ಎತ್ತಿನ ಹೊಳೆ ಮೊದಲ ಹಂತದಲ್ಲಿ ಕುಡಿಯುವ ನೀರು ಕಾಮಗಾರಿ ಮುಗಿಸಿ: ಸಿಎಂ ಸಿದ್ದರಾಮಯ್ಯ

Kannadaprabha News   | Kannada Prabha
Published : Jun 21, 2025, 06:57 AM IST
Karnataka CM Siddaramaiah to present record 16th budget tomorrow; BJP seeks additional development funds

ಸಾರಾಂಶ

ಪ್ರಾರಂಭಿಕ ಹಂತದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಲ್ಲಾ ಏಳು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು (ಜೂ.21): ಎತ್ತಿನ ಹೊಳೆ ಯೋಜನೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಪೂರೈಕೆಗೆ ಬೇಕಾದಷ್ಟು ನೀರಿನ ಸರಾಸರಿ (18.08) ಲಭ್ಯವಿದ್ದು, ಪ್ರಾರಂಭಿಕ ಹಂತದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಲ್ಲಾ ಏಳು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಎತ್ತಿನ ಹೊಳೆ ಯೋಜನೆಯಿಂದ 24.1 ಟಿಎಂಸಿ ನೀರು ನಿರೀಕ್ಷಿಸಲಾಗಿತ್ತು. ಕಳೆದ ಏಳು ವರ್ಷಗಳಲ್ಲಿ ಸರಾಸರಿ 18.08 ಟಿಎಂಸಿ ನೀರು ಲಭ್ಯತೆ ಖಾತ್ರಿಯಾಗಿದ್ದು, ಉಳಿದ 6 ಟಿಎಂಸಿ ನೀರಿನ ಕೊರತೆ ನೀಗಿಸಲು ಹೆಚ್ಚುವರಿ ನೀರು ತಿರುವುಗೊಳಿಸುವ ಕುರಿತು ಕಾರ್ಯಸಾಧ್ಯತಾ ವರದಿ ತಯಾರಿಸಲು ಸಮಾಲೋಚಕರನ್ನು ನೇಮಕ ಮಾಡಲಾಗಿದೆ.

ಮೊದಲು ಕುಡಿಯುವ ನೀರು ಪೂರೈಕೆ ಮಾಡುವುದು ನಮ್ಮ ಸರ್ಕಾರದ ಆದ್ಯತೆ. ಬಳಿಕ ಕೆರೆಗಳನ್ನು ತುಂಬಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಯೋಜನಾ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಖಾತ್ರಿಪಡಿಸಬೇಕು. ಕುಡಿಯುವ ನೀರು ಕಾಮಗಾರಿ ಪೂರ್ಣಗೊಳಿಸಲು ಇರುವ ಎಲ್ಲಾ ತಾಂತ್ರಿಕ ಅಡಚಣೆಗಳನ್ನು ನಿವಾರಿಸಬೇಕು ಎಂದು ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದರು. ಶುಕ್ರವಾರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಸಿದ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ದೇಶನ ನೀಡಿದ್ದಾರೆ.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ 14.056 ಟಿಎಂಸಿ ಕುಡಿಯುವ ನೀರು, 9.953 ಟಿಎಂಸಿ ನೀರು ಕೆರೆಯನ್ನು ತುಂಬಿಸಲು ಡಿಪಿಆರ್‌ ಮಾಡಲಾಗಿದೆ. ಯೋಜನೆಗೆ 23,251.66 ಕೋಟಿ ರು. ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಈವರೆಗೆ 17,147 ಕೋಟಿ ರು. ವೆಚ್ಚವಾಗಿದೆ. ಒಂದನೇ ಹಂತದಲ್ಲಿ ನದಿ ಪಾತ್ರದ ಏತ ನೀರಾವರಿ ಕಾಮಗಾರಿಗಳಲ್ಲಿ 7ಪ್ಯಾಕೇಜ್‌ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಹಂತ 2ರಲ್ಲಿ ಗುರುತ್ವ ಮುಖ್ಯ ಕಾಲುವೆ ಕಾಮಗಾರಿಗಳಲ್ಲಿ 33 ಪ್ಯಾಕೇಜ್‌ಗಳ ಪೈಕಿ 11 ಪ್ಯಾಕೇಜ್ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ವಿವರಣೆ ನೀಡಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 16 ಕಿ.ಮೀ. ವ್ಯಾಪ್ತಿಯ ಕಾಮಗಾರಿ ಇನ್ನೂ ಆರಂಭಿಸಬೇಕಿದೆ. ಇದರಲ್ಲಿ 6 ಎಕರೆ ಅರಣ್ಯ ಪ್ರದೇಶ ಹಾಗೂ 10 ಕಿ.ಮೀ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ. ಯೋಜನೆಯನ್ನು 2027ರ ಮಾರ್ಚ್‌ ಒಳಗಾಗಿ ಪೂರ್ಣಗೊಳಿಸಲು ಕಾಲಾವಧಿ ನಿಗದಿಪಡಿಸಲಾಗಿದ್ದು, ಅದಕ್ಕೂ ಮೊದಲೇ ಯೋಜನೆ ಕಾರ್ಯಗತಗೊಳ್ಳಬೇಕು. ಮೊದಲ ಹಂತದಲ್ಲಿ ಶೀಘ್ರವಾಗಿ ಕುಡಿಯುವ ನೀರೊದಗಿಸಲು ಕ್ರಮ ಕೈಗೊಳ್ಳಲು ಎಂದು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಡಾ.ಎಂ.ಸಿ.ಸುಧಾಕರ್, ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೇಜ್‌ ಸೇರಿ ಹಿರಿಯ ಅಧಿಕಾರಿಗಳು ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಚಿಕ್ಕಮಗಳೂರು - ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!