ಬಹಿರಂಗ ಚರ್ಚೆಗೆ ಬನ್ನಿ, ಅಭಿವೃದ್ಧಿ ಕಾರ್ಯ ಯಾರ ಅವಧಿಯಲ್ಲಿ ಆಗಿದೆ ಜನರಿಗೆ ಗೊತ್ತಾಗಲಿ, ತಮ್ಮನ್ನು ಸೋಲಿಸಲು ಕರೆ ನೀಡಿದ ಸಿದ್ದರಾಮಯ್ಯನವರಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಲೇವಡಿ
ವರದಿ- ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ(ಫೆ.05): ಸುಧಾಕರ್ ತೆಗಳುವ ಧ್ವನಿಯಾಗಿ ಬಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ಸೋಲಿಸುವಂತೆ ಗೋಗೆರಿದಿದ್ದು, ನಾನು ಸೋಲುವುದಿರಲಿ, ನಿಮ್ಮ ಅಂತಿಮ ಯಾತ್ರೆ ಇದು ನೆನಪಿರಲಿ, ಇದು ನಿಮ್ಮ ಕೊನೆಯ ಚುನಾವಣೆಯಾಗಿದ್ದು, ನಾನು ನಿಮ್ಮಂತೆ ಹೇಳುವುದಿಲ್ಲ ಈ ಬಾರಿಯಾದರೂ ನೀವು ಗೆಲ್ಲಿ ಎನ್ನುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಲೇವಡಿ ಮಾಡಿದರು. ಶನಿವಾರ ನಗರದ ನಂದಿ ರಂಗಮಂದಿರದಲ್ಲಿ ಆಯೋಜಿಸಿದ್ದ ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮೊಂದಿಗೆ ನಾನು ಐದು ವರ್ಷ ಇದ್ದೆ, ಹಾಗಾಗಿ ನೀವು ಗೆಲ್ಲಬೇಕೆಂದು ಬಯಸುತ್ತೇನೆ ಹೊರತು ನಿಮ್ಮ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸುಧಾಕರ್ ತೆಗಳುವ ಧ್ವನಿ
ಇತ್ತೀಚಿಗೆ ಕಾಂಗ್ರೆಸ್ ಚಿಕ್ಕಬಳ್ಳಾಪುರದಲ್ಲಿ ಮಾಡಿದ್ದು ಪ್ರಜಾಧ್ವನಿಯಲ್ಲ, ಸುಧಾಕರ್ ತೆಗಳುವ ಧ್ವನಿಯಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋಗೆರೆದು ಸುಧಾಕರ್ ಸೋಲಿಸುವಂತೆ ಮನವಿ ಮಾಡಿದ್ದಾರೆ. ಇದೇ ಸಿದ್ದರಾಯಮಯ್ಯ, ಇದೇ ಬಾಯಲ್ಲಿ 2013ರಿಂದ 18ರವರೆಗೂ ಚಿಕ್ಕಬಳ್ಳಾಪುರಕ್ಕೆ 16 ಬಾರಿ ಬಂದರಲ್ಲ, ಆಗ 224 ಶಾಸಕರಲ್ಲಿ ಸುಧಾಕರ್ ಮೊದಲಿಗರು ಎಂದರಲ್ಲ ಆಗ ಯಾವ ಸಿದ್ದರಾಮಯ್ಯ ಇದ್ದಿರಿ ಎಂದು ಪ್ರಶ್ನಿಸಿದರು.
ಇಂದು ಸೋಲಿಸಬೇಕು ಎನ್ನುತ್ತೀರಲ್ಲ ಯಾವ ಕಾರಣಕ್ಕೆ? 22 ಸಾವಿರ ನಿವೇಶನ ನೀಡುತ್ತಿರುವುದಕ್ಕಾ? ಪ್ರತಿ ಗ್ರಾಮಕ್ಕೆ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡುತ್ತಿರುವುದಕ್ಕಾ? ನಿಮ್ಮ ನಾಯಕರ ವಿರುದ್ಧ ಹೋರಾಡಿ ವೈದ್ಯಕೀಯ ಕಾಲೇಜು ಜಿಲ್ಲೆಗೆ ತಂದಿರುವುದಕ್ಕಾ ಕಾರಣ ಹೇಳಬೇಕಲ್ಲಾ ಸಿದ್ದರಾಮಯ್ಯನವರೇ ಎಂದರು.
ನಂದಿಬೆಟ್ಟದ ರೋಪ್ ವೇಗೆ ಈ ತಿಂಗಳಲ್ಲಿ ಭೂಮಿಪೂಜೆ; ಸಚಿವ ಸುಧಾಕರ್
ಏಕವಚನ, ವ್ಯಂಗ್ಯ ನನಗೂ ಗೊತ್ತಿದೆ
ಸಿದ್ದರಾಮಯ್ಯನವರೇ ನಾನೂ ಹಳ್ಳಿಯಿಂದ ಬಂದವನು, ಆದರೆ ನನಗೆ ಮನೆಯಲ್ಲಿ ಸಂಸ್ಕಾರ ಕಲಿಸಿದ್ದಾರೆ, ಆ ರೀತಿ ನಾನು ಮಾತನಾಡುವುದಿಲ್ಲ. ಏಕ ವಚನ, ವ್ಯಂಗ್ಯ ನನಗೂ ಗೊತ್ತಿದೆ. ನಾನು ವೈಯಕ್ತಿಕ ದ್ವೇಷವೂ ಮಾಡಲ್ಲ. ವಿಷಯಾಧರಿತ ಚರ್ಚೆ, ವಸ್ತು ಸ್ಥಿತಿ ಮಾತನಾಡಿದ್ದೀನಿ, ಈವರೆಗೂ ನಾನು ವೈಯಕ್ತಿಕ ದ್ವೇಷ ಯಾರ ಬಗ್ಗೆಯೂ ಮಾಡಿಲ್ಲ. ಜನರ ಸೇವೆ ಮಾಡಲು ನಾನು ರಾಜಕೀಯ ಮಾಡುತ್ತಿದ್ದೇನೆ ಹೊರತು ನಿಮ್ಮ ವಿರುದ್ಧ ವೈಯಕ್ತಿಕ ದ್ವೇಷ ಮಾಡಲು ಅಲ್ಲ ಎಂದು ತಿರುಗೇಟು ನೀಡಿದರು.
ನೀವು ತಪ್ಪು ಮಾಡಿದಾಗ ತಪ್ಪು ಎಂದು ಹೇಳುತ್ತೇನೆ, ಕ್ಷೇತ್ರದ 37 ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಉದ್ಘಾಟನೆಯಾಗುತ್ತಿವೆ, ಇದರ ಮೌಲ್ಯ 3.80 ಕೋಟಿ ಆಗಿದೆ. ತಾಯಿ ಮತ್ತು ಮಗುವಿನ ಆಸ್ಪತ್ರೆ ಸಿದ್ಧವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿಲ್ಲ, ಕ್ಷೇತ್ರದಲ್ಲಿ, ಜಿಲ್ಲೆಯಲ್ಲಿ ರಾಜಧರ್ಮವನ್ನು ಪಾಲಿಸಲಾಗುತ್ತಿದೆ. ನಮ್ಮ ಸರ್ಕಾರ ಬಂದ ನಂತರ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ, ಕಾಂಗ್ರೆಸ್ ಕಾಲದಲ್ಲಿ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಕಳೆದ ಮೂರು ವರ್ಷದಿಂದ ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿ ಗರೀಬ್ ಯೋಜನೆಯಲ್ಲಿ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದಾರೆ. ಪ್ರಸ್ತುತ ಆಯವ್ಯದಲ್ಲಿಯೂ ಇದನ್ನು ಘೋಷಣೆ ಮಾಡಿ ಮುಂದುವರಿಸಲಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರ 5 ಕೆಜಿ ಸೇರಿಸಿ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಆದರೆ ನಾವು ಒಂದು ಸಲವೂ ಅಕ್ಕಿ ಕೊಟ್ಟೆವು ಎಂದು ಹೇಳಿಲ್ಲ. ಕಾಂಗ್ರೆಸ್ ನವರು ತಿಂದಿದ್ದು ಅರಗದಂತೆ ಹೇಳುತ್ತಿದ್ದಾರೆ ಅಕ್ಕಿ ಕೊಟ್ಟೆವು ಎಂದು ಪ್ರಧಾನಿಯವರು ಒಮ್ಮೆಯೂ ಇದರ ಪ್ರಸ್ತಾಪವೇ ಮಾಡಿಲ್ಲ ಎಂದು ಲೇವಡಿ ಮಾಡಿದರು.
ಬಡವರಿಗೆ ನಲ್ಲಿ ನೀರು ಯಾಕೆ ನೀಡಲಿಲ್ಲ?
ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ, 42 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ನಲ್ಲಿ ಮೂಲಕ ನೀರು ನೀಡಲಾಗುತ್ತಿದೆ. ನೀವು ಕಳೆದ 75 ವರ್ಷ ವರ್ಷದಲ್ಲಿ ಅಭಿವೃದ್ಧಿ ಮಾಡಿದ್ದರೆ ಬಡವರ ಮನೆಗೆ ನೀರು ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ ಸಚಿವರು, ಸ್ವಚ್ಛ ಭಾರತ್ ಯೋಜನೆಯಡಿ ದೇಶದಲ್ಲಿ 10 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ, ಜಿಲ್ಲೆಯಲ್ಲಿ ಶೇ.100 ರಷ್ಟು ಶೌಚಾಲಯ ನಿರ್ಮಾಣವಾಗಿದೆ ಎಂದು ವಿವರಿಸಿದರು.
ಫೆಬ್ರವರಿ ಅಂತ್ಯದಲ್ಲಿ 22 ಸಾವಿರ ಮಹಿಳೆಯರನ್ನು ಸೇರಿಸಿ, ಉಚಿತ ನಿವೇಶನ ಹಕ್ಕುಪತ್ರ ವಿತರಿಸುವ ಕೆಲಸ ಮಾಡಲಾಗುವುದು. ಸರ್ಕಾರ ಯಾವುದೇ ಯೋಜನೆ ನೀಡುವುದು ಜನರ ತೆರಿಗೆ ಹಣದಲ್ಲಿ. ನಿಮ್ಮಿಂದ ಚುನಾಯಿತರಾಗಿ ಶಾಸನ ಮಾಡುವುದು ಮಾತ್ರ ನಮ್ಮ ಕರ್ತವ್ಯ. ನಮ್ಮ ಮನೆಗಳಿಂದ ತಂದು ನೀಡುವುದಿಲ್ಲ, ಆದರೆ ಕೊಟ್ಟಿರುವುದನ್ನು ಇಷ್ಟು ಬಾರಿ ಹೇಳುವುದು ಸರಿಯಲ್ಲ, ಮೂರು ಬಾರಿ ಉಚಿತ ಲಸಿಕೆ ನೀಡಲಾಗಿದೆ, ಒಂದು ಸಲವೂ ನಾವೇ ನಿಮ್ಮನ್ನು ಬದುಕಿಸಿದೆವು ಎಂದು ಹೇಳಿಲ್ಲ ಎಂದು ತಿರುಗೇಟು ನೀಡಿದರು.
ಬಹಿರಂಗ ಚರ್ಚೆಗೆ ಸಿದ್ಧ
ಭಾರತಕ್ಕೆ ಕೋವಿಡ್ ಬಂದರೆ ಗಲ್ಲಿ ಗಲ್ಲಿಯಲ್ಲಿ ಹೆಣ ಬೀಳಲಿದೆ ಎಂದು ವಿದೇಶಿ ಪತ್ರಿಕೆಗಳು ಹೇಳಿದ್ದವು, ಆದರೆ ಅವರ ಕೈಯಲ್ಲಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ ಮಾಡಲಾಯಿತು. ಆರೋಗ್ಯ ಕ್ಷೇತ್ರ ಕಳೆದ 70 ವರ್ಷದಲ್ಲಿ ಆಗಿದ್ದ ಅಭಿವೃದ್ಧಿಯಲ್ಲಿ 5 ಪಟ್ಟು ಹೆಚ್ಚಿನ ಅಬಿವೃದ್ಧಿ ಮಾಡಲಾಗಿದೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧನಿರುವುದಾಗಿ ಆರೋಗ್ಯ ಸಚಿವರು ಸವಾಲು ಹಾಕಿದರು.
438 ನಮ್ಮ ಕ್ಲಿನಿಕ್ ಮಾಡಲಾಗಿದೆ, ಮಹಿಳೆಯರಿಗೆ ವಿಶೇಷ ಕ್ಲಿನಿಕ್ ಗಳನ್ನು ಮಾಡಲಾಗುತ್ತಿದೆ, ಇದರಲ್ಲಿ ಮಹಿಳಾ ವೈದ್ಯರ ಬಳಿ ಮಹಿಳಾ ರೋಗಿಗಳು ತಪಾಸಣೆ ಮಾಡಿಸಿಕೊಳ್ಳಲು ಆಯುಷ್ಮತಿ ಕ್ಲಿನಿಕ್ ತೆರೆಯಲಾಗುತ್ತಿದೆ, ಮುಂದಿನ ವಾರ ಇವು ಆರಂಭವಾಗಲಿದೆ. ಕ್ಷೇತ್ರದಲ್ಲಿ ಶಾಂತಾ ಮೊಬೈಲ್ ಕ್ಲಿನಿಕ್ ಮಾಡಲಾಗಿದೆ. ನಿಮ್ಮ ಗ್ರಾಮಕ್ಕೆ ಬಂದು ನಿಮ್ಮ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡುವ ವಿನೂತನ ಪದ್ಧತಿ ಜಾರಿ ಮಾಡಲಾಗಿದೆ ಎಂದರು.
ಇದಕ್ಕೆ ನಮ್ಮನ್ನು ಸೋಲಿಸಬೇಕಾ ಸಿದ್ದರಮಾಯ್ಯನವರೇ ಎಂದು ಪ್ರಶ್ನಿಸಿದ ಸಚಿವರು, ನಿಮ್ಮ ಯಾತ್ರೆಯಲ್ಲಿ ಮೊದಲು ಜೋಡಿ ಎತ್ತು ಒಂದೇ ಬಸ್ ನಲ್ಲಿ ಹೋಗುವುದಾಗಿ ಹೇಳಿದ್ದಿರಿ, ಒಂದೇ ಬಸ್ ಎರಡು ಡೋರ್ ಮತ್ತು ಎರಡು ಸ್ಟಿಯರಿಂಗ್ ಇದೆ ಎಂದು ಮೊದಲೇ ಹೇಳಿದ್ದೆ. ಅದೇ ರೀತಿಯಲ್ಲಿ ಇಂದಿನಿಂದ ಒಬ್ಬೊಬ್ಬರು ಒಂದೊಂದು ಕಡೆ ಪ್ರಯಾಣಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ಮಾಡಿದ್ದು ಯಡಿಯೂರಪ್ಪನವರು, ಇವರು ತಮ್ಮದೇ ಸಾಧನೆ ಎಂದು ಉದ್ಘಾಟಿಸಿದ್ದಾರೆ. ಅವರ ಕನಸು ಭಗ್ನವಾಗಲಿದೆ. ರೈತರಿಗೆ ಪ್ರತಿ ವರ್ಷ 10 ಸಾವಿರ ನೀಡಲಾಗುತ್ತಿದೆ. ಪ್ರಸ್ತುತ ಬಜೆಟ್ ನಲ್ಲಿ ಮಹಿಳೆಯರಿಗೆ ಈ ಹಿಂದೆ ನೀಡಿಲ್ಲ, ಮುಂದೆ ನೀಡಲ್ಲ ಅಂತಹ ಕೊಡುಗೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಲಿದ್ದಾರೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ನವರ ಟೊಳ್ಳು ಭರವಸೆ 2 ಸಾವಿರ ಮತ್ತು 200 ಯೂನಿಟ್ ಉಚಿತ ವಿದ್ಯುತ್ ಆಗಿದ್ದು, ಈ ಹಿಂದೆ ವಿದ್ಯುತ್ ನೀಡಲಾಗದವರು ಈಗ ಉಚಿತವಾಗಿ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಫೆ.18ಕ್ಕೆ ನಂದಿ ಗ್ರಾಮದಲ್ಲಿ ಶಿವೋತ್ಸವ ಮತ್ತು ಮಾ.5ಕ್ಕೆ ಶ್ರೀನಿವಾಸ ಕಲ್ಯಾಣ ನಡೆಯಲಿದ್ದು ಎಲ್ಲರೂ ಆಗಮಿಸುವಂತೆ ಸಚಿವರು ಮನವಿ ಮಾಡಿದರು.
20,14 ಕೋಟಿ ಸಾಲ ವಿತರಣೆ
ಚಿಕ್ಕಬಳ್ಳಾಪುರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಒಟ್ಟು 405 ಸ್ತ್ರೀ ಶಕ್ತಿ ಸಂಘಗಳಿಂದ 4,505 ಸದಸ್ಯರಿಗೆ ಒಟ್ಟು 20.14 ಕೋಟಿ ಸಾಲದ ಚೆಕ್ ವಿತರಿಸಲಾಯಿತು. 2022 ಮತ್ತು 2023ನೇ ಸಾಲಿನ 173 ಕಾಮಗಾರಿಗಳಲ್ಲಿ ಹಲವು ಉದ್ಘಾಟನೆ ಮತ್ತು ಹಲವು ಶಂಕುಸ್ಥಾಪನೆ ನಡೆಸಲಾಗಿದೆ. ಇವುಗಳ ಒಟ್ಟು ಮೊತ್ತ 86.35 ಕೋಟಿ ಆಗಿದೆ ಎಂದು ಸಚಿವರು ವಿವರಿಸಿದರು.
Chikkaballapur: ಅಮೃತ ಕಾಲದಲ್ಲಿ ಸರ್ವಸ್ಪರ್ಶಿ ಬಜೆಟ್: ಸಚಿವ ಸುಧಾಕರ್
ಸಮಾಜದ ಅಭಿವೃದ್ಧಿ ಅಳತೆ ಮಾಡಲು ಅಂಬೇಡ್ಕರ್ ಅವರು ಹೇಳಿದಂತೆ ಮಹಿಳೆಯರ ಪ್ರಗತಿ ಅಳತೆ ಮಾಡದೆ ಸಾಧ್ಯವಿಲ್ಲ. ಯಾವುದೇ ಕೆಲಸಕ್ಕೆ ಎರಡು ಕೈ ಮುಖ್ಯವಾದಂತೆ, ಪಕ್ಷಿಗೆ ಎರಡು ರೆಕ್ಕೆ ಮುಖ್ಯವಾದಂತೆ ಸಮಾಜಕ್ಕೆ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡುವುದೂ ಮುಖ್ಯ. ದೇಶ ಮತ್ತು ರಾಜ್ಯವನ್ನು ತಾಯಿಗೆ ಹೋಲಿಸಲಾಗಿದೆ. ಪೂಜ್ಯ ಭಾವನೆಗೆ ಸೀಮಿತವಾಗದೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅವರನ್ನು ಮುಖ್ಯವಾಹಿನಿಗೆ ತರುವುದೂ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಅಲ್ಲದೆ ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ಆಂಕರ್ ಬ್ಯಾಂಕ್ ನಿಂದ ಸ್ತ್ರೀ ಶಕ್ತಿ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಎಲ್ಲ ಆಯಾಮಗಳಿಂದ ಸ್ತ್ರಿ ಶಕ್ತಿ ಸಂಘಗಳು ಕಸಬುಗಳಲ್ಲಿ ಮುಂದುವರಿಯಲು ಮುಖ್ಯಮಂತ್ರಿಗಳು ಇಂತಹ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಅವರು ಹೇಳಿದರು.