
ಬೆಂಗಳೂರು (ಜು.30): ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಗುಪ್ತ ಸಭೆಯ ಇನ್‌ಸೈಡ್ ಮಾಹಿತಿ ಇದೀಗ ಬಹಿರಂಗವಾಗಿದೆ. ಈ ವೇಳೆ ತಮ್ಮ ಸಹೋದರ ಡಿ.ಕೆ.ಸುರೇಶ್ ಸೋಲಿಗೆ ಕಾರಣಗಳನ್ನು ಹುಡುಕಿದ್ದಾರೆ. ಇನ್ನು ಸಭೆಯಲ್ಲಿ ನಡೆದ ಚರ್ಚೆಗಳು, ಪಕ್ಷದ ಒಳಗಣ ಗೊಂದಲಗಳು ಹಾಗೂ ಮುಂದಿನ ಚುನಾವಣೆ ತಂತ್ರಗಳು ಚರ್ಚೆಗೆ ಕಾರಣವಾಗಿವೆ.
ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ತಮ್ಮ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಸೋಲಿಗೆ ಕಾರಣವಾದ ಕ್ಷೇತ್ರಗಳ ಬಗ್ಗೆ ನೇರವಾಗಿ ಪ್ರಸ್ತಾಪಿಸಿದರು.'ರಾಜರಾಜೇಶ್ವರಿ ನಗರದಲ್ಲಿ ಎಷ್ಟೋ ಓಟರ್ ಐಡಿ ಅಕ್ರಮ ನಡೆದಿತ್ತು. ಅಲ್ಲಿ ಕಳೆದ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿತ್ತು' ಎಂದು ಡಿಕೆಶಿ ಹೇಳಿದರು. ಈ ವೇಳೆ ಸಭೆಯಲ್ಲಿದ್ದ ಒಬ್ಬ ಮುಖಂಡ, ಕನಕಪುರದಲ್ಲೂ ಇಂತಹ ಸಮಸ್ಯೆ ಎದುರಿಸಬೇಕಾಯಿತು ಎಂದು ಹೇಳಿದರು.
ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಡಿಕೆಶಿ, 'ಕನಕಪುರ ಬಿಡಿ, ಅದನ್ನು ನಾನು ಮ್ಯಾನೇಜ್ ಮಾಡ್ತೀನಿ. ಅದರ ಮೇಲೆ ಚನ್ನಪಟ್ಟಣ ಹೇಗಾಯ್ತು ನೋಡಿದ್ರಲ್ಲಾ' ಎಂದು ಸ್ಪಷ್ಟಪಡಿಸಿದರು. ಸಭೆಯಲ್ಲಿ ಡಿಕೆಶಿ ನಾಯಕರಿಗೆ ಉತ್ಸಾಹ ತುಂಬುತ್ತಾ, 'ನಮ್ಮ ನಾಯಕರು ಪ್ರಚಾರಕ್ಕಾಗಿ ಇಲ್ಲಿಗೆ ಬರುತ್ತಿಲ್ಲ, ನಿಮ್ಮ ಕೈ ಬಲಪಡಿಸಲು ಬರುತ್ತಿದ್ದಾರೆ. ಈ ಸರ್ಕಾರವನ್ನು ಉಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಬರ್ತಿದ್ದಾರೆ. ಅದಕ್ಕಾಗಿ ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು' ಎಂದು ಕರೆ ನೀಡಿದರು.
ಸಭೆಯಲ್ಲಿ ಬೋರ್ಡ್ ಚೇರ್ಮನ್ ಹುದ್ದೆಗೆ ಸಂಬಂಧಿಸಿದಂತೆ 2 ಲಾರಿಗಳಷ್ಟು ಅರ್ಜಿಗಳು ಬಂದಿರುವುದನ್ನು ಡಿಕೆಶಿ ಉಲ್ಲೇಖಿಸಿದರು. 'ಯಾರನ್ನು ಮಾಡೋದು ಬಿಡೋದು ನನಗೂ ಸಿಎಂಗೂ ಸಂಕಟವಾಗಿದೆ. ನಾನು ಲಿಸ್ಟ್ ಮಾಡಿ ಕಳುಹಿಸಿದ್ದ ಪಟ್ಟಿಗೆ ನಮ್ಮ ಜನರಲ್ ಸೆಕ್ರೆಟರಿಗಳು ಬೇರೆ ಆಕ್ಷೇಪ ಎತ್ತಿದ್ದಾರೆ' ಎಂದು ಹೇಳಿದರು.
ಬಿಬಿಎಂಪಿ ವಿಂಗಡಣೆ ಪ್ರಶ್ನೆ:
ಡಿಕೆಶಿ ಮಾತು ಮುಗಿಯುತ್ತಿದ್ದಂತೆಯೇ ಸಭೆಯಲ್ಲಿದ್ದ ಕಾರ್ಯಕರ್ತರಲ್ಲಿ ಒಬ್ಬರು ಬಿಬಿಎಂಪಿ ಐದು ಭಾಗಗಳ ವಿಂಗಡಣೆ ಕುರಿತು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಡಿಕೆಶಿ, ಇದೀಗ 5 ಭಾಗಗಳಾಗಿ ವಿಭಜಿಸಿದ್ದೇವೆ, ಮುಂದೆ ನಗರ ಸುತ್ತಮುತ್ತಾ ಬೆಳೆಯುತ್ತಿರುವ ಏರಿಯಾಗಳನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎಂದರು. ನಂತರ ಕಾರ್ಯಕರ್ತರಿಂದ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಗಳ ಬಗ್ಗೆ ಪ್ರಶ್ನೆಗಳು ಕೇಳಿಬಂದರೂ, ಅದನ್ನು ಸ್ಪಷ್ಟಪಡಿಸದೆ ಸಭೆಯನ್ನು ಮುಗಿಸಿ ಹೊರಟರು.
ಈ ಸಭೆಯ ಚರ್ಚೆಗಳು ಇದೀಗ ಪಕ್ಷದ ಒಳಗೆ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಡಿ.ಕೆ.ಶಿವಕುಮಾರ್ ನೀಡಿದ ಸೂಚನೆಗಳು ಮುಂದಿನ ಚುನಾವಣಾ ತಂತ್ರದ ಸೂಚಕವಾಗಿವೆ ಎಂದು ವಿಶ್ಲೇಷಣೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.