
ಬೆಂಗಳೂರು (ಜೂ.21): ಗ್ರಾಮೀಣ ಭಾಗದಲ್ಲಿ ಅಲ್ಪಸಂಖ್ಯಾತ ಫಲಾನುಭವಿಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕಾಗಿ ವಸತಿ ಹಂಚಿಕೆ ಮೀಸಲಾತಿಯನ್ನು ನಗರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆಯಷ್ಟೆ. ಯಾರ ಸೌಲಭ್ಯಗಳನ್ನೂ ಕಿತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಚಾರ್ ವರದಿಯಂತೆ ವಸತಿ ಹಂಚಿಕೆಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ಅಲ್ಪಸಂಖ್ಯಾತರಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಆದರೆ, ಗ್ರಾಮೀಣ ಭಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಇರುವ ಕಾರಣಕ್ಕೆ ಸೌಲಭ್ಯ ರದ್ದಾಗುತ್ತಿತ್ತು. ಹೀಗಾಗಿ ಮೀಸಲಾತಿಯನ್ನು ನಗರ ಪ್ರದೇಶಕ್ಕೆ ವರ್ಗಾಯಿಸಲಾಗಿದೆ.
ಅಲ್ಲದೆ, ಈ ಮೀಸಲಾತಿಯನ್ನು ನಾವು ಹೊಸದಾಗಿ ಸೃಷ್ಟಿ ಮಾಡಿದ್ದಲ್ಲ. ಹೊಸದಾಗಿ ಮನೆ ಬೇಕಾಗಿರುವವರು ಅಡಿಪಾಯ ಹಾಕಿದರೆ ಮಾತ್ರ ಅವರಿಗೆ ಸೂಕ್ತ ನೆರವು ನೀಡಲಾಗುವುದು ಎಂದರು. ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ, ಮಾಡಲಿ. ಪರಿಶಿಷ್ಟ ಜಾತಿ-ಪಂಗಡದವರಿಗೆ ನೀಡಬೇಕಾದ ಮೀಸಲಾತಿ ನೀಡಿ ನಂತರ ಹಿಂದುಳಿದ, ಸಾಮಾನ್ಯ ವರ್ಗದವರಿಗೆ ಬಳಸಿಕೊಳ್ಳಲಾಗಿದೆ. ನಮ್ಮದು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಸರ್ಕಾರ. ಅಲ್ಲದೆ, ನಾವೇನು ಕೆಲಸ ಮಾಡಿದ್ದೇವೆ, ವಿರೋಧ ಪಕ್ಷದವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎಂಬುದನ್ನು ಸದನದಲ್ಲಿ ಚರ್ಚೆ ಮಾಡಲಿ ಎಂದು ಹೇಳಿದರು.
ನೇತ್ರದಾನ ಪತ್ರಕ್ಕೆ ಸಹಿ: ಕಾಂಗ್ರೆಸ್‌ನ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಅವರ ಜನ್ಮದಿನ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ನೇತ್ರದಾನ ಶಿಬಿರದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತ್ರದಾನ ಪತ್ರಕ್ಕೆ ಸಹಿ ಹಾಕಿದರು. ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ನೇತ್ರದಾನ ಶಿಬಿರದಲ್ಲಿ ಭಾಗವಹಿಸಿದ ಡಿ.ಕೆ.ಶಿವಕುಮಾರ್ ತಮ್ಮ ನೇತ್ರದಾನ ಪತ್ರಕ್ಕೆ ಸಹಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಜನ್ಮದಿನ ಅಂಗವಾಗಿ ‘ಯುವ ಕಾಂಗ್ರೆಸ್’ ವತಿಯಿಂದ ನೇತ್ರದಾನ ಶಿಬಿರ ಹಮ್ಮಿಕೊಂಡಿದ್ದಾರೆ. ನನ್ನ ನೇತ್ರದಾನ ಮಾಡಿದ್ದೇನೆ ಒಪ್ಪಿಗೆ ಪತ್ರ ನೀಡಿದ್ದೇನೆ ಎಂದು ತಿಳಿಸಿದರು.ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್, ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.