಿಗೆ  ಹಣಕಾಸಿನ ಬಗ್ಗೆ ಅಜ್ಞಾನ ಇದೆ.‌ ಹಾಗಾಗಿ ದುರುದ್ದೇಶ ಪೂರತ ಹೇಳಿಕೆ ನೀಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಕುಸಿದಾಗಲೂ, ನಮ್ಮ ಅವಧಿಯಲ್ಲಿ ಆರ್ಥಿಕ ಶಿಸ್ತಿನಲ್ಲಿ ಕರ್ನಾಟಕ ಸರ್ಕಾರ ಮೊದಲನೇ ಸ್ಥಾನದಲ್ಲಿತ್ತು. ಆರ್ ಬಿಐ  ಸೇರಿದಂತೆ ಹಲವು ಸಮೀಕ್ಷೆಗಳು ಹೇಳಿವೆ. ಅಲ್ಲದೇ ಮನಮೋಹನ್ ಸಿಂಗ್ ದೇಶ ಕಂಡ ಅತ್ಯುತ್ತಮ ಆರ್ಥಿಕ ತಜ್ಞ. ಅವರು ಕೂಡಾ ಹೇಳಿದ್ದರು. ಸೋಮಣ್ಣ ಯಾವ ಆರ್ಥಿಕ ತಜ್ಞ ಎಂದು ಲೇವಡಿ ಮಾಡಿದರು.

ರಾಜ್ಯ ಸರ್ಕಾರ ಮಹತ್ವದ ಆದೇಶ: ಯಡಿಯೂರಪ್ಪಗೆ ಥ್ಯಾಂಕ್ಸ್ ಹೇಳಿದ ಸಿದ್ದರಾಮಯ್ಯ..!

ಬಿಸಿ ಪಾಟೀಲ್‌ಗೆ ಸಿದ್ದು ಗುದ್ದು
ಕೊರೋನಾದಲ್ಲಿ ಸಿದ್ದರಾಮಯ್ಯ ಪಿಎಚ್ ಡಿ ಮಾಡಿದ್ದಾರಾ ಎಂಬ ಬಿ.ಸಿ.ಪಾಟೀಲ ಪ್ರಶ್ನೆ ಉತ್ತರಿಸಿ, ಕೊರೋನಾ ಎಚ್ಚರಿಕೆ ವಹಿಸಲು ಸಾಮಾನ್ಯ ಜ್ಞಾನ ಬೇಕು. ಇದಕ್ಕೆ ಪಿಎಚ್ ಡಿ ಬೇಕಾಗಿಲ್ಲ. ಇದನ್ನು ಬಿಸಿ ಪಾಟೀಲ್ ಗೆ  ತಿಳಿಸಿ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

ಪ್ರಗತಿಪರರ ಮೇಲಿನ ಕೇಸ್‌ಗೆ ಸಿದ್ದು ಖಂಡನೆ

ಕೊಪ್ಪಳದಲ್ಲಿ ಪ್ರಗತಿಪರರ ಮೇಲೆ ಕೇಸ್ ಹಾಕಿರುವುದನ್ನು ನಾನು ಖಂಡಿಸುತ್ತೇನೆ. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಯಾವ ಸರ್ಕಾರವೂ ಈ ರೀತಿ ಮಾಡುವುದಿಲ್ಲ. ಜನರ ಧ್ವನಿಯನ್ನು ಹತ್ತಿಕ್ಕುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಸರ್ಕಾರ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

click me!