ಸಾಮೂಹಿಕ ನಾಯಕತ್ವ ಸಂದೇಶ ನೀಡ್ತಾರಾ ರಾಹುಲ್ ಗಾಂಧಿ?
ಬೆಂಗಳೂರು/ದಾವಣಗೆರೆ(ಆ.03): ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಎಬ್ಬಿಸುವ ನೇರ ಆಕಾಂಕ್ಷೆ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಿಂಬಿಸುವ ಒಳ ಸುಳಿ ಹಾಗೂ ಮುಂದಿನ ಚುನಾವಣೆಗೆ ಕಾಂಗ್ರೆಸ್ ಪ್ರಚಾರಾಂದೋಲನದ ಅನಧಿಕೃತ ಉದ್ಘಾಟನಾ ಕಾರ್ಯಕ್ರಮ ಎಂದೇ ಪ್ರತಿಪಾದಿಸಲಾಗುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಪಕ್ಷದ ‘ಯುವರಾಜ’ ರಾಹುಲ್ ಗಾಂಧಿ ಬುಧವಾರ ಚಾಲನೆ ನೀಡಲಿದ್ದಾರೆ. ಸುಮಾರು 50 ಎಕರೆ ವಿಸ್ತಾರವಾದ ಶಾಮನೂರು ಅರಮನೆ ಮೈದಾನದಲ್ಲಿ ಈ ಅದ್ಧೂರಿ ಅಮೃತ ಮಹೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಬುಧವಾರ ಮಧ್ಯಾಹ್ನ 12.30ಕ್ಕೆ ರಾಹುಲ್ ಗಾಂಧಿ ಈ ಬಹು ಚರ್ಚಿತ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಾಡಿನ ಮೂಲೆ ಮೂಲೆಯಿಂದ 7-8 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಹೊಂದಿರುವ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್‌ನ ಬಹುತೇಕ ಎಲ್ಲ ನಾಯಕರು ಭಾಗವಹಿಸಲಿದ್ದಾರೆ.
ಮುಂದಿನ ಮುಖ್ಯಮಂತ್ರಿ ಹುದ್ದೆ ಪೈಪೋಟಿ ತೀವ್ರವಾಗಿರುವ ಕಾಂಗ್ರೆಸ್‌ನ ಒಳ ರಾಜಕಾರಣದ ನಿಜ ಸ್ವರೂಪವೇನು? ಅದು ಉಲ್ಬಣಗೊಳ್ಳುತ್ತದೆಯೋ ಅಥವಾ ಶಮನಗೊಂಡು ಅಧಿಕಾರ ಗದ್ದುಗೆಗೇರುವ ಒಗ್ಗಟ್ಟಿನ ಪ್ರಯತ್ನ ನಡೆಸಲು ನಾಯಕರು ಸಜ್ಜಾಗುವರೆ ಎಂಬ ಯಕ್ಷಪ್ರಶ್ನೆಗೆ ಈ ಕಾರ್ಯಕ್ರಮ ಸೂಕ್ಷ್ಮ ಉತ್ತರ ನೀಡುವ ನಿರೀಕ್ಷೆಯಿದೆ.
ಸಿದ್ದರಾಮೋತ್ಸವಕ್ಕೆ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಗೈರು, ಕಾರಣ ಕೊಟ್ಟ ಸಿದ್ದರಾಮಯ್ಯ
ರಾಹುಲ್ ಸಂದೇಶ ಏನು?: ಈ ಬೃಹತ್ ಸಮಾರಂಭದ ವೇದಿಕೆಯ ಮೇಲೆ ನಿಂತು ರಾಜ್ಯದ ಜನತೆ ಹಾಗೂ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಮಾತನಾಡುವ ರಾಹುಲ್ ಗಾಂಧಿ ನೀಡುವ ಸಂದೇಶ ಚುನಾವಣೆ ಎದುರಿಸಲು ಕಾಂಗ್ರೆಸ್ ಯಾವ ಸ್ವರೂಪದಲ್ಲಿ ಸಜ್ಜಾಗಲಿದೆ ಎಂಬುದನ್ನು ತೀರ್ಮಾನಿಸಲಿದೆ.
ರಾಹುಲ್ ಅವರು ಸಾಮೂಹಿಕ ನಾಯಕತ್ವದ ಮಂತ್ರ ಜಪಿಸುವುದು ಶತಃಸಿದ್ಧ. ಆದರೆ, ಈ ಜಪ ಮಾಡುತ್ತಲೇ ಪರೋಕ್ಷವಾಗಿ ಸಿದ್ದರಾಮಯ್ಯ ಪರ ನಿಲುವು ಪ್ರಕಟಿಸುವರೋ ಅಥವಾ ಸಾಮೂಹಿಕ ನಾಯಕತ್ವಕ್ಕೆ ಕಟ್ಟುಬೀಳುವಂತೆ ಫರ್ಮಾನು ಹೊರಡಿಸಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಜೈಕಾರ ಹಾಕುವವರ ಉತ್ಸಾಹಕ್ಕೆ ತಡೆಯೊಡ್ಡುವರೋ ಎಂಬುದನ್ನು ಪಕ್ಷದ ಎಲ್ಲ ಬಣಗಳು ಅತ್ಯಂತ ಕಾತುರದಿಂದ ಕಾಯುತ್ತಿವೆ.
ಇದೇ ವೇಳೆ ಅಮೃತ ಮಹೋತ್ಸವದ ಬಗ್ಗೆ ಆಂತರಿಕವಾಗಿ ಅಸಮಾಧಾನ ಹೊಂದಿದ್ದಾರೆ ಎಂದು ಬಿಂಬಿಸಲಾಗುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ ಮೊದಲಾದ ನಾಯಕರು ವೇದಿಕೆಯ ಮೇಲೆ ನಿಂತು ಯಾವ ಸೂಕ್ಷ್ಮ ಸಂದೇಶ ರವಾನಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಕಾರ್ಯಕ್ರಮ ಖಚಿತವಾಗಿ ರಾಜಕೀಯ ಸಂದೇಶ ನೀಡಲಿದೆ ಎಂದು ಈಗಾಗಲೇ ಘಂಟಾಘೋಷ ಮಾಡಿರುವ ಸಿದ್ದರಾಮಯ್ಯ ಅವರು ಸನ್ಮಾನ ಸ್ವೀಕರಿಸಿ ಏನು ಹೇಳುತ್ತಾರೆ ಎಂಬುದು ಅತ್ಯಂತ ಕುತೂಹಲ ಹುಟ್ಟುಹಾಕಿದೆ.
ದಾವಣಗೆರೆಯತ್ತ ಜನಸಾಗರ:
ಬೀದರ್‌ನಿಂದ ಚಾಮರಾಜನಗರದವರೆಗೆ ನಾಲ್ಕು ದಿಕ್ಕಿನಿಂದ ಜನ ಸಾಗರ ದಾವಣಗೆರೆಗೆ ಈಗಾಗಲೇ ಹರಿದು ಬರುತ್ತಿದ್ದು, ಸುಮಾರು ಏಳೆಂಟು ಲಕ್ಷ ಜನ ಈ ಸಮಾರಂಭಕ್ಕೆ ಸೇರುವ ನಿರೀಕ್ಷೆ ಹುಟ್ಟುಹಾಕಿದೆ. ಬಂದವರಿಗಾಗಿ ಇಲ್ಲಿನ ಹೋಟೆಲ್, ಲಾಡ್ಜ್, ಕಲ್ಯಾಣ ಮಂಟಪಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಇಡೀ ಊರಿನಲ್ಲಿ ಹುಡುಕಿದರೂ ಯಾವುದೇ ಲಾಡ್ಜ್‌ನಲ್ಲಿ ರೂಂಗಳು ಖಾಲಿ ಇಲ್ಲವೆಂಬ ಮಾತುಗಳೇ ಕೇಳಿ ಬರುತ್ತಿದ್ದು, ಇದು ಸಮಾರಂಭ ಯಶಸ್ವಿಯಾಗುವುದರ ಮುನ್ಸೂಚನೆಯೂ ಆಗಿದೆ.
ಸಿದ್ದರಾಮೋತ್ಸವ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ
ಕರುನಾಡಿನ ಮಧ್ಯ ಬಿಂದು ದಾವಣಗೆರೆ ಎಂಬುದು ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು, ನಾಯಕರಿಗೆ ಅಚ್ಚುಮೆಚ್ಚಿನ ಹಾಗೂ ಅದೃಷ್ಟದ ನೆಲ. ಇಲ್ಲಿ ಮಾಡಿದ ಸಮಾವೇಶಗಳು, ಸಭೆಗಳು, ಹೋರಾಟಗಳು ಯಶಸ್ವಿಯಾಗಿದ್ದೇ ಹೆಚ್ಚು. ರಾಜಕೀಯ ನಾಯಕರೂ ಫೀನಿಕ್ಸ್‌ನಂತೆ ಇದೇ ನೆಲದಿಂದ ಪುಟಿದೆದ್ದು ಬಂದು, ಅಧಿಕಾರ ಅನುಭವಿಸಿದ್ದೂ ಇದೆ. ಸಿದ್ದರಾಮಯ್ಯ ಅವರು ಸಹ ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡ ನಂತರ ಅಹಿಂದ ಸಂಘಟನೆಯ ಮೂಲಕ ಬಲ ಪ್ರದರ್ಶನ ಮಾಡಿದ್ದು ಇದೇ ದಾವಣಗೆರೆಯಲ್ಲಿ.
ಹೀಗಾಗಿ ಈಗಲೂ ಇದೇ ನಗರಿಯನ್ನು ವೇದಿಕೆಯಾಗಿ ಮಾಡಿಕೊಂಡು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೈಗೊಂಡಿದ್ದ ಜನಪರ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಮತ್ತೆ ಜನರಿಗೆ ನೆನಪು ಮಾಡಿಕೊಡುವ ಕೆಲಸವೂ ಈ ಸಮಾರಂಭದಲ್ಲಿ ನಡೆಯಲಿದೆ. ಜತೆಗೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬಸವರಾಜ ಬೊಮ್ಮಾಯಿ ಸಾರಥ್ಯದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಕಾಂಗ್ರೆಸ್ ದಂಡು ವಾಗ್ದಾಳಿ ನಡೆಸಲು ವಿಶಾಲ ವೇದಿಕೆ, ಕೈ ಪಡೆಯ ನೂರಾರು ಸೇನಾನಿಗಳು ಸನ್ನದ್ಧರಾಗಿಯೇ ಅಮೃತ ಮಹೋತ್ಸವದ ವೇದಿಕೆಯನ್ನೂ ಬಳಸಿಕೊಳ್ಳಲಿದ್ದಾರೆ.
ವೇದಿಕೆ ಕಾರ್ಯಕ್ರಮ
- ಬೆಳಗ್ಗೆ 10.30ರಿಂದ 11.30- ಸಂಗೀತ ಕಾರ್ಯಕ್ರಮ
- 11.30ರಿಂದ 11.45- ಸಿದ್ದರಾಮಯ್ಯ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ
- 11.45ರಿಂದ 12.30- ವಿವಿಧ ನಾಯಕರಿಂದ ಭಾಷಣ
- ಮಧ್ಯಾಹ್ನ 12.30- ರಾಹುಲ್ ಗಾಂಧಿ ಸಹಿತ ಪ್ರಮುಖ ನಾಯಕರು ವೇದಿಕೆಗೆ.
- ಸ್ವಾಗತ ಭಾಷಣ- ಬಸವರಾಜ ರಾಯರೆಡ್ಡಿ
- ರಾಹುಲ್ ಗಾಂಧಿ ಅವರಿಗೆ ಸನ್ಮಾನ
- ಎಐಸಿಸಿ ಪದಾಧಿಕಾರಿಗಳಿಗೆ ಗೌರವಾರ್ಪಣೆ
- ಕ್ರಮವಾಗಿ ಬಿ.ಕೆ. ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಭಾಷಣ.
- ರಾಹುಲ್ ಗಾಂಧಿ ಭಾಷಣ
- ರಾಹುಲ್ ಗಾಂಧಿ ಹಾಗೂ ನಾಯಕರಿಂದ ಸಿದ್ದರಾಮಯ್ಯ ಅವರಿಗೆ ಸನ್ಮಾನ.
- ಸಿದ್ದರಾಮಯ್ಯ ಅವರಿಂದ ಭಾಷಣ
- ಎಸ್.ಎಸ್. ಮಲ್ಲಿಕಾರ್ಜುನ ಅವರಿಂದ ವಂದನಾರ್ಪಣೆ.